ಒಂದು ತಿಂಗಳು ಬರುವ ಗ್ಯಾಸ್ ಎರಡು ತಿಂಗಳು ಬರಬೇಕಾ ? ಜಸ್ಟ್ ಹೀಗೆ ಮಾಡಿ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ದಿನಬಳಕೆ ವಸ್ತುಗಳ ಬೆಲೆಯು ಹೆಚ್ಚಾಗುತ್ತಲೇ ಇದೆ. ಅವುಗಳಲ್ಲಿ ಗ್ಯಾಸ್ ಸಿಲಿಂಡರ್ ದರವು ಒಂದು. ಗ್ಯಾಸ್ ಸಿಲಿಂಡರ್ ಬೆಲೆಯೂ ಸ್ಥಿರವಾಗಿ ನಿಲ್ಲುತ್ತಿಲ್ಲ, ದಿನ ಕಳೆದಂತೆ ಬೆಲೆ ಹೆಚ್ಚಳವಾಗುತ್ತಿದೆ. ಇದರಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಹಾಗಂತ ಚಿಂತೆ ಮಾಡ್ತಾ ಕೂತ್ರೆ ಬೆಲೆ ಕಮ್ಮಿ ಆಗೋಲ್ಲ! ಅಲ್ವಾ? ಬೆಲೆ ಕಮ್ಮಿ ಆಗಿಲ್ಲಂದ್ರೆ ಏನಂತೆ, ಗ್ಯಾಸ್ ಉಳಿತಾಯ ಮಾಡಿದರೆ ಆಯ್ತು!! ಹೌದು, ಮಹಿಳಾಮಣಿಗಳಿಗೆ ಮನಿ ಉಳಿತಾಯದ ಜೊತೆಗೆ ಗ್ಯಾಸ್ ಉಳಿತಾಯ ಮಾಡೋದು ಹೇಗೆ ಎಂಬುದನ್ನು ನಾವಿಂದು ತಿಳಿಸುತ್ತೇವೆ. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಬರ್ನರ್ ಶುಚಿಯಾಗಿರಬೇಕು:- ಮನೆಯಲ್ಲಿ ಗ್ಯಾಸ್ ಉಳಿತಾಯವಾಗಬೇಕೆಂದು ಬಯಸುವವರು ಮೊದಲಿಗೆ ಗ್ಯಾಸ್ ಬರ್ನರ್ ಅನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು.
ಅಂದರೆ, ಕನಿಷ್ಟ ಪಕ್ಷ ಮೂರು ತಿಂಗಳಿಗೊಮ್ಮೆ ಆದರೂ ಕೂಡ, ಸರ್ವೀಸ್ ಮಾಡುತ್ತಲೇ ಇರಬೇಕು. ಗ್ಯಾಸ್ ಬರ್ನರ್ ಸರಿಯಾಗಿದೆಯೆ? ಎಂದು ಪತ್ತೆಹಚ್ಚಲು, ಗ್ಯಾಸ್ ಒಲೆಯ ಬೆಂಕಿಯ ಬಣ್ಣವನ್ನು ಗಮನಿಸಿರಿ. ಬೆಂಕಿಯ ಬಣ್ಣ ನೀಲಿ ಬಣ್ಣದಲ್ಲಿದ್ದರೆ, ಬರ್ನರ್ ಸರಿಯಾಗಿದೆ ಎಂದು ಹೇಳಬಹುದು. ಒಂದು ವೇಳೆ ಗ್ಯಾಸ್ ಒಲೆಯ ಬೆಂಕಿಯ ಬಣ್ಣ ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ದರೆ, ಬರ್ನರ್‌ನಲ್ಲಿ ಸಮಸ್ಯೆ ಇದೆ ಎಂದರ್ಥ! ಕೂಡಲೇ ಬರ್ನರ್‌ನ್ನು ಸ್ವಚ್ಛಗೊಳಿಸಿ ಅಥವಾ ಸಾಧ್ಯವಾದರೆ, ಒಮ್ಮೆ ಸರ್ವೀಸ್ ಮಾಡಿಟ್ಟುಕೊಳ್ಳಿ. ಇದರಿಂದ ಅನಾವಶ್ಯಕ ಗ್ಯಾಸ್ ನಷ್ಟವಾಗುವುದು ತಪ್ಪುತ್ತದೆ.
ಕಡಿಮೆ ಜ್ವಾಲೆ:- ಅಡುಗೆ ಮಾಡುವಾಗ ನೆನಪಿನಲ್ಲಿರಬೇಕಾದ ಮುಖ್ಯ ಅಂಶ ಎಂದರೆ ಕಡಿಮೆ ಉರಿಯಲ್ಲಿ ಅಡುಗೆ ಮಾಡುವುದು, ಯಾವುದೇ ಅಡುಗೆಯನ್ನು ಹೆಚ್ಚು ಉರಿಯಲ್ಲಿ ಬೇಯಿಸುವುದರಿಂದ ಆಹಾರ ಪದಾರ್ಥ ಚೆನ್ನಾಗಿ ಬೇಯುವುದಿಲ್ಲ ಮಾತ್ರವಲ್ಲದೇ, ಗ್ಯಾಸ್ ವೇಸ್ಟ್ ಆಗುತ್ತದೆ. ದ್ರವವು ಕುದಿಯಲು ಪ್ರಾರಂಭಿಸಿದಾಗ, ನಿಮ್ಮ ಸ್ಟೌವ್ ಅನ್ನು ಕಡಿಮೆ ಜ್ವಾಲೆಗೆ ಬದಲಾಯಿಸಿ, ಅವುಗಳನ್ನು ಕುದಿಸಲು ಸಾಕು. ಈ ರೀತಿಯಾಗಿ ಅನಿಲದ ವ್ಯರ್ಥವು ಕಡಿಮೆಯಾಗುತ್ತದೆ.
ಗ್ಯಾಸ್ ಪೈಪ್ ಪರಿಶೀಲಿಸಿಕೊಳ್ಳಿ:- ಕೆಲವರು ಕೆಲವೊಂದು ಸಮಯದಲ್ಲಿ ಗ್ಯಾಸ್ ಸ್ವಿಚ್ ಆಫ್ ಮಾಡಲು ಮರೆಯುತ್ತಾರೆ. ಇದರಿಂದ ಕೂಡ ಗ್ಯಾಸ್ ವೆಚ್ಚವಾಗುವುದು. ಆದರೆ ಇಲ್ಲಿ ನೆನಪಿನಲ್ಲಿಡಬೇಕಾದ ವಿಷಯವೆಂದರೆ, ಸ್ವಲ್ಪ ಏಮಾರಿದ್ರೂ ಅದರಿಂದ ಅಪಾಯವು ಕಟ್ಟಿಟ್ಟ ಬುತ್ತಿ! ಹಾಗಾಗಿ ಈ ವಿಷ್ಯದಲ್ಲಿ ಆದಷ್ಟು ಎಚ್ಚರಿಕೆ ವಹಿಸಿ. ಇನ್ನು ಗ್ಯಾಸ್ ಪೈಪ್‌ನಲ್ಲಿ ತೂತು ಆಗಿ ಸೋರಿಕೆ ಆಗುತ್ತಿರ ಬಹುದು. ಆದಷ್ಟು ಬೇಗ ಇದನ್ನು ಗ್ಯಾಸ್ ರಿಪೇರಿ ಮಾಡುವವರ ಬಳಿಯಲ್ಲೇ ತೋರಿಸಿ, ಪೈಪ್‌ನ್ನು ಬದಲಿಸಿ ಕೊಳ್ಳಿ.
ಕುಕ್ಕರ್ ಬಳಸಿ:- ಸಾಮಾನ್ಯವಾಗಿ ಕುಕ್ಕರ್ ಬಳಕೆ ನಮಗೆಲ್ಲಾ ತಿಳಿದೇ ಇದೆ. ಹೀಗಾಗಿ ಆದಷ್ಟು ಅಡುಗೆಗೆ ಕುಕ್ಕರ್ ಬಳಕೆ ಮಾಡಿ. ಅಡುಗೆ ಮಾಡುವಾಗ ಪ್ರೆಶರ್ ಕುಕ್ಕರ್ ಬಳಕೆ ಮಾಡುವುದು ನಿಮ್ಮ ಗ್ಯಾಸ್ ಉಳಿಸಲು ಸಹಾಯ ಮಾಡುತ್ತದೆ. ಈ ಪ್ರೆಶರ್ ಕುಕ್ಕರ್ ಆಹಾರವನ್ನು ವೇಗವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡಲು ಸಹಾಯ ಮಾಡುತ್ತದೆ. ಉದಾಹರಣೆಗೆ ಅನ್ನ ಮಾಡಲು, ತರಕಾರಿ ಬೇಯಿಸಲು, ಚಿಕನ್ ಬೇಯಿಸಲು ಕುಕ್ಕರ್ ಬಳಕೆ ಮಾಡಿ. ಇದರಿಂದ ಅಡುಗೆ ಕೂಡ ಬೇಗ ಆಗುವುದರ ಜೊತೆಗೆ, ಗ್ಯಾಸ್ ಉಳಿತಾಯವಾಗುವುದು.
ಪಾತ್ರೆಗಳಲ್ಲಿ ನೀರಿನಾಂಶವಿರಬಾರದು: ಸಾಮಾನ್ಯವಾಗಿ ಅಡುಗೆ ಮಾಡುವಾಗ ಪಾತ್ರೆಗಳನ್ನು ತೊಳೆದು ನೇರವಾಗಿ ಗ್ಯಾಸ್ ಒಲೆಯ ಮೇಲೆ ಇಟ್ಟುಬಿಡುತ್ತೇವೆ. ಉದಾಹರಣೆಗೆ ಹೇಳುವುದಾದರೆ, ಒಗ್ಗರೆಣೆ ರೆಡಿ ಮಾಡಲು ಬಾಣಲೆಯನ್ನು ತೊಳೆದು, ನೇರವಾಗಿ ಗ್ಯಾಸ್ ಒಲೆಯ ಮೇಲೆ ಇಟ್ಟುಬಿಡುತ್ತೇವೆ! ನೀವು ಈ ರೀತಿಯಾಗಿ ಮಾಡುತ್ತಿದ್ದೀರಾ? ಹಾಗಾದರೆ, ಈಗಲೇ ಬಿಟ್ಟುಬಿಡಿ! ಈ ಒಂದು ತಪ್ಪಿನಿಂದಾಗಿ ಗ್ಯಾಸ್ ಜಾಸ್ತಿ ಖರ್ಚಾಗಿಬಿಡುತ್ತದೆ ಎಂದರೆ ನಂಬುತ್ತೀರಾ? ನಂಬಲೆಬೇಕು. ಹೌದು, ಪಾತ್ರೆಗಳನ್ನು ತೊಳೆದು, ನೇರವಾಗಿ ಗ್ಯಾಸ್ ಒಲೆಯ ಮೇಲೆ ಇಡುವ ಬದಲು, ಮೊದಲಿಗೆ ಪಾತ್ರೆ ಯನ್ನು ತೊಳೆದ ಬಳಿಕ, ಶುದ್ಧ ಬಟ್ಟೆ (ಕಿಚನ್ ಟವೆಲ್) ಬಳಸಿ ಒರೆಸಿಕೊಳ್ಳಿ. ಇದರಿಂದ ಪಾತ್ರೆ ಬೇಗ ಬಿಸಿ ಆಗುವುದು ಹಾಗೂ ಗ್ಯಾಸ್ ವೆಚ್ಚವಾಗುವುದು ಕೂಡ ತಪ್ಪುತ್ತದೆ.
ಧಾನ್ಯಗಳು ಹಾಗೂ ಅಕ್ಕಿಯನ್ನು ನೆನೆಸಿಡಿ:- ನಮಗೆಲ್ಲಾ ತಿಳಿದಿರುವಂತೆ ಧಾನ್ಯಗಳು ಬೇಗನೆ ಬೆಯ್ಯುವುದಿಲ್ಲ. ಹೀಗಾಗಿ ಅಡುಗೆ ರೆಡಿ ಮಾಡುವ ಮುನ್ನ ಕನಿಷ್ಠ ಪಕ್ಷ ಒಂದು ಗಂಟೆಯಾದರೂ ಧಾನ್ಯಗಳು ಅಥವಾ ಅಕ್ಕಿಯನ್ನು (ಉದಾಹರಣೆಗೆ ಕೆಂಪಕ್ಕಿ ಅಥವಾ ಕುಚ್ಚಲಕ್ಕಿ) ನೀರಿನಲ್ಲಿ ನೆನೆಯಲು ಹಾಕಿ. ಇದರಿಂದ ಅನ್ನ ಅಥವಾ ಧಾನ್ಯಗಳು ಅಥವಾ ಕಡಲೆ ಕಾಳುಗಳನ್ನು ಬಹು ಬೇಗನೇ ಬೇಯಿಸಬಹುದು ಹಾಗೂ ಗ್ಯಾಸ್ ಖರ್ಚಾಗುವುದನ್ನು ತಡೆಯಬಹುದು.