Kisan Credit Card : ಕಿಸಾನ್ ಕ್ರೆಡಿಟ್ ಕಾರ್ಡ್ ನ ಸಂಪೂರ್ಣ ವಿವರದ ಕುರಿತು ಇಲ್ಲಿದೆ ಮಾಹಿತಿ!
ಭಾರತವು ಕೃಷಿ ಪ್ರಧಾನ ದೇಶ. ರೈತರೆ ದೇಶದ ಬೆನ್ನೆಲುಬು. ಆದರೆ, ದೇಶದ ರೈತರ ಆರ್ಥಿಕ ಸ್ಥಿತಿ-ಗತಿಗಳು ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಆದಾಯ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ. ರೈತರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪೈಕಿ ‘ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ’ ಮಹತ್ವದ ಯೋಜನೆಯಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ರೈತರ ಸ್ಥಿತಿಯನ್ನು ಸುಧಾರಿಸುವುದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಮೂರು ವರ್ಷಗಳ ವ್ಯಾಲಿಡಿಟಿ ಇದ್ದು, ಬೆಳೆಯ ಕಟಾವಿನ ಬಳಿಕ ಸಾಲದ ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ರೈತರು ಯಾವುದೇ ಅಡಮಾನ ಇಲ್ಲದೆ 1.6 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಬಹುದು. ಅವರು ತಮ್ಮ ಹೊಲಗಳಿಗೆ ಬಿತ್ತನೆ ಮಾಡುವುದು, ಬೆಳೆ ಪೋಷಣೆ, ಬೆಳೆಗಳಿಗೆ ರಸಗೊಬ್ಬರ ಹಾಕುವುದು ಮೊದಲಾದ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಬಳಸಬಹುದು. ಕೆಸಿಸಿಯು ಸುಮಾರು 50 ಸಾವಿರದವರೆಗೆ ವಿಮೆಯನ್ನು ಹೊಂದಿದೆ. ವ್ಯಕ್ತಿಯು ಮರಣ ಹೊಂದಿದಾಗ ಅಥವಾ ಅಂಗವೂನತೆ ಉಂಟಾದರೆ ವಿಮೆ ಲಭ್ಯವಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸುವುದು, ಯಾವೆಲ್ಲ ದಾಖಲೆಗಳು ಬೇಕು, ಬಡ್ಡಿದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾದ ಅರ್ಹತೆ
- ಈ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.
- ಕೃಷಿ ಮಾಡುವವರೇ ಭೂಮಿಯ ಮಾಲೀಕರು, ರೈತರು ಆಗಿರಬೇಕು. ಹಾಗೆಯೇ ಗುಂಪಿನ ಸದಸ್ಯರು ಕೂಡಾ ಆಗಿರಬೇಕಾಗುತ್ತದೆ.
- ಗುಂಪಲ್ಲಿ ಮಾಲೀಕರು ಮತ್ತು ರೈತರು ಇರಬೇಕು.
- ಸೆಲ್ಫ್ ಹೆಲ್ಪ್ ಗ್ರೂಪ್ (ಎಸ್‌ಎಚ್‌ಜಿ) ಅಥವಾ ಜಾಯಿಂಟ್ ಲಯಿಬಿಲೆಟಿ ಗ್ರೂಪ್ (ಜೆಎಲ್‌ಜಿ) ರೈತರನ್ನು ಹೊಂದಿರಬೇಕು.
- ಈ ಕಾರ್ಡ್ ಅನ್ನು ರೈತರು, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಪಡೆಯಬಹುದು.
ಅಗತ್ಯವಿರುವ ದಾಖಲೆಗಳು
- ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ಇರಬೇಕು
- ಗುರುತಿನ ಚೀಟಿಯಾದಂತಹ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್.
- ಅದೆ ರೀತಿ, ವಿಳಾಸ ಪುರಾವೆಯಾಗಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ನೀಡಬೇಕು.
- ರೈತರು ಸಾಗುವಳಿ ಮಾಡುವ ಜಮೀನಿನ ದಾಖಲೆಗಳನ್ನು ಹೊಂದಿರಬೇಕು.
- ಅರ್ಜಿದಾರರ ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೊ
- ಬ್ಯಾಂಕ್ ದಾಖಲೆಯಂತಹ ಇತರೆ ದಾಖಲೆಗಳು.
ಕೆಸಿಸಿಗೆ ಅರ್ಜಿ ಸಲ್ಲಿಕೆ
ಹಂತ 1: ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಮಾಡಿಕೊಳ್ಳಿರಿ.
ಹಂತ 3: ಅರ್ಜಿ ಸಲ್ಲಿಸುವ ಪೇಜ್‌ಗೆ ರಿಡೈರೆಕ್ಟ್ ಆಗಲಿದೆ, ಅಲ್ಲಿ ‘Apply’ ಎಂಬ ಆಯ್ಕೆ ಮಾಡಿ.
ಹಂತ 4: ನಂತರ ಬೇಕಾದ ದಾಖಲೆಗಳನ್ನು ಭರ್ತಿ ಮಾಡಿ, ‘Submit’ ಕ್ಲಿಕ್ ಮಾಡಿರಿ.
ಹಂತ 5: ಅರ್ಜಿ ಸಲ್ಲಿಕೆಯಾದ ಬಳಿಕ ರೆಫೆರೆನ್ಸ್ ಸಂಖ್ಯೆಯು ನಿಮಗೆ ಲಭ್ಯವಾಗಲಿದೆ.
ಹಂತ 6: ಇತರೆ ಪ್ರಕ್ರಿಯೆಗಾಗಿ ಬ್ಯಾಂಕ್ ನಿಮ್ಮನ್ನು ಸಂಪರ್ಕ ಮಾಡಲಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್‌ನ ಬಡ್ಡಿದರ
ಎಸ್‌ಬಿಐ: 3 ಲಕ್ಷ ರೂಪಾಯಿವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಎಸ್‌ಬಿಐ ಬಡ್ಡಿದರ ಶೇ. 7 ಆಗಿದೆ.
ಪಿಎನ್‌ಬಿ: ಪಿಎನ್‌ಬಿ ಬ್ಯಾಂಕ್‌ನಲ್ಲಿ 3 ಲಕ್ಷ ರೂಪಾಯಿವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರ ಶೇ. 7 ಆಗಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್: 3 ಲಕ್ಷ ರೂಪಾಯಿವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಶೇ. 7ರಷ್ಟು ಬಡ್ಡಿದರವಿದೆ.
ಯುಸಿಒ ಬ್ಯಾಂಕ್: ಯುಸಿಒ ಬ್ಯಾಂಕ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರ ಶೇ. 7 ಆಗಿದೆ.
ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರವು ಶೇ. 8.85 ಆಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್: ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರ ಶೇ. 9 ಆಗಿದೆ.
ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್’ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಶೇ.9ರಷ್ಟು ಬಡ್ಡಿದರ ನಿಗದಿಪಡಿಸಿದೆ.