SSLC Annual Exam 2023: ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳೇ ಗಮನಿಸಿ | ಪ್ರವೇಶ ಪತ್ರ ತಿದ್ದುಪಡಿಗೆ ಅವಕಾಶ
ಎಸೆಸೆಲ್ಸಿ ವಿದ್ಯಾರ್ಥಿಗಳು ಗಮನಿಸಬೇಕಾದ ಮುಖ್ಯವಾದ ಮಾಹಿತಿ ಇದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2023ರ ಮಾರ್ಚ್ ತಿಂಗಳಿನಲ್ಲಿ ಎಸ್ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಾಗಿ ರಾಜ್ಯದ ಶಾಲಾ, ಕಾಲೇಜುಗಳಿಂದ ಹಾಜರಾಗುವ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಮತ್ತೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ.
2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪ್ರಕಟಿಸಿದ್ದು, ಈ ಕುರಿತು ಸುತ್ತೋಲೆಯನ್ನು ಹೊರಡಿಸಿರುವ ಮಂಡಲಿ, 2023ರ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.2023 ಮಾರ್ಚ್ / ಏಪ್ರಿಲ್ ತಿಂಗಳಿನಲ್ಲಿ ನಡೆಯುವ 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನತ್ಯೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ, ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ, ಪುನರಾವರ್ತಿತ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ವಿವರಗಳಲ್ಲಿ ಏನಾದರೂ ತಿದ್ದುಪಡಿಗಳಿದ್ದಲ್ಲಿ ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು ಅವಕಾಶ ನೀಡಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ, https://kseab.karnataka.gov.in ಮೂಲಕ ಪ್ರವೇಶ ಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಯಾ ಶಾಲೆಯ ಮುಖ್ಯಸ್ಥರು ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬೇಕಾಗಿದ್ದು, ತಾತ್ಕಾಲಿಕ ಪ್ರವೇಶ ಪತ್ರದಲ್ಲಿ 8 ಅಂಶಗಳಲ್ಲಿ ತಿದ್ದುಪಡಿಗಳನ್ನು ಮಾಡಲು ಅನುವು ಮಾಡಿಕೊಡಲಾಗಿದೆ.
ತಿದ್ದುಪಡಿಯ ಬಳಿಕ ಪರಿಷ್ಕೃತ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಧರ್ಮ ಮತ್ತು ಲಿಂಗ ಇವುಗಳಲ್ಲಿ ಯಾವುದಾದರು ತಿದ್ದುಪಡಿಗಳಿದ್ದಲ್ಲಿ, ಖಾಸಗಿ ವಿದ್ಯಾರ್ಥಿಗಳು ವಿವರಗಳನ್ನು ನೇರವಾಗಿ ತಿದ್ದುಪಡಿ ಮಾಡಬಹುದು. ಇದರ ಜೊತೆಗೆ ಶಾಲಾ ವಿದ್ಯಾರ್ಥಿಗಳ ವಿವರಗಳನ್ನು ಮಂಡಲಿಯ ಜಾಲತಾಣದಲ್ಲಿ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ ಎಂಬುದನ್ನು ಗಮನಿಸಬೇಕು. ವಿದ್ಯಾರ್ಥಿಗಳು ಮೊದಲು ಎಸ್.ಎ.ಟಿ.ಎಸ್ ಡೇಟಾಬೇಸ್‌ನಲ್ಲಿ ತಿದ್ದುಪಡಿ ಮಾಡಿದ ಬಳಿಕ ಮಂಡಲಿಯ ಶಾಲಾ ಲಾಗಿನ್‌ನಲ್ಲಿ ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತದೆ. ಮುಖ್ಯ ಶಿಕ್ಷಕರ ಹಂತದಲ್ಲಿ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ತಿದ್ದುಪಡಿ ಮಾಡಲು 19-02-2023 ಅಂತಿಮ ದಿನಾಂಕವಾಗಿದೆ.
ಮೇಲ್ಕಂಡ ಈ ಅಂಶಗಳನ್ನು ಹೊರತುಪಡಿಸಿ ಭಾಷೆ/ವಿಷಯ, ಮಾಧ್ಯಮ, ದೈಹಿಕ ಸ್ಥಿತಿ ಹಾಗೂ ಸಾಮಾಜಿಕ ಪ್ರವರ್ಗಗಳಲ್ಲಿ ಯಾವುದಾದರೂ ಬದಲಾವಣೆಗಳಿದ್ದಲ್ಲಿ ಮಂಡಲಿಯಲ್ಲಿನ ಸಂಬಂಧಿಸಿದ ಜಿಲ್ಲೆಯ ಶಾಖಾಧಿಕಾರುಗಳಿಗೆ ಲಿಖಿತವಾಗಿ ಮನವಿ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲನೆ ನಡೆಸಿದ ಬಳಿಕ ಅಂತಿಮಗೊಳಿಸಲು ಇದು ಕೊನೆಯ ಅವಕಾಶವಾಗಿದ್ದು, ಇದೇ ವಿವರಗಳು ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರ ಹಾಗೂ ಅಂಕಪಟ್ಟಿಗಳಲ್ಲಿ ನಮೂದಾಗುವ ಹಿನ್ನೆಲೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ಮುಖ್ಯ ಶಿಕ್ಷಕರನ್ನೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸೂಚನೆ ನೀಡಲಾಗಿದೆ.