ಭಾರತದ ಸಿನಿಮಾ ಮಾಡುವವರು ದಕ್ಷಿಣ ಭಾರತದವರು, ಬಾಲಿವುಡ್‌ ಮಂದಿ ಅಲ್ಲ | ʼಪಠಾಣ್‌ʼ ಹಿಟ್‌ ತಾತ್ಕಾಲಿಕ – ಅನುರಾಗ್‌ ಕಶ್ಯಪ್‌

ಚಿತ್ರರಂಗದಲ್ಲಿ ಒಂದಲ್ಲ ಒಂದು ವಿಚಾರಗಳಿಗೆ ಚರ್ಚೆ ನಡೆಯುತ್ತಲೇ ಇರುತ್ತವೆ. ಸದ್ಯ ಅಂತಹದೇ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಭಾರತದ ಸಿನಿಮಾ ಮಾಡುವವರು ದಕ್ಷಿಣ ಭಾರತದವರು, ಬಾಲಿವುಡ್‌ ಮಂದಿ ಅಲ್ಲ ಎಂದಿದ್ದಾರೆ. ಜೊತೆಗೆ ʼಪಠಾಣ್‌ʼ ಹಿಟ್‌ ತಾತ್ಕಾಲಿಕ ಅಂತಾನೂ ಹೇಳಿದ್ದಾರೆ. ಅವರು ಈ ರೀತಿ ಯಾಕೆ ಹೇಳಿರಬಹುದು?

ದಕ್ಷಿಣ ಭಾರತ ಸಿನಿಮಾಗಳು ಹಿಂದೆ ಮತ್ತು ಇಂದು ಕೂಡ ತಮ್ಮ ನೆಲದ ಕತೆಯನ್ನೇ ಹೇಳುತ್ತವೆ, ಭಾರತದ ಸಿನಿಮಾಗಳಂತೆ ಕಾಣುತ್ತವೆ. ಆದರೆ ಬಾಲಿವುಡ್‌ನ ಹಲವು ಹಿಂದಿ ಸಿನಿಮಾಗಳು ಭಾರತದ ಸಿನಿಮಾಗಳಂತೆ ಕಾಣೋದಿಲ್ಲ. ಈ ಕಾರಣಕ್ಕಾಗಿಯೇ RRR ನಂತಹ ಭಾರತದ ನೆಲದ ಕತೆಯನ್ನೊಳಗೊಂಡ ಸಿನಿಮಾ ಪ್ರೇಕ್ಷಕರಿಗೆ ಅಚ್ಚರಿ ಹುಟ್ಟಿಸುತ್ತದೆ. ಹಾಗೂ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸುತ್ತದೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಇನ್ನು ಹಲವು ವಿವಾದಗಳ ಮಧ್ಯೆ ತೆರೆಕಂಡ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಬಗ್ಗೆ ಮಾತನಾಡಿದ ಕಶ್ಯಪ್, ‘ಪಠಾಣ್’ ಮೂಲಕ ಬಾಲಿವುಡ್‌ ಒಂದು ದೊಡ್ಡ ಹಿಟ್ ಕಂಡಿದೆಯಾದರೂ ಇದು ತಾತ್ಕಾಲಿಕ‌. ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪಠಾಣ್’ ಸಿನಿಮಾಕ್ಕೆ ಸೆಡ್ಡು ಹೊಡೆಯಲು ಇರಲಿಲ್ಲ ಹಾಗಾಗಿ ‘ಪಠಾಣ್’ ದೊಡ್ಡ ಯಶಸ್ಸನ್ನು ಗಳಿಸಿದೆ. ಒಂದು ವೇಳೆ ದಕ್ಷಿಣದ ಅತ್ಯುತ್ತಮ ಸಿನಿಮಾ
ಪಠಾಣ್ ಗೆ ಎದುರಾಗಿದ್ದರೆ ಈ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ಬಾಲಿವುಡ್ ಈಗಲೂ ಸಹ ಸ್ವಂತ ಕತೆಯ ಹೊರತಾಗಿ ಹಾಲಿವುಡ್‌ ಅನ್ನು ಕಾಪಿ ಮಾಡುತ್ತಿದೆ. ‘ಪಠಾಣ್’ ಸಹ ಹಾಲಿವುಡ್‌ನ ಜನಪ್ರಿಯ ಮಾದರಿ ಸ್ಪೈ ಥ್ರಿಲ್ಲರ್ ಜಾನರ್ ಒಳಗೇ ಬರುವ ಸಿನಿಮಾ. ಹಾಗಾಗಿ ಬಾಲಿವುಡ್‌ ದೊಡ್ಡ ಮಟ್ಟದ ಯಶಸ್ಸು ಕಾಣೋದಿಲ್ಲ ಎಂದು ಕಶ್ಯಪ್ ಹೇಳಿದ್ದು, ಅಲ್ಲದೆ, ಮೊದಲು ಭಾರತದ ಸಿನಿಮಾಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇತ್ತು. ರಷ್ಯಾ, ಆಫ್ರಿಕಾಕ್ಕೆ ಹೋದರೂ ಹಿಂದಿ ಹಾಡುಗಳು ಕೇಳಿ ಬರುತ್ತಿತ್ತು. ಆದರೆ ಬಾಲಿವುಡ್‌ನವರು ಯಾವಾಗ ಹಾಲಿವುಡ್‌ ಸಿನಿಮಾಗಳನ್ನು ಕಾಪಿ ಮಾಡಲು ಆರಂಭಿಸಿದರೋ ಆ ನಂತರ ಒರಿಜಿನಾಲಿಟಿ ಕಳೆದುಕೊಂಡರು ಎಂದು ಅನುರಾಗ್ ಕಶ್ಯಪ್ ಹೇಳಿದರು‌.

ಕಶ್ಯಪ್ ಅವರಿಗೆ ಮೊದಲಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳು ಇಷ್ಟವಂತೆ. ದಕ್ಷಿಣದ ಸಿನಿಮಾವನ್ನು ಬಾಯ್ತುಂಬಾ ಹೊಗಳುತ್ತಾ ಬಂದಿದ್ದಾರೆ. ಕನ್ನಡದ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ಕಶ್ಯಪ್ ತುಂಬಾನೇ ಮೆಚ್ಚಿಕೊಂಡಿದ್ದರು. ಅಲ್ಲದೆ, ರಾಜ್ ಬಿ ಶೆಟ್ಟಿ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದಿಸಿದ್ದರು. ಹಾಗೇ ‘ಕಾಂತಾರ’ ಸಿನಿಮಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.