ಗೋಧಿ ಹಿಟ್ಟು ಕೇವಲ ರೂ.29 ಗೆ ಖರೀದಿಸಿ – ಕೇಂದ್ರದಿಂದ ಮಹತ್ವದ ಘೋಷಣೆ

ಗೋದಿ ಬೆಲೆ ಹೆಚ್ಚಳದಿಂದ ಗೋದಿ ಹಿಟ್ಟಿನ ಬೆಲೆಯೂ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರು ಆತಂಕ ಪಡುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಯೋಚಿಸಿದ್ದು, ಗೋಧಿ ಹಿಟ್ಟಿನ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದೆ.

ಕೇಂದ್ರೀಯ ಭಂಡಾರಗಳಂತಹ ಸರ್ಕಾರಿ ಮಳಿಗೆಗಳಲ್ಲಿ ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ಗೋದಿ ಹಿಟ್ಟು ಲಭ್ಯವಾಗುವಂತೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಕೇಂದ್ರೀಯ ಭಂಡಾರದಲ್ಲಿ ಪ್ರತಿ ಕೆ.ಜಿ.ಗೆ ಕೇವಲ 29.50 ರೂ.ಯಲ್ಲಿ ಗೋಧಿ ಹಿಟ್ಟು ಲಭ್ಯವಾಗಲಿದೆ.

ಈ ಗೋದಿ ಹಿಟ್ಟು ಭಾರತ್ ಅಟ್ಟಾ ಬ್ರಾಂಡ್‌ನದ್ದಾಗಿದ್ದು, ಹಿಟ್ಟಿನ ಬೆಲೆಯ ಹೆಚ್ಚಳವನ್ನು ಗಮನಿಸಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಹಾಗೂ ಹಿಟ್ಟಿನ ಪೂರೈಕೆಯನ್ನು ಹೆಚ್ಚಿಸಲು ಸೂಚನೆ ನೀಡಿದೆ. ಈ ಹಿಟ್ಟನ್ನು ಜನರಿಗೆ ಮೊಬೈಲ್ ವ್ಯಾನ್‌ಗಳ ಮೂಲಕ ಕೂಡ ತಲುಪಿಸುವ ವ್ಯವಸ್ಥೆ ಇದೆ ಎಂದು ಆಹಾರ ಕಾರ್ಯದರ್ಶಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ, ಸಹಕಾರಿ ಸಂಸ್ಥೆಗಳು, ಸರ್ಕಾರಿ ಪಿಎಸ್‌ಯುಗಳು, ಕೇಂದ್ರೀಯ ಭಂಡಾರ, ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್‌ನಂತಹ ಒಕ್ಕೂಟಗಳಿಗೆ 3 ಲಕ್ಷ ಟನ್ ಗೋಧಿ ಹಿಟ್ಟನ್ನು ಕೆಜಿಗೆ 23.50 ರೂ ದರದಲ್ಲಿ ಕಾಯ್ದಿರಿಸಿದ್ದು, ಭಾರತ್ ಗೋಧಿ ಹಿಟ್ಟನ್ನು ಸರ್ಕಾರಿ ಮಳಿಗೆಗಳಲ್ಲಿ ಕೆಜಿಗೆ ಗರಿಷ್ಠ 29.50 ರೂ.ಗೆ ಮಾರಾಟ ಮಾಡಲಿದೆ. ಅಲ್ಲದೆ, ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಗ್ರಾಹಕರಿಗೆ ಪ್ರತಿ ಕೆಜಿಗೆ 29.50 ರೂ.ಯಂತೆ ಹಿಟ್ಟನ್ನು ಮಾರಾಟ ಮಾಡಲಾಗುತ್ತದೆ. ಫೆಬ್ರವರಿ 6 ರಿಂದ, ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಕೂಡಾ ಇದೇ ದರದಲ್ಲಿ ಹಿಟ್ಟು ಮಾರಾಟ ಮಾಡಲಿದೆ ಎನ್ನಲಾಗಿದೆ.

ಹೆಚ್ಚಳವಾಗಿರುವ ಗೋದಿ ಬೆಲೆಯಿಂದ ಜನಸಾಮಾನ್ಯರು ಚಿಂತೆಗೀಡಾಗಿದ್ದು, ಇದನ್ನು ಪರಿಹರಿಸಲು ಹಾಗೂ ಗೋಧಿ ಬೆಲೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗೋಧಿ ಹರಾಜು ಪ್ರಕ್ರಿಯೆ ಆರಂಭಿಸಿದೆ. ಈ ಹರಾಜಿನ ಮೊದಲ ದಿನವೇ 22 ರಾಜ್ಯಗಳಲ್ಲಿ 8.88 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟವಾಗಿದೆ. ಮಾರ್ಚ್ ಎರಡನೇ ವಾರದವರೆಗೆ, ಇ-ಹರಾಜು ಮೂಲಕ ಗೋಧಿ ಮಾರಾಟವು ದೇಶಾದ್ಯಂತ ಪ್ರತಿ ಬುಧವಾರ ನಡೆಯುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.