ವಿಮಾನದ ಮೈಲೇಜ್ ಎಷ್ಟು ಗೊತ್ತಾ? ‘ಎಷ್ಟು ಕೊಡುತ್ತೆ’ ಎಂದು ವಿಚಾರಿಸುವವರಿಗಾಗಿ ಈ ಪೋಸ್ಟ್ !

ನೀವು ಮಾರುತಿ ಸುಝುಕಿ ಕಾರು ಕಂಪನಿಯ ಹಳೆಯ ಜಾಹೀರಾತು ಒಂದನ್ನು ನೋಡಿರಬಹುದು. ಅದರಲ್ಲಿ, ಒಂದು ಬೃಹತ್ ಹಡಗಿನ ವಿವರಣೆಯನ್ನು ಕೊಡಲಾಗುತ್ತಿತ್ತು. ಇಂಜಿನಿಯರ್ ಕಂ ವಿಜ್ಞಾನಿಯಾಗಿದ್ದ ವಿವರಣಕಾರನು ಹಡಗಿನ ತೂಕ, ಅದು ಸಾಗುವ ವೇಗ, ಅದರ ಅಸಾಧಾರಣ ಧಾರಣ ಸಾಮರ್ಥ್ಯ, ಅದರಲ್ಲಿ ಅಳವಡಿಸಲಾದ ಅತ್ಯಾಧುನಿಕ ಸುರಕ್ಷತಾ ಪರಿಕರಗಳು ಮುಂತಾದ ಟೆಕ್ನಿಕಲ್ ವಿಷಯಗಳನ್ನು ಹಲವು ದೇಶಗಳ ಗಣ್ಯರಿಗೆ ವಿವರಿಸುತ್ತಿರುತ್ತಾನೆ.

ಆ ಗುಂಪಿನಲ್ಲಿದ್ದ ಓರ್ವ ಭಾರತೀಯನು ಮಧ್ಯೆ ಮೂಗು ತೂರಿಸಿ, “ಕಿತ್ನಾ ದೇತಾ ಹೈ?” ಅಂದರೆ ” ಎಷ್ಟು ಕೊಡುತ್ತೆ ?” ಅಂತ ಮುಗ್ದನಾಗಿ ಕೇಳುತ್ತಾನೆ. ವಿವರಣಕಾರ ಸುಸ್ತು! ಇದು ಭಾರತೀಯರ ಮೈಲೇಜ್ ಕೇಳುವ ಕಾತುರ!! ನಾವು ಎಲ್ಲ ವಾಹನಗಳಲ್ಲೂ ಮೊದಲು ಬಯಸುವುದು ಉತ್ತಮ ಮೈಲೇಜ್ ನ್ನು. ಗಾಡಿ ಯಾವುದೇ ಇರಲಿ, ಮೈಲೇಜು ಕೇಳಿಯೇ ಮುಂದಿನ ಮಾತು. ಇದೀಗ ವಿಮಾನದ ಮೈಲೇಜ್ ವಿಚಾರಿಸುವ ಸರದಿ.
ಹಾಗಾಗಿ ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ಮೈಲೇಜ್ ಕೊಡುತ್ತೆ ಅನ್ನೋ ಕುತೂಹಲ ನಮ್ಮಲ್ಲಿ ಬಂದರೆ ಅದು ಸಹಜ. ಅದಕ್ಕಾಗಿಯೇ ಈ ಸುಂದರ ಪೋಸ್ಟ್ ನಿಮ್ಮ ಖುಷಿಯ ಓದಿಗಾಗಿ.
ವಿಮಾನದಲ್ಲಿ ಬಳಸುವ ಇಂಧನ ಏವಿಯೇಷನ್ ಪೆಟ್ರೋಲ್. ಇದು ಒಂದು ರೀತಿಯ ಶುದ್ಧ ಪೆಟ್ರೋಲ್ ಅನ್ನಬಹುದು. ನಿಜಕ್ಕೂ ಇದು ಪೆಟ್ರೋಲ್ ಅಲ್ಲವೇ ಅಲ್ಲ. ವಿಮಾನಗಳಲ್ಲಿ, ಹೆಲಿಕಾಪ್ಟರ್ ಗಳಲ್ಲಿ ಮತ್ತು ಜೆಟ್ ವಿಮಾನಗಳಲ್ಲಿ ಬಳಸುವುದು ಸೀಮೆ ಎಣ್ಣೆಯನ್ನು. ಆದರೆ ಅದು ಮಾಮೂಲಿ ಸೀಮೆಎಣ್ಣೆ ಅಲ್ಲ ಬದಲಿಗೆ ಅತ್ಯಂತ ಪರಿಶುದ್ಧಿಕರಿಸಿದ ಸೀಮೆಎಣ್ಣೆ. ಇದು ಕೂಡಾ ಪೆಟ್ರೋಲಿಯಂ ಉತ್ಪನ್ನವಾಗಿದ್ದು ನೋಡಲು ಬಣ್ಣರಹಿತವಾಗಿರುತ್ತದೆ. ಇದು ಅತ್ಯಂತ ಗರಿಷ್ಠ ಮಟ್ಟದ ಹೀಟ್ ವ್ಯಾಲ್ಯೂ (ಕೆಲೋರಿಫಿಕ್ ವ್ಯಾಲ್ಯೂ) ಮತ್ತು ಹೆಚ್ಚಿನ ಫ್ಲಾಶ್ ಪಾಯಿಂಟ್ ಅನ್ನು ಹೊಂದಿದೆ. ವಿಮಾನದ ಮೈಲೇಜ್ ಬೇರೆ ಯಾವುದೇ ವಾಹನ ಕೊಡುವ ಮೈಲೇಜ್ ನ ಹಾಗೆ ಫಿಕ್ಸ್ ಆಗಿ ಇರೋದಿಲ್ಲ. ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಆಧಾರದ ಮೇಲೆ ಇಂಧನ ಬಳಕೆಯಲ್ಲಿ ಭಾರಿ ವ್ಯತ್ಯಾಸಗಳಾಗುತ್ತವೆ. ವಿಮಾನದ ತೂಕ, ವಿಮಾನದ ಎತ್ತರ, ಸರಾಸರಿ ಪ್ರಯಾಣಿಕರು ಮತ್ತು ಹವಾಮಾನ ಪರಿಸ್ಥಿತಿಗಳು ಕೂಡಾ ವಿಮಾನದ ಮೈಲೇಜ್ ಅನ್ನು ನಿರ್ಧರಿಸುವ ಮಾನದಂಡಗಳಾಗುತ್ತವೆ.
ವಿಮಾನದ ಮೈಲೇಜ್ ಇಷ್ಟು ಕಡಿಮೆಯಾ?
ಆದರೂ ನಾವು ಪ್ರತಿ ಲೀಟರ್ ನಲ್ಲಿ ವಿಮಾನದ ಮೈಲೇಜ್ ನ್ನು ಲೆಕ್ಕಾಚಾರ ಮಾಡ ಬಯಸಿದರೆ, ವಿಮಾನದ ಸರಾಸರಿ ಒಟ್ಟು ಇಂಧನ ಬಳಕೆಯಿಂದ ಅದು ಕ್ರಮಿಸಿದ ಒಟ್ಟು ಕಿಲೋಮೀಟರ್ ಅನ್ನು ಭಾಗಿಸಿದರೆ ಪ್ರತಿ ಲೀಟರ್ ಗೆ ಮೈಲೇಜ್ ಸಿಕ್ಕಿ ಬಿಡುತ್ತದೆ. ಸಾಮಾನ್ಯವಾಗಿ ವಿಮಾನಕ್ಕೆ ಎರಡು ಇಂಜಿನ್ ಇದ್ದು, ಇಂಧನದ ಖರ್ಚು ದ್ವಿಗುಣವಾಗಿರುತ್ತದೆ.
ಇಲ್ಲಿ ನಾವು ಸುಮಾರು 200 ಜನರನ್ನು ಹೊತ್ತು ಒಯ್ಯಬಲ್ಲ ವಿಮಾನವನ್ನು ಗಣನೆಗೆ ತೆಗೆದುಕೊಂಡರೆ, ವಿಮಾನದ ಪ್ರತಿ ಇಂಜಿನ್ ಪ್ರತಿ ನಿಮಿಷಕ್ಕೆ 20 ಲೀಟರ್ ಇಂಧನವನ್ನು ಸುಡುತ್ತದೆ. ಅಂದರೆ, ಎರಡೂ ಎಂಜಿನ್‌ಗಳು ಸೇರಿ ನಿಮಿಷಕ್ಕೆ 40 ಲೀಟರ್ ಗೂ.ಅಧಿಕ ಇಂಧನವನ್ನು ಖಾಲಿ ಮಾಡುತ್ತದೆ. ವಿಮಾನವು ಒಂದು ಗಂಟೆಗೆ 850 ಕಿಮೀ ನಷ್ಟು ಚಲಿಸುತ್ತದೆ. ಈ ರೀತಿ ಲೆಕ್ಕ ಹಾಕಿದರೆ ವಿಮಾನವು ಗಂಟೆಗೆ 2400 ರಿಂದ 2500 ಲೀಟರ್ ಗಳಷ್ಟು ಇಂಧನವನ್ನು ಖರ್ಚು ಮಾಡುತ್ತದೆ. ಅಂದ್ರೆ ಇತರ ವಾಹನಗಳ ಸಾಮಾನ್ಯವಾಗಿ ಲೆಕ್ಕಿಸುವ ರೀತಿಯಲ್ಲಿ ಲೆಕ್ಕಾಚಾರ ಮಾಡಿದರೆ ವಿಮಾನದ ಮೈಲೇಜ್ ಪ್ರತಿ ಲೀಟರ್ ಗೆ 0.34 ರಿಂದ 0.35 ಕಿಲೊಮೀಟರ್ ಗಳು, ಅಂದ್ರೆ 0.37 KMPL!
ಮೈಲೇಜ್ ಕಮ್ಮಿ ಆದ್ರೂ ಅತ್ಯಂತ ಸೇಫ್
ವಿಮಾನವು ಈಗ ಇರುವ ಸಂಪರ್ಕ ಸಾಧನಗಳಲ್ಲಿಯೇ ಅತ್ಯಂತ ಕಳಪೆ ಇಂಧನ ಕ್ಷಮತೆ ನೀಡುವ ವಾಹನವಾಗಿದೆ. ಲೀಟರ್ ಒಂದಕ್ಕೆ ಅರ್ಧ ಕಿಲೋ ಮೀಟರ್ ಕೂಡಾ ಮೈಲೇಜ್ ಒದಗಿಸಲಾರದು ವಿಮಾನ ಪ್ರಯಾಣ. ಆದರೆ ಸುರಕ್ಷತೆಯ ದೃಷ್ಟಿಯಿಂದ ವಿಮಾನಕ್ಕಿಂತ ಅತ್ಯಂತ ಸುರಕ್ಷತಾ ಪ್ರಯಾಣ ಇನ್ನೊಂದಿಲ್ಲ.