of your HTML document.

ಬೆಳಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿದರೆ ಇಷ್ಟೆಲ್ಲಾ ಪ್ರಯೋಜನ ಪಡೆಯುವಿರಿ

ನಮ್ಮ ದೇಹದ ಮುಕ್ಕಾಲು ಪಾಲು ನೀರಿನಿಂದಲೇ ತುಂಬಿದೆ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರಮುಖ ಆಹಾರ ಪದಾರ್ಥಗಳಲ್ಲಿ ನೀರು ಪ್ರಮುಖವಾದದ್ದು. ಸಂಶೋಧನೆಯ ಪ್ರಕಾರ ನೀರಿಲ್ಲದೆ ನಾವು ಹೆಚ್ಚು ದಿನಗಳು ಬದುಕಲು ಸಾಧ್ಯವಿಲ್ಲ. ಯಾವುದಾದರೂ ಒಂದು ರೂಪದಲ್ಲಿ ನೀರಿನ ಅಂಶವನ್ನು ನಾವು ನಮ್ಮ ದೇಹಕ್ಕೆ ಅಗತ್ಯವಾಗಿ ಸೇರಿಸಲೇಬೇಕು. ಒಟ್ಟಾರೆಯಾಗಿ ನಮ್ಮ ದೇಹಕ್ಕೆ ನಿರ್ಜಲೀಕರಣದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲೇ ಬೇಕು .

ಬೆಳಗ್ಗೆ ಎದ್ದ ತಕ್ಷಣ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಬೆಡ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದು ದೇಹಕ್ಕೆ ಆರೋಗ್ಯಕರ ಎಂದು ಹೇಳಲು ಆಗುವುದಿಲ್ಲ. ನಮ್ಮ ದೇಹದಿಂದ ವಿಷಕಾರಿ ಅಂಶಗಳು ದೂರವಾಗಬೇಕು ಎಂದರೆ ನಾವು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರು ಸೇವನೆ ಮಾಡಬೇಕು. ಇದು ನಮ್ಮ ಕರುಳಿನ ಸ್ವಚ್ಛತೆಯಲ್ಲಿ ಅನುಕೂಲವಾಗುವ ಜೊತೆಗೆ ನಮ್ಮ ದೇಹ ವಿಷಕಾರಿ ಅಂಶಗಳಿಂದ ಮತ್ತು ಕಾಯಿಲೆಯಿಂದ ಮುಕ್ತವಾಗುತ್ತದೆ.
ಆದ್ದರಿಂದ ಕಾಫಿ ಮತ್ತು ಚಹಾ ಕುಡಿಯುವ ಮೊದಲು ಒಂದು ಗ್ಲಾಸ್ ನೀರನ್ನು ತಪ್ಪದೆ ಕುಡಿಯಿರಿ.

ಮುಖ್ಯವಾಗಿ ವೈದ್ಯರು ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯುವಂತೆ ಶಿಫಾರಸು ಮಾಡುತ್ತಾರೆ. ಆಯುರ್ವೇದದ ಪ್ರಕಾರ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಸೂಕ್ತ. ಏಕೆಂದರೆ ಅದು ದೇಹವನ್ನು ಒಳಗಿನಿಂದ ಗುಣಪಡಿಸುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.

ಬೆಳಗ್ಗೆ ಎದ್ದ ನಂತರ ಹಲ್ಲುಜ್ಜದೇ ನೀರು ಕುಡಿಯಬೇಕಾ ಅಥವಾ ಹಲ್ಲುಜ್ಜಿ ನೀರು ಕುಡಿಯಬೇಕಾ ಎಂಬ ಗೊಂದಲ ನಿಮ್ಮಲ್ಲಿ ಇರಬಹುದು. ಮುಖ್ಯವಾಗಿ ತಜ್ಞರ ಪ್ರಕಾರ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜೀರ್ಣ ಶಕ್ತಿ ಬಲಗೊಳ್ಳುತ್ತದೆ. ದಿನದಲ್ಲಿ ಏನು ತಿಂದರೂ ಚೆನ್ನಾಗಿ ಜೀರ್ಣವಾಗುತ್ತದೆ. ಇದಲ್ಲದೇ ಹಲ್ಲುಜ್ಜದೆ ನೀರು ಕುಡಿಯುವುದರಿಂದ ಹಲವಾರು ರೋಗಗಳು ನಿವಾರಣೆಯಾಗುತ್ತವೆ ಎಂದು ತಿಳಿಸಲಾಗಿದೆ.

ಬೆಳಗ್ಗೆ ನೀರು ಕುಡಿಯುವುದರಿಂದಾಗುವ ಹಲವಾರು ಪ್ರಯೋಜನಗಳಿವೆ :

  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಚರ್ಮವೂ ಆರೋಗ್ಯಕರವಾಗಿರುತ್ತದೆ.
  • ಹಲ್ಲುಜ್ಜದೆ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ನೀವು ಆಗಾಗ್ಗೆ ಶೀತ, ಕೆಮ್ಮಿನಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಹಲ್ಲುಜ್ಜದೆ ನೀರನ್ನು ಕುಡಿಯಿರಿ. ಉದ್ದ, ದಪ್ಪ ಕೂದಲು ಮತ್ತು ಹೊಳೆಯುವ ಚರ್ಮಕ್ಕಾಗಿ, ಹಲ್ಲುಜ್ಜದೆ ಬೆಳಗ್ಗೆ ನೀರನ್ನು ಕುಡಿಯಬೇಕು.
  • ಮಲಬದ್ಧತೆ, ಬಾಯಿ ಹುಣ್ಣು, ಹುಳಿತೇಗು ಸಮಸ್ಯೆಯೂ ಇದರಿಂದ ದೂರವಾಗುತ್ತದೆ. ಬಾಯಿ ದುರ್ವಾಸನೆ ಇರುವವರು ಬೆಳಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚನೆಯ ನೀರನ್ನು ಕುಡಿಯಬೇಕು.
  • ಲಾಲಾರಸದ ಕೊರತೆಯಿಂದಾಗಿ ನಮ್ಮ ಬಾಯಿ ಒಣಗುತ್ತದೆ ಮತ್ತು ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಬಾಯಿಯಿಂದ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಪ್ರತಿ ದಿನ ಬೆಳಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚನೆಯ ನೀರನ್ನು ಕುಡಿಯಬೇಕು ಎಂದು ತಜ್ಞರು ತಿಳಿಸಿದ್ದಾರೆ.

ಮುಖ್ಯವಾಗಿ ನಮ್ಮ ದೇಹ ವಾತ, ಕಫ ಮತ್ತು ಪಿತ್ತ ದೋಷಗಳಿಂದ ಆವರಿಸುವ ಮುಂಜಾಗೃತವಾಗಿ ಇವುಗಳ ಸಮತೋಲನದ ಸಲುವಾಗಿ ಕೆಲವೊಂದು ಖನಿಜಾಂಶಗಳನ್ನು ನಮ್ಮ ದೇಹಕ್ಕೆ ಸೇವಿಸಬೇಕಾಗಿ ಬರುತ್ತದೆ. ಇದರಿಂದ ಎಲ್ಲಾ ಆಯಾಮಗಳಲ್ಲಿ ನಮ್ಮ ದೇಹ ಸಮತೋಲನಗೊಂಡು ನಾವು ಆರೋಗ್ಯವಾಗಿರುವಂತೆ ಸಹಾಯ ಮಾಡುವುದೇ ಬೆಳಗೆ ನಾವು ಸೇವಿಸುವ ನೀರಿನಿಂದ ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.