ಆಗ ತಾನೇ ಹೆತ್ತ ಪುಟ್ಟ ಕಂದನನ್ನು ತರಕಾರಿ ಬುಟ್ಟಿಯಲ್ಲಿ ಬಿಟ್ಟು ಹೋದ ತಾಯಿ ! ಈ ಊರಲ್ಲಿ ನಡೆಯಿತೊಂದು ಮನಕಲಕುವ ಘಟನೆ!
ಹೆಣ್ಣೆಂದರೆ ದೈವಿಕ ಶಕ್ತಿಯ ಪ್ರತಿರೂಪ ಎನ್ನುವ ನಂಬಿಕೆಯಿದೆ. ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಆದರೆ, ತಾನು ಹೆತ್ತ ಕಂದಮ್ಮನನ್ನು ಅನಾಥವಾಗಿ ಬಿಟ್ಟು ಹೋಗುವ ಕಲ್ಲು ಹೃದಯಿ ಮಾತೇ ಕೂಡ ನಮ್ಮ ನಡುವೆ ಇದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ.
ತನ್ನೆಲ್ಲ ನೋವನ್ನು ಮರೆಸುವ ಅಪೂರ್ವ ಶಕ್ತಿ ಜಗತ್ತನ್ನೇ ಕಾಣದ ಪುಟ್ಟ ಕಂದಮ್ಮನಿಗೆ ಇರುತ್ತದೆ. ಆದರೆ, ನವ ಮಾಸ ತನ್ನ ಒಡಲಲ್ಲಿ ಬೆಚ್ಚಗೆ ಕಾಪಾಡಿದ ಮಗುವನ್ನು ಹೆತ್ತ ತಾಯಿಯೇ ನಿಶ್ಕರುಣೆಯಿಂದ ಹಸಿ ಹಸಿಯಾದ ಎಳೆಮಗುವನ್ನು ಪೊದೆಯೊಳಗೆ, ಬೇಕಾಬಿಟ್ಟಿ ಎಸೆದು ಹೋಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೆ ಇರುತ್ತವೆ. ಇದೇ ರೀತಿ, ಜಗವನ್ನೇ ನೋಡದ ತನ್ನ ಕರುಳಬಳ್ಳಿಯನ್ನು ತರಕಾರಿ ಬುಟ್ಟಿಯಲ್ಲಿ ಇಟ್ಟು ಅನಾಥವಾಗಿ ಬಿಟ್ಟು ಹೋಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.
ಮಗುವಿಗಾಗಿ ಹಂಬಲಿಸುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಈ ನಡುವೆ ತಾನು ಹೆತ್ತ ಹತ್ತು ದಿನದ ಗಂಡು ಮಗುವನ್ನು ಅನಾಥವಾಗಿ ಚಿಕ್ಕಮರಳಿ ಗೇಟ್ ಬಳಿ ಬೆಳಗ್ಗೆಯೆ ತರಕಾರಿಬುಟ್ಟಿಯಲ್ಲಿ ಸಕ್ಕರೆನಾಡು ಮಂಡ್ಯದ ಪಾಂಡವಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿಟ್ಟು ಹೋಗಿರುವ ಘಟನೆ ನಡೆದಿದೆ. ದಾರಿಹೋಕರು ಮಗುವಿನ ಅಳುವ ಸದ್ದನ್ನು ಕೇಳಿ ಪ್ಲಾಸ್ಟಿಕ್ ಬುಟ್ಟಿ ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಬುಟ್ಟಿಯಲ್ಲಿ ಹತ್ತು ದಿನದ ಹಸುಳೆ ಒದ್ದಾಡುತ್ತಿರುವುದು ಕಂಡು ದಾರಿಹೋಕರು ದಂಗಾಗಿದ್ದಾರೆ. ಇಂದು ಬೆಳಗ್ಗೆ ಮಗುವಿನ ಅಳು ಸುದ್ದಿ ಕೇಳಿ ಜನರು ಬುಟ್ಟಿ ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪಾಂಡವಪುರದ ರಸ್ತೆಯ ಪಕ್ಕದಲ್ಲಿ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಗುವನ್ನು ಮುಚ್ಚಿಟ್ಟು ಬಚ್ಚಿಟ್ಟು ಅನಾಥವಾಗಿ ಬಿದ್ದಿದ್ದ ಮಗುವನ್ನು ಗಮನಿಸಿದ ಸ್ಥಳೀಯರು ಪಾಂಡವಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವಿನ ರಕ್ಷಣೆಗೆ ಮುಂದಾಗಿದ್ದು, ಸದ್ಯ ಮಗುವನ್ನು ಪಾಂಡವಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎನ್ನುವುದು ತಿಳಿದಬಂದಿದೆ.