ಜಾಯಿಂಟ್ ವ್ಹೀಲ್ ಗೆ ಬಾಲಕಿಯ ತಲೆಕೂದಲು ಸಿಲುಕಿ ಚರ್ಮ ಕಿತ್ತು ಬಂದ ಘಟನೆ
ಸಾಮಾನ್ಯವಾಗಿ ಹಬ್ಬಗಳು, ಜಾತ್ರೆಯಲ್ಲಿ ಜಾಯಿಂಟ್ ವೀಲ್ ಇರುವುದು ಸಹಜವಾಗಿದೆ. ಅದೇ ಜಾಯಿಂಟ್ ವೀಲ್‌ನಲ್ಲಿ ಕೂದಲು ಸಿಲುಕಿ, ಬಾಲಕಿಯ ತಲೆಯ ಚರ್ಮವೇ ಕಿತ್ತು ಬಂದ ಪ್ರಕರಣ ಬೆಳಕಿಗೆ ಬಂದಿದೆ.
ಶ್ರೀರಂಗನಾಥ ದೇಗುಲದ ಆವರಣದಲ್ಲಿ ಕಳೆದ ಶನಿವಾರ ರಾತ್ರಿ ಭೀಕರ ಘಟನೆ ನಡೆದಿದ್ದು, ಸದ್ಯ ಬೆಂಗಳೂರು ಮೂಲದ ಬಾಲಕಿ ಶ್ರೀವಿದ್ಯಾ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹೌದು ರಥಸಪ್ತಮಿ ಅಂಗವಾಗಿ ರಂಗನಾಥಸ್ವಾಮಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣಕ್ಕೆ ಸಂತ್ರಸ್ತ ಬಾಲಕಿ ಶ್ರೀವಿದ್ಯಾಳ ಕುಟುಂಬ ಸಮೇತ ತೆರಳಿದ್ದರು.
ದೇವರ ದರ್ಶನದ ಬಳಿಕ ಬಾಲಕಿ ಜಾಯಿಂಟ್ ವೀಲ್ ಆಡಲು ತೆರಳಿದ್ದಾಳೆ. ಮೈದಾನದಲ್ಲಿದ್ದ ಜಾಯಿಂಟ್ ವೀಲ್‌ನಲ್ಲಿ ಬಾಲಕಿ ಶ್ರೀವಿದ್ಯಾ ಕುಳಿತುಕೊಂಡಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಬಾಲಕಿ ತಲೆಕೂದಲು ಜಾಯಿಂಟ್ ವೀಲ್‌ಗೆ ಸಿಕ್ಕಿ ಹಾಕಿಕೊಂಡಿದೆ. ಬಾಲಕಿ ತಲೆಕೂದಲು ವೀಲ್‌ಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಂತೆ ಪಕ್ಕದಲ್ಲಿ ಕುಳಿತುಕೊಂಡಿದ್ದ ಪೋಷಕರು ಕೂದಲನ್ನು ಬಿಡಿಸಿಕೊಳ್ಳಲು ಜೋರಾಗಿ ಎಳೆದಿದ್ದಾರೆ. ಆದರೆ, ಜಾಯಿಂಟ್ ವೀಲ್ ಜೋರಾಗಿ ತಿರುಗುವಾಗ ಬಾಲಕಿಯ ತಲೆಯ ಕೂದಲು ಇಡಿ ಚರ್ಮದ ಸಮೇತವಾಗಿ ಕಿತ್ತುಕೊಂಡುಬಂದಿದೆ.
ಸದ್ಯ ಘಟನೆ ನಂತರ ಇದೀಗ ಸಂತ್ರಸ್ತ ಬಾಲಕಿ ಶ್ರೀವಿದ್ಯಾಳ ಸಂಬಂಧಿ ಪೂಜಾ ಎಂಬುವವರ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜಾಯಿಂಟ್ ವೀಲ್ ಮಾಲೀಕ ರಮೇಶ್ ಅವರನ್ನು ಬಂಧಿಸಲಾಗಿದೆ ಜೊತೆಗೆ ಘಟನೆ ಕುರಿತಂತೆ ಶ್ರೀರಂಗನಾಥಸ್ವಾಮಿ ದೇಗುಲದ ಮುಖ್ಯ ಕಾರ್ಯ ನಿರ್ವಾಹಕ ತಮ್ಮೇಗೌಡ, ಪುರಸಭೆ ಮುಖ್ಯಾಧಿಕಾರಿ ಸಂದೀಪ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಮುಂಜಾಗ್ರತ ಕ್ರಮ ಕೈಗೊಂಡು ಅನುಮತಿ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 337ರ ಅಡಿ ಪ್ರಕರಣ ದಾಖಲಾಗಿದೆ.
ಸದ್ಯ ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ. ಇದೀಗ ಯಾರೋ ಮಾಡಿದ ಬೇಜವಾಬ್ದಾರಿಯಿಂದ ಅಮಾಯಕ ಬಾಲಕಿ ಆಪತ್ತಿನಲ್ಲಿ ಸಿಲುಕಿದ್ದು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.