ಅಗಲಿದ ಸ್ವಯಂಸೇವಕನ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಈಶ್ವರಮಂಗಲದ ಹಿಂದೂ ಜಾಗರಣ ವೇದಿಕೆ
ಬಾಲ್ಯದಿಂದಲೇ ಸಂಘದ ಗರಡಿಯಲ್ಲಿ ಪಳಗಿ ನಂತರ ಪರಿವಾರ ಸಂಘಟನೆ ಹಿಂದು ಜಾಗರಣ ವೇದಿಕೆ ಈಶ್ವರಮಂಗಲದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ದೇವಿಪ್ರಸಾದ್. ಈ ಹಿಂದೆ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಈಗಾಗಲೇ ಮೃತರು ಎಲ್ಲರನ್ನೂ ಅಗಲಿ ಒಂದು ವರ್ಷವಾಗಿದೆ. ಇದೀಗ ಅವರ ಕನಸಾಗಿದ್ದ ಮನೆಯನ್ನು ಸಂಘಟನೆಯು ಕಟ್ಟಿ ಕೊಟ್ಟಿದ್ದು, ಅವರನ್ನು ನೆನೆದು ಕಾರ್ಯಕರ್ತರು ಭಾವುಕರಾಗಿದ್ದಾರೆ.
ದೇವಿಪ್ರಸಾದ್ ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ನಂತರ ಹೊರ ದೇಶದಲ್ಲಿ ಉದ್ಯೋಗದಲ್ಲಿ ತೊಡಗಿದ್ದರು. ಆದರೂ ಸಂಘಟನೆಯ ಬಗ್ಗೆ ಕಾಳಜಿ ವಹಿಸುತ್ತಿದ್ದು, ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಸಲಹೆ, ಸೂಚನೆ, ಸಹಕಾರ ನೀಡುತ್ತಿದ್ದರು.
ಕಳೆದ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸುಖ ಸಂಸಾರ ನಡೆಸುತ್ತಿದ್ದರು. ಪತ್ನಿ ತುಂಬು ಗರ್ಭಿಣಿಯೂ ಆಗಿದ್ದರು. ಸ್ವಲ್ಪ ಸಮಯದ ಬಳಿಕ ವಿದೇಶದಿಂದ ಬೆಂಗಳೂರಿನ ಬಂದು ಹೊಸ ಕಂಪನಿಯಲ್ಲಿ ಸೇರಿಕೊಂಡಿದ್ದರು. ನಂತರ ಒಂದು ಹೊಸ ಕಾರನ್ನು ಖರೀದಿಸಿದ್ದರು. ಅದರಲ್ಲಿ ಬೆಂಗಳೂರಿನಿಂದ ಹೊರಟ ದೇವಿಪ್ರಸಾದ್ ಮತ್ತು ಆತನ ಸ್ನೇಹಿತ ದಾರಿ ಮಧ್ಯೆ ಭೀಕರ ಅಪಘಾತವೊಂದಕ್ಕೆ ಬಲಿಯಾಗಿ ಇಬ್ಬರೂ ಮೃತಪಟ್ಟರು.
ಮೃತನ ಪತ್ನಿ ಮರುದಿನ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಆದರೆ ಮಗುವನ್ನು ನೋಡಲು ತಂದೆಯೇ ಇರಲಿಲ್ಲ. ಇದಂತು ದುಃಖದ ವಿಚಾರವಾಗಿದ್ದು, ದೇವಿಪ್ರಸಾದ್ ಒಂದು ಒಳ್ಳೆಯ ಮನೆ ಕಟ್ಬೇಕು ಅಂತ ಕನಸು ಹೊತ್ತಿದ್ದರು. ಅದಕ್ಕಾಗಿ ತುಂಬಾನೆ ಕಷ್ಟಪಟ್ಟಿದ್ದರು. ಆದರೆ ಆತನ ಸಾವಿನಿಂದ ಎಲ್ಲವೂ ಕನಸಾಗಿಯೇ ಉಳಿದಿತ್ತು.
ಸದ್ಯ ದೇವಿಪ್ರಸಾದ್ ಕನಸನ್ನು ಹಿಂದು ಜಾಗರಣ ವೇದಿಕೆ ಈಶ್ವರಮಂಗಲ ಘಟಕ ನನಸು ಮಾಡಿದೆ. ಊರ ಪರವೂರ ದಾನಿಗಳ,ಹಿತೈಷಿಗಳ ಸಹಕಾರದಿಂದ ಮನೆಕೆಲಸ ಪ್ರಾರಂಭ ಮಾಡಿ ಇದೀಗ ಕೆಲಸ ಮುಗಿದಿದ್ದು, ಜನವರಿ 28 ನೇ ಶನಿವಾರದಂದು ಗೃಹಪ್ರವೇಶಕ್ಕೆ ಸಂಘಟನೆ ಮುಹೂರ್ತ ಫಿಕ್ಸ್ ಮಾಡಿದೆ. ಹಿಂ.ಜಾ.ವೇ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿ,ಕೆಲಸ ಪೂರ್ತಿಗೊಳಿಸಿ, ಇನ್ನೆನು ಸಂಘಟನೆಯ ಪ್ರಮುಖರ ಸಮ್ಮುಖದಲ್ಲಿ ಹಸ್ತಾಂತರಿಸಲಿದೆ. ಹಾಗೇ ಇಂದು ಸಂಘಟನೆಯ ಕಾರ್ಯಕರ್ತರು ದೇವಿಪ್ರಸಾದ್ ಅವರನ್ನು ನೆನೆದು, ಅವರು ಯಾವತ್ತೂ ನಮ್ಮ ಮನದಲ್ಲಿರುತ್ತಾರೆ, ಕುಟುಂಬದ ಜೊತೆ ಸದಾ ಸಂಘಟನೆ ಇರುತ್ತದೆ ಎಂದು ಹೇಳಿದ್ದಾರೆ.