Scholarship : ವಿದ್ಯಾರ್ಥಿಗಳೇ ಗಮನಿಸಿ, ಫೆಬ್ರವರಿಯಲ್ಲಿ ಅಪ್ಲೈ ಮಾಡಬಹುದಾದ ವಿದ್ಯಾರ್ಥಿ ವೇತನದ ಸಂಪೂರ್ಣ ವಿವರ ಇಲ್ಲಿದೆ
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಹೆತ್ತವರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಸ್ಕಾಲರ್‌ಶಿಪ್ ಮೂಲಕ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ನಿರತರಾಗಿದ್ದಾರೆ. ಇನ್ನು ಫೆಬ್ರವರಿ ಹಾಗೂ ಮಾರ್ಚ್ ಅವಧಿಯಲ್ಲಿ ಯಾವೆಲ್ಲಾ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.
ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್ :
ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ, ಆರ್ಥಿಕ ಸಹಕಾರಿಯಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಈ ವಿದ್ಯಾರ್ಥಿ ವೇತನಕ್ಕೆ ನೀವು ಫೆಬ್ರವರಿಯಲ್ಲಿ ಅಪ್ಲೈ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-03-2023 ಆಗಿದ್ದು, ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರ ಲಭ್ಯವಾಗುತ್ತದೆ. ಇನ್ನು ಈ ಸ್ಕಾಲರ್‌ಶಿಪ್ ಪಡೆಯಲು ಕೆಲವೊಂದು ಅರ್ಹತೆಗಳು ಇರಬೇಕು. ಯಾವುದೆಲ್ಲಾ ಎಂಬುದರ ವಿವರ ಇಲ್ಲಿದೆ.
ವಿದ್ಯಾರ್ಥಿ ವೇತನ ಪಡೆಯಲು ಯಾವೆಲ್ಲಾ ಅರ್ಹತೆಗಳಿರಬೇಕು ?
- ಅರ್ಜಿದಾರರು ಪದವೀಧರರಾಗಿರಬೇಕು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ಅಥವಾ ಅವರಿಗೆ ಕ್ರೀಡಾ ತರಬೇತಿ ನೀಡುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರಬೇಕು.
- ಕ್ರಿಡಾಪಟುಗಳಿಗೆ ಅರ್ಜಿದಾರರು ಕಳೆದ 2, 3 ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ/ದೇಶವನ್ನು ಪ್ರತಿನಿಧಿಸಿರಬೇಕು.
- ಅಲ್ಲದೆ, ಅವರು ರಾಷ್ಟ್ರೀಯ ಶ್ರೇಯಾಂಕದಲ್ಲಿ 500 ರೊಳಗೆ ಸ್ಥಾನ ಪಡೆದಿರಬೇಕು. ಮತ್ತು ರಾಜ್ಯ ಶ್ರೇಯಾಂಕದಲ್ಲಿ 100 ರೊಳಗೆ ಸ್ಥಾನ ಪಡೆದಿರಬೇಕು.
- 9 ರಿಂದ 20 ವರ್ಷ ವಯಸ್ಸಿನವರಾಗಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ INR 5 ಲಕ್ಷಗಳಿಗಿಂತ ಕಡಿಮೆಯಿರಬೇಕು. ಮೂರು ವರ್ಷಗಳ ವರೆಗೆ INR 75 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
JN ಟಾಟಾ ಎಂಡೋಮೆಂಟ್ ಲೋನ್ ವಿದ್ಯಾರ್ಥಿವೇತನ 2023-24 :
ಜೆಎನ್ ಟಾಟಾ ಎಂಡೋಮೆಂಟ್ ವಿದೇಶದಲ್ಲಿ ಉನ್ನತ ಅಧ್ಯಯನವನ್ನು ಮುಂದುವರಿಸುವಂತಹ ಭಾರತೀಯ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಲೋನ್ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ವಿದೇಶಕ್ಕೆ ಉನ್ನತ ಶಿಕ್ಷಣಕ್ಕೆ ತೆರಳಲಿರುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಈ ಲೋನ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಿ, ಇದು ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಿ, ವಿದೇಶಕ್ಕೆ ತೆರಳಲು ಸಹಕಾರಿಯಾಗಿದೆ. ಇಲ್ಲಿ ಕೂಡ ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರವೇ ಲಭ್ಯ. ಆದರೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳು ಇರಬೇಕಿದೆ.
ಇರಬೇಕಾದ ಅರ್ಹತೆಗಳು :
- ಕನಿಷ್ಠ ಒಂದು ಪದವಿಪೂರ್ವ ಪದವಿಯನ್ನು ಪೂರ್ಣಗೊಳಿಸಿರಬೇಕು.
- ಭಾರತೀಯ ಪ್ರಜೆ ಅಥವಾ ಭಾರತದಲ್ಲಿನ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಯಾವುದೇ ಪದವಿಪೂರ್ವ ಕೋರ್ಸ್ನ ಕೊನೆ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರವೇ ಈ ವಿದ್ಯಾರ್ಥಿವೇತನ ಲಭಿಸುತ್ತದೆ.
- ಅರ್ಜಿದಾರರು ವಿದೇಶದಲ್ಲಿ ಸ್ನಾತಕೋತ್ತರ / ಡಾಕ್ಟರೇಟ್ / ಪೋಸ್ಟ್‌ಡಾಕ್ಟರಲ್ ಅಧ್ಯಯನಗಳನ್ನು ಮುಂದುವರಿಸಲು ಸಿದ್ಧರಿರಬೇಕು. ಆಸಕ್ತ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ, ವಿದ್ಯಾರ್ಥಿವೇತನ ನಿಮ್ಮದಾಗಿಸಿ.