ಟಿವಿ ವೀಕ್ಷಕರಿಗೆ ಶಾಕಿಂಗ್ ನ್ಯೂಸ್ : ಫೆಬ್ರವರಿ 1ರಿಂದ ಡಿಟಿಹೆಚ್ ದರ ಏರಿಕೆ ಸಾಧ್ಯತೆ
ಈಗಂತೂ ಪ್ರತಿಯೊಂದು ವಸ್ತುಗಳ ಮೇಲೆ ದರಗಳು ಏರುತ್ತಲೇ ಇದೆ. ಈ ನಡುವೆ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಟಿವಿ ಪ್ರಿಯರಿಗೆ ಬಿಗ್ ನ್ಯೂಸ್ ಒಂದು ಕಾದಿದೆ. ಅದೇನಪ್ಪಾ ಅಂದ್ರೆ, ಫೆಬ್ರವರಿ 1ರಿಂದ ಕೇಬಲ್ ಮತ್ತು ಡಿಟಿಎಚ್ ದರಗಳಲ್ಲಿ ಏರಿಕೆಯಾಗಲಿದ್ದು, ಇದರಿಂದ ಟಿವಿ ಪ್ರೇಕ್ಷಕರ ಜೇಬಿಗೆ ಕತ್ತರಿ ಬೀಳಲಿದೆ.
ಟೆಲಿಕಾಂ ನಿಯಂತ್ರಣ ಸಂಸ್ಥೆ ಕಳೆದ ನವೆಂಬರ್ ನಲ್ಲಿ ಪರಿಷ್ಕೃತ ದರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಶೇ.30ರಷ್ಟು ದರ ಏರಿಸಲು ನಿರ್ಧರಿಸಲಾಗಿದೆ. ಪ್ರಮುಖ ಟಿವಿ ಪ್ರಸಾರಕರು ಚಾನೆಲ್ಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಇದರಿಂದ ಗ್ರಾಹಕರ ಮಾಸಿಕ ಟಿವಿ ಚಂದಾದಾರಿಕೆ ಬಿಲ್ ಹೆಚ್ಚಾಗುತ್ತದೆ. ಈ ಹೊಸ ದರ ಏರಿಕೆ ನಿರ್ಧಾರವು ಫೆಬ್ರವರಿ 1 ರಿಂದ ದೇಶದೆಲ್ಲೆಡೆ ಜಾರಿಗೆ ಬರಲಿದೆ.
ಪ್ರತಿ ಚಾನೆಲ್ ಗೆ 12 ರೂ.ನಿಂದ 19 ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ. ಅಲ್ಲದೇ ಡಿಟಿಎಚ್ ದರದಲ್ಲಿ ಶೇ.19 ರಷ್ಟು ಏರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಕೇಬಲ್ ಆಪರೇಟರ್ಸ್ ಮತ್ತು ಟಿವಿ ಚಾನೆಲ್ ಕಂಪನಿಗಳು ದರ ಏರಿಕೆಗೆ ಒಂದು ಹೆಜ್ಜೆ ಹಿಂದೆ ಹಾಕಿದ್ದಾರೆ. ಒಂದು ವೇಳೆ ದರ ಏರಿಸಿದರೆ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ. ಇದರಿಂದ ಟಿವಿ ಉದ್ಯಮದ ಮೇಲೆ ಭಾರಿ ಹೊಡೆತ ಬೀಳಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.
ಪ್ರಸ್ತುತ ಟಿವಿ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತಿದ್ದು, ಹೆಚ್ಚಿನ ಜನರು ಓಟಿಟಿಯತ್ತ ವಾಲುತ್ತಿದ್ದಾರೆ. ಓಟಿಟಿ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಟಿವಿ ನೋಡುವವರ ಸಂಖ್ಯೆಯಲ್ಲಿ ಇಳಿಮುಖವಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ. ಈ ವೇಳೆ ಕೇಬಲ್ ದರ ಏರಿಕೆಯ ವಿಷಯವನ್ಮು ಮುಂದೂಡುವಂತೆ ಕೇಬಲ್ ಆಪರೇಟರ್ ಗಳು ಮನವಿ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಕೇಬಲ್ ಆಪರೇಟರ್ ಗಳ ವಿವಾದವು ಕೇರಳ ಹೈಕೋರ್ಟ್ ನಲ್ಲಿದ್ದು, ಫೆಬ್ರವರಿ 8ರಂದು ತೀರ್ಪು ಬರಲಿದೆ. ಅಲ್ಲಿಯವರೆಗೂ ಕಾಯಲು ಟ್ರಾಯ್ ನಿರ್ಧರಿಸಿದೆ.