ಇನ್ನು ಹಾಸನದಲ್ಲಿ ಎಲ್ಲಾ ನಿರ್ಧಾರ ಮಾಡೋದು ದೊಡ್ಡ ಗೌಡ್ರಂತೆ! ಮನೆ ಮಂದಿ ಸೇರಿ ಎಲ್ಲರಿಗೂ ವಾರ್ನಿಂಗ್ ಕೊಟ್ರು ದೇವೇಗೌಡ್ರು
2023ರ ವಿಧಾನಸಭಾ ಚುನಾವಣೆಯ ವಿಚಾರದಲ್ಲಿ ಹಾಸನ ಕ್ಷೇತ್ರದಲ್ಲಿನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ರಾಜ್ಯಾದ್ಯಂತ ಕುತೂಹಲ ಕೆರಳಿಸಿತ್ತು. ಭವಾನಿ ರೇವಣ್ಣನವರು ನಾನೇ ಸ್ಪರ್ಧಿ ಅನ್ನೋದು, ಕುಮಾರಸ್ವಾಮಿ ಪಕ್ಷ ನಿರ್ಧಾರ ಮಾಡುತ್ತೆ, ಬೇರೆ ಪ್ರಭಲ ಅಭ್ಯರ್ಥಿಗಳಿದ್ದಾರೆ ಅನ್ನೋದು ಸಾಕಷ್ಟು ಗೊಂದಲಕ್ಕೀಡು ಮಾಡಿತ್ತು. ಒಂದು ರೀತಿ ಕುಟುಂಬದೊಳಗೆ ಅತ್ತಿಗೆ ಮೈದುನರ ಮಸುಕಿನ ಗುದ್ದಾಟ ನಡೆದಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಟಿಕೆಟ್ ಆಕಾಂಕ್ಷಿ ಭವಾನಿ ರೇವಣ್ಣ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಡುವಿನ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದೆ.
ತಮ್ಮ ಪಕ್ಷದೊಳಗೆ ನಡೆಯುತ್ತಿರುವ, ಅದೂ ಕೂಡ ಕುಟುಂಬದವರೇ ಮಾಡುವ ಕಿತ್ತಾಟಕ್ಕೆ ರೋಸಿಹೋದ ಮಾಜಿ ಪ್ರಧಾನಿ ದೇವೇಗೌಡರು, ಸ್ವತಃ ತಾವೇ ಹಾಸನದ ವಿಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು ಹಾಸನ ಟಿಕೆಟ್ ಗೊಂದಲ ವಿಚಾರಕ್ಕೆ ಇದೀಗ ದೊಡ್ಡಗೌಡರೇ ಎಂಟ್ರಿ ಕೊಟ್ಟಿದ್ದು, ‘ನಾನು ಹೇಳೋವರೆಗೂ ಯಾರೂ ಮಾತಾಡಬಾರದು, ಹಾಸನದಲ್ಲಿ ನಾನೇ ಎಲ್ಲಾ ನಿರ್ಧಾರ ಮಾಡ್ತೀನಿ’ ಎಂದು ಕುಟುಂಬದ ಎಲ್ಲರಿಗೂ ಬಹಿರಂಗವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ದೊಡ್ಡಗೌಡ್ರ ಅವಾಜಿಗೆ ಎಲ್ಲರೂ ಗಪ್ ಚಿಪ್ ಆಗಿದ್ದಾರೆ.
ಇಷ್ಟು ದಿನ ಸುಮ್ಮನಿದ್ದ ಗೌಡರು ಎಲ್ಲಾ ಆಗು ಹೋಗುಗಳನ್ನು ಗಮನಿಸುತ್ತಿದ್ದರು. ಆದರೆ ಇದು ಮಿತಿ ಮೀರಿ ಹೋಗುತ್ತಿರುವುದನ್ನು ಕಂಡು ಸದ್ಯ ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೆ ಹಲವಾರು ಲೆಕ್ಕಾಚಾರಗೊಂದಿಗೆ ಅವರು ಎಲ್ಲರಿಗೂ ವಾರ್ನಿಂಗ್ ನೀಡಿದ್ದಾರೆಂದು ಅಂದಾಜಿಸಲಾಗಿದೆ. ಚುನಾವಣೆ ವರ್ಷ ಆಗಿರೋದ್ರಿಂದ ಈಗ ಕುಟುಂಬದವರೇ ಹೀಗೆ ಕಿತ್ತಾಡಿದ್ರೆ ವಿಪಕ್ಷಗಳಿಗೆ ಚುನಾವಣೆ ಅಸ್ತ್ರ ಅಗುತ್ತೆ ಅನ್ನೋ ಆತಂಕ ಎದುರಾಗಿದೆ. ಟಿಕೆಟ್ ಬಗ್ಗೆ ಒಬ್ಬೊಬ್ಬರು ಒಂದೊಂದು ಮಾತು ಆಡಿದ್ರೆ ಪಕ್ಷದಲ್ಲಿ ಗೊಂದಲ ಉಂಟಾಗುತ್ತೆ ಹೀಗಾಗಿ ಯಾರು ಬಹಿರಂಗವಾಗಿ ಮಾತಾಡದಂತೆ ಸೂಚನೆ ಕೊಟ್ಟಿದ್ದಾರೆ.
ಅಲ್ಲದೆ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮಾಡಿ ಪಕ್ಷ ಬಲವರ್ಧನೆ ಮಾಡ್ತಿದ್ದಾರೆ. ಈಗ ಹಾಸನ ವಿಚಾರದಲ್ಲಿ ಗೊಂದಲ ಆದ್ರೆ ಕುಮಾರಸ್ವಾಮಿ ಪ್ರಚಾರಕ್ಕೆ ಅಡ್ಡಿ ಆಗುತ್ತದೆ. ಕುಟುಂಬದ ಸದಸ್ಯರೇ ಬೀದಿಯಲ್ಲಿ ಜಗಳ ಆಡಿದ್ರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಆತಂಕವೂ ಇದೆ. ಈಗಾಗಲೇ ಬಿಜೆಪಿಯಿಂದ ಪರೋಕ್ಷವಾಗಿ ಆಹ್ವಾನ ಬಂದಿದ್ದು, ಮನೆಯ ಜಗಳ ಬಿಡಿಸದವರು ರಾಜ್ಯವನ್ನು ನೋಡಿಕೊಳ್ತಾರಾ ಅಂತಾ ಕಾಂಗ್ರೆಸ್, ಬಿಜೆಪಿ ಹಾದಿ ಬೀದಿಯಲ್ಲಿ ಪ್ರಚಾರ ಮಾಡ್ತಾರೆ. ಇದರಿಂದ ಇಡೀ ರಾಜ್ಯದಲ್ಲಿ ಜೆಡಿಎಸ್ ಪ್ರಭಾವ ಇರೋ ಕ್ಷೇತ್ರದಲ್ಲಿ ನೆಗೆಟಿವ್ ಪ್ರಚಾರ ಆಗುವ ಆತಂಕ ಇದೆ. ಈ ಎಲ್ಲವನ್ನೂ ಗಮನಿಸಿ ದೊಡ್ಡಗೌಡರು ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.