ರೋಸ್ ವಾಟರ್ ಬಳಕೆಯ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು??

ಗುಲಾಬಿ, ರೋಸ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಗುಲಾಬಿಯು ಹೂವುಗಳ ರಾಣಿ. ಅಷ್ಟೆ ಅಲ್ಲಾ ಇದು ಪ್ರೀತಿ ಮತ್ತು ಸೌಂದರ್ಯದ ಸಂಕೇತ. ಮುಳ್ಳಿನ ಗಿಡದಲ್ಲಿದ್ದರು, ಸದಾ ನಗು ನಗುವ ಗುಲಾಬಿಯ ಅಂದ ಎಂತವರನ್ನು ನಾಚಿಸುತ್ತದೆ. ಮುಖದ ಅಂದ ಹೆಚ್ಚಿಸಲು ಉಪಯೋಗಕ್ಕೆ ಬರುವ ಯಾವ ಅಪಾಯವೂ ಇಲ್ಲದಂತಹ ಒಂದು ಸುರಕ್ಷಿತ ದ್ರವ ಎಂದರೆ ರೋಸ್ ವಾಟರ್. ರೋಸ್ ವಾಟರ್ ಅನ್ನು ಕೇವಲ ಬ್ಯೂಟಿ ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಎಂದು ಅಂದ್ಕೊಬೇಡಿ. ಏಕೆಂದರೆ ಅದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ . ದೇಹದ ಚರ್ಮದ ಕಾಂತಿ ಹೆಚ್ಚಿಸುವುದರಿಂದ, ಕೂದಲಿಗೆ ಹೊಳಪು ನೀಡುವವರೆಗು ಇದರ ಉಪಯೋಗ ಬಹಳ. ಇದು ನಿಸ್ಸಂದೇಹವಾಗಿ ಸೌಂದರ್ಯಕ್ಕೆ ಮಾಂತ್ರಿಕ ಮದ್ದಾಗಿದ್ದು, ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ದೊರೆಯುವ ಸೌಂದರ್ಯ ವರ್ಧಕಗಳಲ್ಲಿ ಒಂದಾಗಿದೆ. ಹಾಗಾದರೆ, ಬನ್ನಿ ರೋಸ್ ವಾಟರ್’ನಿಂದಾಗುವ ಇನ್ನು ಹಲವು ಪ್ರಯೋಜನಗಳ ಬಗ್ಗೆ ತಿಳಿಯೋಣ.

ವಯಸ್ಸಾದ ವಿರೋಧಿ ಗುಣ:- ಗುಲಾಬಿ ನೀರು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಇದು ತ್ವಚೆಯ ಮೇಲೆ ಮೂಡುವ ಸೂಕ್ಷ್ಮವಾದ ಗೆರೆಗಳು, ಸುಕ್ಕುಗಳನ್ನು ತಡೆಯುತ್ತದೆ. ನೀವು ಬಳಸುವಂತಹ ಅನೇಕ ಸೌಂದರ್ಯ ಉತ್ಪನ್ನಗಳಲ್ಲಿ ರೋಸ್‌ ವಾಟರ್‌ ಅನ್ನು ಬಳಸಿರುತ್ತಾರೆ. ಇದು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದ್ದು, ಚರ್ಮಕ್ಕೆ ಕಿರಿಕಿರಿಯುಂಟು ಮಾಡುವ ಚರ್ಮ ಸಮಸ್ಯೆಗಳನ್ನು ಇದು ತೊಲಗಿಸುತ್ತದೆ. ನೀವು ಪ್ರತಿನಿತ್ಯ ರೋಸ್‌ ವಾಟರ್‌ ನಿಮ್ಮ ತ್ವಚೆಯ ಮೇಲೆ ಸಿಂಪಡಿಸುವುದರಿಂದ ಅಥವಾ ಫೇಸ್ ಪ್ಯಾಕ್‌ಗಳಲ್ಲಿ ಬಳಸುವುದರಿಂದ ಯೌವನಯುತವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.

ಮೊಡವೆಗಳಿಗೆ ರಾಮಬಾಣ:- ಮೊಡವೆಗಳು ಮುಖದ ಅಂದವನ್ನು ಹಾಳು ಮಾಡುತ್ತವೆ . ಇದರಲ್ಲಿ ಯಾವುದೇ ಸಂದೇಹವಿಲ್ಲ . ಅದಕ್ಕೆ ಪರಿಹಾರವೆಂದರೆ ತಣ್ಣನೆಯ ನೀರಿಗೆ ಸ್ವಲ್ಪ ಕೋಲ್ಡ್ ರೋಸ್ ವಾಟರ್ ಅನ್ನು ಹಾಕಿ ಬೆರೆಸಿ ಅದರಿಂದ ಮುಖದ ಮೇಲೆ ಎರಚುವಂತೆ ಮಾಡಿ ಮುಖ ತೊಳೆದುಕೊಂಡರೆ ಮುಖದ ಮೇಲಿನ ಮೊಡವೆಗಳ ಸಮೇತ ಮುಖದ ಮೇಲಿನ ಕಲೆಗಳೂ ಸಹ ಮಾಯವಾಗುತ್ತವೆ . ಇದನ್ನು ದಿನಕ್ಕೆ ಮೂರು ಬಾರಿ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು . ಅಷ್ಟೇ ಅಲ್ಲದೆ ಕೋಲ್ಡ್ ರೋಸ್ ವಾಟರ್ ಅನ್ನು ಮುಲ್ತಾನಿ ಮಿಟ್ಟಿಯ ಜೊತೆ ಕೂಡ ಉಪಯೋಗಿಸಬಹುದು.

ಕೂದಲ ಆರೋಗ್ಯ ಕಾಪಾಡಲು:- ರೋಸ್‌ ವಾಟರ್‌ ಕೂದಲಿಗೆ ಬಳಸುವುದರಿಂದ ಕೂದಲನ್ನು ಮೃದುಗಳಿಸುತ್ತದೆ. ಪ್ರತಿನಿತ್ಯ ನಿಯಮಿತವಾಗಿ ರೋಸ್‌ ವಾಟರ್‌ ಅನ್ನು ಕೂದಲಿಗೆ ಬಳಸುವುದರಿಂದ ತಲೆಹೊಟ್ಟು, ಎಣ್ಣೆಯಾಗುವುದನ್ನು ತಡೆಯಬಹುದು. ರೋಸ್‌ ವಾಟರ್‌ನಲ್ಲಿ ವಿಟಮಿನ್‌ ಎ, ಬಿ 3, ಸಿ ಮತ್ತು ಇ ಹೊಂದಿದ್ದು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಇದು ನೆತ್ತಿಯನ್ನು ಪೋಷಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇನ್ನು, ಹಲವು ನೆತ್ತಿಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿ, ಸದಾ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ರೋಸ್‌ ವಾಟರ್ ಅನ್ನು ತಲೆ ಬುಡಕ್ಕೆ ಹಚ್ಚಿದರೆ ಕೂದಲು ಕಂಡೀಷನರ್‌ ಹಚ್ಚಿದ ರೀತಿ ಕಾಣುವುದು.

ದೇಹವನ್ನು ರಿಲಾಕ್ಸ್ ಮಾಡಲು:- ಸ್ನಾನ ಮಾಡುವಾಗ ಕೆಲವೊಂದು ಹನಿಗಳಷ್ಟು ರೋಸ್ ವಾಟರ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿ ಬಿಸಿ ಮಾಡಿ . ಅದರ ಘಮಗುಡುವ ಪರಿಮಳ ನಿಮ್ಮನ್ನು ನಿಜಕ್ಕೂ ರಿಲಾಕ್ಸ್ ಮಾಡುತ್ತದೆ . ಮನಸ್ಸಿನ ತಳಮಳವೆಲ್ಲಾ ದೂರವಾಗಿ , ಹೊಸ ಉಲ್ಲಾಸ ನಿಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತದೆ . ಅಷ್ಟೇ ಅಲ್ಲದೆ ರೋಸ್ ವಾಟರ್ ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ದೇಹದ ಚರ್ಮಕ್ಕೆ ಕೂಡ ಬಹಳ ಉಪಯೋಗ ಇದೆ . ಚರ್ಮದ ರೋಗಗಳಿಂದ ದೂರ ಮಾಡಿ ಚರ್ಮವನ್ನು ಕಾಂತಿಯುಕ್ತ ಮಾಡುತ್ತದೆ .

ಮುಖದ ಕಾಂತಿ ಹೆಚ್ಚಿಸಲು:- ಚರ್ಮದ ಕಾಂತಿ ಹೆಚ್ಚು ಮಾಡಲು ರೋಸ್ ವಾಟರ್ ಬಹಳ ಸಹಕಾರಿ ಎಂದು ನಮಗೆಲ್ಲಾ ಗೊತ್ತು . ಮೊಸರಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಮುಖದ ಮೇಲೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಡಿ . ಇದರಿಂದ ಚರ್ಮದ ಕಾಂತಿ ಇಮ್ಮಡಿ ಗೊಳ್ಳುತ್ತದೆ. ಮುಖದಲ್ಲಿ ಕಲೆಯಿದ್ದರೆ ಅರಿಶಿಣವನ್ನು ರೋಸ್‌ ವಾಟರ್‌ ಜತೆ ಮಿಕ್ಸ್ ಮಾಡಿ ಹಚ್ಚಿದರೆ ಕಲೆ ಮಾಯವಾಗುವುದು.

ಮನೆಯಲ್ಲೇ ತಯಾರಿಸಿ ರೋಸ್ ವಾಟರ್:
8-10 ಗುಲಾಬಿ ದಳಗಳನ್ನು ಮತ್ತು ಕುದಿಸಿದ ನೀರನ್ನು ತೆಗೆದುಕೊಂಡು ಗುಲಾಬಿ ದಳಗಳನ್ನು(Rose petals) ಚೆನ್ನಾಗಿ ಸ್ವಚ್ಛಗೊಳಿಸಿ, ಇದರಿಂದ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ. ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಸಿ ಅದರಲ್ಲಿ ಗುಲಾಬಿ ದಳಗಳನ್ನು ಹಾಕಿ. ಮಡಕೆಯನ್ನು ಮುಚ್ಚಿ ಮತ್ತು ಗ್ಯಾಸ್ ನಲ್ಲಿ ಸಣ್ಣ ಉರಿಯಲ್ಲಿ ಇಡಿ. ಸ್ವಲ್ಪ ಸಮಯದ ನಂತರ, ಗುಲಾಬಿ ದಳಗಳ ಬಣ್ಣವು ನೀರಿನ ಬಣ್ಣಕ್ಕೆ ತಿರುಗಲು ಪ್ರಾರಂಭಿಸುವುದನ್ನು ನೀವು ನೋಡುತ್ತೀರಿ. ಅಂದರೆ ಗುಲಾಬಿ ದಳ ಬಣ್ಣ ಬಿಡುತ್ತಿದೆ ಎಂದು ಅರ್ಥ. ಗ್ಯಾಸ್ ಆಫ್ ಮಾಡಿ ಮತ್ತು ನೀರನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ. ನೀರನ್ನು ಬಸಿದು ಕುಡಿಯಿರಿ. ಮನೆಯಲ್ಲಿ ತಯಾರಿಸಿದ ರೋಸ್ ವಾಟರ್ ರೆಡಿ.

Leave A Reply

Your email address will not be published.