ಅವಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಭಾರತೀಯರು ಹೆಚ್ಚಾಗಿ ಅವಲಕ್ಕಿ ಅಥವಾ ಪೋಹಾವನ್ನು ಹಿಂದಿನಿಂದಲೂ ತಮ್ಮ ಉಪಾಹಾರದಲ್ಲಿ ಬಳಸಿಕೊಂಡು ಬಂದಿದ್ದಾರೆ. ಅವಲಕ್ಕಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಅದ್ಭುತ ರುಚಿ ಹೊಂದಿರುವಂತಹ ಅವಲಕ್ಕಿ ಉಪಾಹಾರಕ್ಕೆ ಆರೋಗ್ಯಕಾರಿ ಆಯ್ಕೆ ಆಗಿದೆ. ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದ್ರೆ ಅವಲಕ್ಕಿ ತಿನ್ನೋದ್ರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂದು ನೋಡೋಣ.

ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿದೆ :

ಅವಲಕ್ಕಿ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲಗಳಲ್ಲಿ ಒಂದಾಗಿದೆ. ಇದು ನಿಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಅವಲಕ್ಕಿಯಲ್ಲಿ ಶೇ. 76 ರಷ್ಟು ಕಾರ್ಬೋಹೈಡ್ರೇಟ್ ಅಂಶವಿದೆ. ಹಾಗೂ 23 ಶೇ. ಕೊಬ್ಬಿನಂಶವನ್ನು ಹೊಂದಿದೆ. ಹಾಗಾಗಿ ಉಪಾಹಾರಕ್ಕೆ ಅವಲಕ್ಕಿ ಸೇವಿಸುವುದು ಉತ್ತಮ. ಇದಲ್ಲದೆ, ಕಬ್ಬಿಣ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯವಾದ ಜೀವಸತ್ವಗಳು ಕೂಡ ಇದರಲ್ಲಿ ಹೇರಳವಾಗಿ ಇದೆ.

ತೂಕ ಇಳಿಕೆಗೆ ಸಹಕಾರಿ :

ತೂಕವನ್ನು ಇಳಿಸಿಕೊಳ್ಳಲು ಬಯಸುವವರು ಓಟ್ ಮೀಲ್ ಮತ್ತು ಮೊಟ್ಟೆಗಳನ್ನು ಪ್ರಧಾನ ಉಪಹಾರವಾಗಿ ಸೇವಿಸುತ್ತಾರೆ. ಪ್ರತಿದಿನ ಓಟ್ ಮೀಲ್ ಮತ್ತು ಮೊಟ್ಟೆಗಳನ್ನು ತಿನ್ನುವುದು ಕಷ್ಟ. ಅಂತಹ ಸಮಯದಲ್ಲಿ ಅವಲಕ್ಕಿ ಉತ್ತಮ ಆಯ್ಕೆಯಾಗಿದೆ. ಯಾಕಂದ್ರೆ ಇದು ಆರೋಗ್ಯಕರ ಡಯಟ್‌ ಆಹಾರವಾಗಿದೆ ಹಾಗೂ ಉತ್ತಮ ರುಚಿಯನ್ನು ಹೊಂದಿದೆ. ಹಾಗೇ ಇದರಲ್ಲಿ ಗ್ಲೂಟನ್ ಅಂಶದ ಪ್ರಮಾಣ ತುಂಬಾ ಕಡಿಮೆ ಇದೆ. ಇದಿಷ್ಟೇ ಅಲ್ಲದೆ, ಅವಲಕ್ಕಿ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ಇದು ಅಂಟು ರಹಿತ ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ.

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ :

ಬಿಳಿ ಅಕ್ಕಿಯು ರಕ್ತದಲ್ಲಿನ ಸಕ್ಕರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಅವಲಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಅವಲಕ್ಕಿ ಸೇವನೆ ಮಾಡಿದ ತಕ್ಷಣ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗುವುದಿಲ್ಲ. ಈಗಾಗಲೇ ಮಧುಮೇಹ ಕಾಯಿಲೆ ಇರುವವರಿಗೆ ಯಾವುದಾದರೊಂದು ರೂಪದಲ್ಲಿ ಅವಲಕ್ಕಿ ತುಂಬಾ ಪ್ರಯೋಜನಕಾರಿ ಎಂದೇ ಹೇಳಬಹುದು. ಇದರಲ್ಲಿರುವ ಫೈಬರ್ ಸಕ್ಕರೆಯನ್ನು ನಿರಂತರವಾಗಿ ರಕ್ತಪ್ರವಾಹಕ್ಕೆ ಬಿಡುಗಡೆ ಮಾಡಲು ಸಹಕಾರಿಯಾಗಿದೆ.

ಜೀರ್ಣಿಸಿಕೊಳ್ಳಲು ಸುಲಭ :

ಅವಲಕ್ಕಿ ಒಂದು ಲೈಟ್‌ ಉಪಹಾರವಾಗಿದ್ದು, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ಮತ್ತು ಉಬ್ಬುವಿಕೆಯನ್ನು ಉಂಟುಮಾಡುವುದಿಲ್ಲ. ಹಾಗಾಗಿ ನೀವು ತ್ವರಿತ ತಿಂಡಿಯನ್ನು ಬಯಸಿದಾಗ ಸೇವಿಸಲು ಇದು ಪರಿಪೂರ್ಣ ಆಹಾರ ಪದಾರ್ಥವಾಗಿದೆ. ದಿನದ ಎಲ್ಲಾ ಸಮಯದಲ್ಲೂ ಅನ್ನವನ್ನು ಸೇವಿಸಲು ಸಾಧ್ಯವಾಗದಿದ್ದಾಗ ಇದರ ಸೇವನೆ ಉತ್ತಮ.

ಕ್ಯಾಲರಿ ಕಡಿಮೆ :

ತರಕಾರಿಗಳೊಂದಿಗೆ ಬೇಯಿಸಿದ ಅವಲಕ್ಕಿಯ ಬೌಲ್ ಸುಮಾರು 250 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹಾಗೂ ಅದೇ ಪ್ರಮಾಣದ ಫ್ರೈಡ್ ರೈಸ್ 333 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅವಲಕ್ಕಿಯ ರುಚಿಯನ್ನು ಹೆಚ್ಚಿಸಲು ಕೆಲವರು ಹುರಿದ ಕಡಲೆಕಾಯಿಯನ್ನು ಸೇರಿಸುತ್ತಾರೆ. ಆದರೆ ಇದರ ಮಿಶ್ರಣದಿಂದ ಕ್ಯಾಲೋರಿ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನದ ಬದಲಿಗೆ ಅವಲಕ್ಕಿ ಸೇವಿಸಿ‌. ಆದರೆ ಅವಲಕ್ಕಿಗೆ ಕಡಲೆಕಾಯಿಯನ್ನು ಸೇರಿಸಬೇಡಿ.

ಆರೋಗ್ಯಕರ ಕಬ್ಬಿಣಾಂಶ :

ಅವಲಕ್ಕಿಯು ಬೆಳವಣಿಗೆಯ ಹಂತದಲ್ಲಿ ಹೆಚ್ಚು ಪ್ರಯೋಜನಕಾರಿ. ಅಂದ್ರೆ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಇದು ಅತ್ಯುತ್ತಮ ಆಹಾರವಾಗಿದೆ. ಯಾಕಂದ್ರೆ ಅವಲಕ್ಕಿಯಲ್ಲಿ ಕಬ್ಬಿಣಾಂಶದ ಪ್ರಮಾಣ ಹೇರಳವಾಗಿದೆ. 100 ಗ್ರಾಂ ಅವಲಕ್ಕಿಯಲ್ಲಿ 25 ಮಿಲಿ ಗ್ರಾಂ ನಷ್ಟು ಕಬ್ಬಿಣಾಂಶ ಸಿಗುತ್ತದೆ. ಹಾಗಾಗಿ ಗರ್ಭಾವಸ್ಥೆಯ ರಕ್ತಹೀನತೆಯ ಅಪಾಯವನ್ನು ಹೊಂದಿರುವ ಮಹಿಳೆಯರಿಗೆ ಅವಲಕ್ಕಿ (ಪೋಹಾ) ತಿನ್ನಲು ಸಲಹೆ ನೀಡಲಾಗುತ್ತದೆ.

Leave A Reply

Your email address will not be published.