ನಿಮ್ಮ ಖಾತೆ ಏನಾದರೂ ಈ ಬ್ಯಾಂಕ್‌ನಲ್ಲಿದೆಯೇ ? ಹಾಗಾದರೆ ಫೆ.1 ರಿಂದ ಈ ನಿಯಮ ಬದಲಾವಣೆ ಆಗಲಿದೆ !
ಬ್ಯಾಂಕ್ ಆಫ್ ಬರೋಡಾ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಇನ್ಮುಂದೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಬಾಡಿಗೆ ಪಾವತಿಗೆ ಶುಲ್ಕವನ್ನು ಪಾವತಿಸಬೇಕಾಗಲಿದೆ. ಈ ನಿಯಮ ಫೆಬ್ರವರಿ 1ರಿಂದ ಜಾರಿಯಾಗಲಿದೆ ಎಂದು ಬ್ಯಾಂಕ್ ಪ್ರಕಟಿಸಿದೆ.
ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ ಗ್ರಾಹಕರು ಮಾಡುವ ಬಾಡಿಗೆ ಪಾವತಿ ವಹಿವಾಟಿನ ಮೇಲೆ ಶೇಕಡಾ 1 ಶುಲ್ಕ ನೀಡಬೇಕಿದೆ. ಈ ಶುಲ್ಕ ಅಲ್ಲದೆ, ಸರ್ಕಾರಿ ದರಗಳ ಪ್ರಕಾರ ಎಲ್ಲಾ ಶುಲ್ಕಗಳು, ಬಡ್ಡಿ, ಇತರ ಶುಲ್ಕಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸುತ್ತದೆ. ಅಂದ್ರೆ ಬ್ಯಾಂಕ್ ಗ್ರಾಹಕರು ಕ್ರೆಡಿಟ್ ಕಾರ್ಡ್ ಮೂಲಕ ರೂ.10,500 ಬಾಡಿಗೆಯನ್ನು ಪಾವತಿಸಿದರೆ, ಬ್ಯಾಂಕ್ ವಹಿವಾಟಿನ ಮೇಲೆ ರೂ.105 ಶುಲ್ಕವನ್ನು ಒಂದು ಶೇಕಡಾ ಶುಲ್ಕದ ಪ್ರಕಾರ ವಿಧಿಸುತ್ತದೆ.
ಇದಲ್ಲದೆ, ICICI ಬ್ಯಾಂಕ್ ಗ್ರಾಹಕರು ಕೂಡ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಬಾಡಿಗೆ ಪಾವತಿ ವಹಿವಾಟುಗಳಿಗೆ ಶೇಕಡಾ ಒಂದು ಸಂಸ್ಕರಣಾ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಈ ನಿಯಮ 20 ಅಕ್ಟೋಬರ್ 2022 ರಿಂದಲೇ ಜಾರಿಯಲ್ಲಿದೆ. ಹಾಗೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗ್ರಾಹಕರಿಗೂ ಈ ನಿಯಮ 15 ನವೆಂಬರ್ 2022 ರಿಂದ ಜಾರಿಗೆ ಬಂದಿದ್ದು, ಗ್ರಾಹಕರು ಕ್ರೆಡಿಟ್ ಕಾರ್ಡ್‌ನೊಂದಿಗೆ ಬಾಡಿಗೆ ಪಾವತಿಸುವಾಗ ರೂ.99 + GST ಪಾವತಿಸುತ್ತಾರೆ. ಹಾಗೇ ಈ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸಿದರೆ, ನಿಗದಿತ ಸಮಯದೊಳಗೆ ಮೊತ್ತವನ್ನು ಮರುಪಾವತಿ ಮಾಡಬೇಕು.
ಒಂದು ವೇಳೆ ಮರುಪಾವತಿ ಮಾಡುವಲ್ಲಿ ವಿಫಲವಾದರೆ ಭಾರೀ ದಂಡ ತೆರಬೇಕಾಗುತ್ತದೆ. ಅಲ್ಲದೆ, ಇದು ಕ್ರೆಡಿಟ್ ಸ್ಕೋರ್ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗೇ ಈ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸುವುದು ಅಲ್ಪಾವಧಿಯ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ಸಹಕಾರಿಯಾಗಿದೆ. ಆದರೆ ಇದು ಒಂದು ತಿಂಗಳವರೆಗೆ ಮಾತ್ರ ಇರಲಿದೆ. ನಂತರ ನೀವು ಕ್ರೆಡಿಟ್ ಕಾರ್ಡ್ ಬಾಕಿಯನ್ನು ಪಾವತಿಸಬೇಕಿದೆ.