1.2ಲೀ ಪೆಟ್ರೋಲ್ ಇಂಜಿನ್ ಹೊಂದಿರುವ ನೂತನ ಕಾರಿನ ಗುಣ, ವಿನ್ಯಾಸ ಆಕರ್ಷಕ ! ಈ ಕಾರಿನ ಪರ್ಫಾಮೆನ್ಸ್, ಮೈಲೇಜ್ ಎಷ್ಟು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ
ಹೊಸ ಹೊಸ ಕಾರುಗಳು ನವ ನವೀನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇದೆ. ಇದೀಗ ಜನಪ್ರಿಯ ಫ್ರೆಂಚ್ ಕಾರು ತಯಾರಕ ಕಂಪನಿಯು ಸಿಟ್ರಿಯನ್ ಸಿ3 ಯೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಸಿಟ್ರಿಯನ್ ಕಂಪನಿಯು ಭಾರತಕ್ಕೆ ಬಂದ ತಕ್ಷಣ ಬಿಡುಗಡೆ ಮಾಡಿದ ಮೊದಲ ಕಾರು ಸಿಟ್ರಿಯನ್ ಸಿ5 ಏರ್‌ಕ್ರಾಸ್. ಇದೀಗ ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುವ ತವಕದಲ್ಲಿರುವ ಕಂಪನಿಯು ಈ ಹೊಸ ಮಾಡೆಲ್ ಕಾರನ್ನು ಗ್ರಾಹಕರಿಗೆ ಪರಿಚಯಿಸಿದೆ. ನೋಡಲು ಸಿ5 ಏರ್‌ಕ್ರಾಸ್ ವಿನ್ಯಾಸವನ್ನೇ ಹೋಲುವಂತಿದ್ದರೂ ಆಕಾರ, ಎತ್ತರ, ದೃಢಕಾಯ, ವಿನ್ಯಾಸ ಎಲ್ಲದರಲ್ಲೂ ಸಿ3 ವಿಭಿನ್ನ, ವೈಶಿಷ್ಟ್ಯದಿಂದ ಕೂಡಿದ್ದು ಆಕರ್ಷಕವಾಗಿ ಹೊರಹೊಮ್ಮಿದೆ.
ಸಿಟ್ರಿಯನ್ ಸಿ3 ಕಾರು 3,981 ಮಿಮೀ ಉದ್ದ, 1733 ಮಿಮೀ ಅಗಲ ಮತ್ತು 1604 ಮಿಮೀ ಎತ್ತರದಿಂದ ಕೂಡಿದ್ದು ದೈತ್ಯವಾಗಿದೆ. ಎರಡು ಬಣ್ಣಗಳಲ್ಲಿ ಕಂಗೊಳಿಸುವ ಸಿ3ಯ ಹೊರಾಂಗಣ ವಿನ್ಯಾಸವು ಅದ್ಭುತವಾಗಿದೆ. 1.2ಲೀ ಪೆಟ್ರೋಲ್ ಇಂಜಿನ್ ಮತ್ತು 1.2 ಲೀ ಟರ್ಬೋ ಪೆಟ್ರೋಲ್ ಇಂಜಿನ್ ಎಂಬ ಎರಡು ಆಯ್ಕೆಗಳಲ್ಲಿ ಈ ಕಾರು ಲಭ್ಯವಿದೆ. 1.2 ಲೀ ಸಾಮರ್ಥ್ಯದ ಸಾಮಾನ್ಯ ಪೆಟ್ರೋಲ್ ಇಂಜಿನ್‌ನಲ್ಲಿ 5 ಗೇರ್ ಇರುವ, ಈ ಮಾದರಿಯಲ್ಲಿ 5 ಹಂತದ ಕಾರುಗಳು ಸಿಗುತ್ತವೆ. ಮೊದಲೆರಡು ಹಂತದ ಸಿ3 2ಪಿ ಲೈವ್ ವೇರಿಯಂಟ್‌ಗಳು ಪ್ರಾರಂಭಿಕ ಹಂತದವು. ಇನ್ನುಳಿದ ಮೂರು ಕಾರುಗಳು ಸಿ3 2ಪಿ ಫೀಲ್ ಎಂಬ ಹೆಸರಿನ ವೇರಿಯಂಟ್‌ಗಳು. ಇವುಗಳು ಸ್ವಲ್ಪ ಅಡ್ವಾನ್ಸ್ ಡ್ ವೇರಿಯಂಟ್‌ಗಳು. ಟರ್ಬೋ ಪೆಟ್ರೋಲ್ ಇಂಜಿನ್‌ನಲ್ಲಿ ಒಂದು ಮಾದರಿ ಮಾತ್ರ ಇದ್ದು, ಈ ಕಾರಲ್ಲಿ 6 ಗೇರ್ ಇದೆ. ಇದರ ಪವರ್ ಕೂಡ ಜಾಸ್ತಿ.
ಒಳಾಂಗಣ ವಿಶಾಲವಾಗಿದ್ದು, 5 ಮಂದಿ ಆರಾಮ ಪ್ರಯಾಣ ಮಾಡಬಹುದಾಗಿದೆ. ಹಿಂದಿನ ಸೀಟಿನಲ್ಲಿ ಆರಡಿ ಮನುಷ್ಯರು ಕುಳಿತರೂ ಕಾಲು ಉಸಿರಾಡುವಂತೆ ಆರಾಮದಾಯಕವಾಗಿ ಕೂರುವಷ್ಟು ಸ್ಥಳವಿದೆ. ದೂರದೂರಿಗೆ ಮತ್ತು ಸ್ವಂತ ಊರಿಗೆ ಆಗಾಗ ಪ್ರಯಾಣ ಬೆಳೆಸುವವರಿಗೆ ಇದು ಎಕ್ಷ್ಟ್ರಾ ಖುಷಿಯನ್ನು ನೀಡುವುದಂತು ಖಂಡಿತ.
ಹೊರಾಂಗಣ ವಿನ್ಯಾಸವನ್ನು ನೋಡುವುದಾದರೆ, ಕಾರಿನ ಕೆಳಭಾಗದಲ್ಲಿ ಸುತ್ತಲೂ ಕಪ್ಪು ಬಣ್ಣದ ಫೈಬರ್ ಬಳಸಿದ್ದಾರೆ. ಒಳ ರಸ್ತೆ, ಕಲ್ಲು ಮಣ್ಣು ರಸ್ತೆಯಲ್ಲಿ ಸುತ್ತಾಡುವವರಿಗೆ ಈ ವಿನ್ಯಾಸದಿಂದ ಬಹು ಉಪಕಾರ ಆಗಲಿದೆ. ಪದೇ ಪದೇ ಸ್ಕ್ರಾಚ್ ಆಗುವುದು ತಪ್ಪುತ್ತದೆ. ಕಾರಿನ ಒಳ ಭಾಗದಲ್ಲಿ ಮನರಂಜನೆಗೆ 10 ಇಂಚಿನ ಇನ್ ಫೋಟೇನ್‌ಮೆಂಟ್ ಉಪಕರಣ ಇದ್ದು, ಬ್ಲೂಟೂಥ್ ಸುಲಭವಾಗಿ ಕನೆಕ್ಟ್ ಆಗುತ್ತದೆ.
ದೊಡ್ಡದಾದ, ಸುಂದರವಾದ, ಹೊಸ ಫಿಚರನ್ನೊಳಗೊಂಡ ಎಸ್‌ಯುವಿ ಮಾದರಿಯ ಸಿಟ್ರಿಯನ್ ಸಿ3 ಯ ಆರಂಭಿಕ ಬೆಲೆ (ಎಕ್ಸ್ ಶೋರೂಮ್) ರೂ. 5,70,500 ಲಕ್ಷ. ಈ ಕಾರು, ಸಾಂಪ್ರದಾಯಿಕ ಡ್ರೈವಿಂಗ್ ಮೆಚ್ಚುವ ಮಂದಿಯ ಒಲವನ್ನು ಸಂಪಾದಿಸುವಂತಿದೆ. ಡ್ರೈವಿಂಗ್, ಆರಾಮ, ಸ್ಥಳಾವಕಾಶ ಎಲ್ಲವನ್ನೂ ಗಮನಿಸಿದರೆ ಆ ಉದ್ದೇಶದಲ್ಲಿ ಸಿಟ್ರನ್ ಸಿ3 ಸಫಲವಾಗಿದೆ.