Meat Sale Ban : ಜನವರಿ 30 ರಿಂದ ಫೆಬ್ರವರಿ 20 ರವರೆಗೆ ಮಾಂಸ ಮಾರಾಟ ನಿಷೇಧ | ಕಾರಣ ಇಲ್ಲಿದೆ!

ಕೇಂದ್ರ ರಕ್ಷಣಾ ಸಚಿವಾಲಯ ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ‘ಏರೋ ಇಂಡಿಯಾ 2023’ ಪ್ರದರ್ಶನ ನಡೆಸುವ ನಿಮಿತ್ತ ಭರ್ಜರಿ ತಯಾರಿ ನಡೆಸುತ್ತಿದೆ. ಈ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈ ಭಾಗದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಕೊರೊನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ಇದೀಗ, ಯಲಹಂಕ ವಾಯುನೆಲೆಯಲ್ಲಿ ವಾರ್ಷಿಕ ವೈಮಾನಿಕ ಪ್ರದರ್ಶನ ನಡೆಸಲು ಪೂರ್ವ ಸಿದ್ಧತೆ ನಡೆಯುತ್ತಿದ್ದು, ಯಲಹಂಕ ವಾಯುನೆಲೆಯಲ್ಲಿ ಫೆ .13ರಿಂದ ಫೆ. 17 ರವರೆಗೆ ಆಯೋಜಿಸಲಾಗಿರುವ ‘ಏರೋ ಇಂಡಿಯಾ ಏರ್​ಶೋ’ ವೈಮಾನಿಕ ಪ್ರದರ್ಶನದ ಹಿನ್ನೆಲೆ 14ನೇ ಆವೃತ್ತಿಗಾಗಿ ಸುಮಾರು 557 ಭಾರತೀಯ ಪ್ರದರ್ಶಕರು ಹಾಗೂ 40ಕ್ಕೂ ಹೆಚ್ಚು ವಿದೇಶಿ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ವಿವಿಧ ದೇಶಗಳ ರಕ್ಷಣಾ ಸಚಿವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ರಕ್ಷಣಾ ವಿದ್ಯಮಾನಗಳಲ್ಲಿ ಸಹಯೋಗದಿಂದ ಸಮೃದ್ಧಿಯ ವಿನಿಮಯ’ (shared prosperity through enhanced engagement in defence – SPEED) ಎನ್ನುವುದು ಈ ಬಾರಿಯ ಸಂವಾದ ಧ್ಯೇಯ ವಾಕ್ಯವಾಗಿರಲಿದೆ. ಇದಲ್ಲದೇ, ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿವಿಧ ಕಂಪನಿಗಳ ಸಿಇಒಗಳ ಜೊತೆಗೆ ಕೂಡ ಸಭೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬೆಂಗಳೂರಿನ ಯಲಹಂಕದಲ್ಲಿರುವ ವಾಯುನೆಲೆಯಲ್ಲಿ ಮುಂದಿನ ತಿಂಗಳು ಫೆಬ್ರುವರಿ 13ರಿಂದ ಫೆಬ್ರುವರಿ 17ರವರೆಗೆ ‘ಅಂತಾರಾಷ್ಟ್ರೀಯ ಏರೋ ಇಂಡಿಯಾ 2023″ (ವೈಮಾನಿಕ ಪ್ರದರ್ಶನ) ಆಯೋಜಿಸಿದ್ದು, ಹೀಗಾಗಿ, ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಎಲ್ಲ ಮಾಂಸದ ಮಳಿಗೆಗಳಲ್ಲಿ ಜನವರಿ 30 ರಿಂದಲೇ ರಿಂದ ಫೆಬ್ರುವರಿ 20ರವರೆಗೆ ಯಲಹಂಕ ವಲಯದ ವ್ಯಾಪ್ತಿಯಲ್ಲಿರುವ ಎಲ್ಲ ತರಹದ ಮಾಂಸ ಮಾರಾಟವನ್ನು ಮಾಡಲು ನಿಷೇಧ ಹೇರಲಾಗಿದೆ. ಎಲ್ಲ ಮಾಂಸ ಮಾರಾಟದ ಉದ್ದಿಮೆಗಳನೊಳ್ಳಗೊಂಡು ಇದರ ಜೊತೆಗೆ ಹೋಟೆಲ್ ಹಾಗೂ ಡಾಬಾಗಳಲ್ಲಿಯೂ ಕೂಡ ಮಾಂಸಾಹಾರ ತಯಾರಿಕೆ ಹಾಗೂ ಮಾರಾಟಕ್ಕೆ ಬಿಬಿಎಂಪಿ ನಿಷೇಧ ಹೇರಿದೆ. ಬಿಬಿಎಂಪಿ ನಿಗದಿಪಡಿಸಿದ ಅವಧಿಯಲ್ಲಿ ಮಾಂಸ ಮಾರಾಟ, ಮಾಂಸಾಹಾರ ತಯಾರಿಸಿ ನಿಯಮ ಉಲ್ಲಂಘಿಸಿದ್ದರೆ, ‘ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಪ್ಟ್ ರೂಲ್ಸ್ 1937ರ ರೂಲ್ 91’ ಅಡಿ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ಯಲಹಂಕ ವಲಯ ಜಂಟಿ ಆಯುಕ್ತೆ ಪೂರ್ಣಿಮಾ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.