ಮಗನ ಸಾವಿನ ಸೇಡು ಈ ರೀತಿ ತೀರಿಸಿಕೊಂಡ ತಂದೆ | 7 ಜನರ ಬಲಿ ಪಡೆದೇ ಬಿಟ್ಟಿತು ತಂದೆಯ ದ್ವೇಷ | ಅಷ್ಟಕ್ಕೂ ಆಗಿದ್ದೇನು ?

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಡುವಾಂಡ್ ತಹಸಿಲಲ್ ಪರ್ಗಾಂವ್ ಸೇತುವೆಯ ವ್ಯಾಪ್ತಿಯಲ್ಲಿ ಬರುವ ಭೀಮಾನದಿ ಪಾತ್ರದಲ್ಲಿ ಜನವರಿ 24 ರಂದು ಪತ್ತೆಯಾದ ಒಂದೇ ಕುಟುಂಬದ 7ಜನರ ಶವದ ಕುರಿತಂತೆ ರೋಚಕ ಮಾಹಿತಿಯೊಂದು ಹೊರ ಬಿದ್ದಿದೆ.

ನದಿಯಲ್ಲಿ ಒಂದೇ ಕುಟುಂಬದ 7 ಜನರ ಶವ ಪತ್ತೆಯಾದ ಸಂದರ್ಭದಲ್ಲಿ ಅವರೆಲ್ಲರೂ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಖಾಕಿ ಪಡೆಗೆ ಭಯಾನಕ ಮಾಹಿತಿ ಲಭ್ಯವಾಗಿದೆ. ಇದು ಆತ್ಮಹತ್ಯೆ ಪ್ರಕರಣ ಆಗಿರದೇ, 7 ಜನರನ್ನು ಕೂಡ ಕೊಲೆ ಮಾಡಿ ನದಿಗೆ ಎಸೆಯಲಾಗಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಮೃತರನ್ನು 45 ರ ಹರೆಯದ ಮೋಹನ್ ಪವಾರ್, ಆತನ ಪತ್ನಿ 40 ವರ್ಷದ ಸಂಗೀತಾ ಮೋಹನ್(Sangita Mohan), ಈ ದಂಪತಿಯ ಮಗಳಾದ 24 ವರ್ಷದ ರಾಣಿ ಪುಲ್ವಾರೆ( (Rani Fulware) ಅಳಿಯ 28 ವರ್ಷದ ಶ್ಯಾಮ್ ಪುಲ್ವಾರೆ ಹಾಗೂ ಮೂರರಿಂದ 7 ವರ್ಷ ಪ್ರಾಯದ ಮೂವರು ಮಕ್ಕಳ ಶವ ಭೀಮಾ ನದಿಯಲ್ಲಿ ಪತ್ತೆಯಾಗಿತ್ತು. ಈ ಮೃತರ ಸಂಬಂಧಿಕರೇ ಇವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪುಣೆಯಲ್ಲಿ ನದಿಯಲ್ಲಿ 7 ಜನರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೃತರ ಐವರು ಸಂಬಂಧಿಕರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಏಳು ಶವಗಳು ಭೀಮಾ ನದಿಪಾತ್ರದಲ್ಲಿ ಪರಸ್ಪರ 200 ರಿಂದ 300 ಮೀಟರ್ ದೂರದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಾಲ್ಕು ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ನೀರಿನಲ್ಲಿ ಮುಳುಗಿದ್ದು ಕಾರಣ ಎಂದು ತಿಳಿದು ಬಂದಿದೆ. ಮೃತರು ಮರಾಠವಾಡ (Marathwada region) ಪ್ರದೇಶದ ಬೀಡ್ (Beed) ಮತ್ತು ಉಸ್ಮಾನಾಬಾದ್ (Osmanabad) ಜಿಲ್ಲೆಯವರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಶೋಕ್ ಕಲ್ಯಾಣ್ ಪವಾರ್ (Ashok Kalyan Pawar), ಶ್ಯಾಮ್ ಕಲ್ಯಾಣ್ ಪವಾರ್, ಶಂಕರ್ ಕಲ್ಯಾಣ್ ಪವಾರ್(Shankar Kalyan Pawar), ಪ್ರಕಾಶ್ ಕಲ್ಯಾಣ್ ಪವಾರ್ (Prakash Kalyan Pawar) ಹಾಗೂ ಕಾಂತಾಬಾಯ್ ಸರ್ಜೆರಾವ್ ಜಾಧವ್ ಬಂಧಿತರಾಗಿದ್ದು, ಇವರು ಮೋಹನ್ ಪವಾರ್ ಅವರ ಸಂಬಂಧಿಕರಾಗಿದ್ದಾರೆ.

ಅಶೋಕ್ ಪವಾರ್ ಅವರ ಪುತ್ರ ಧನಂಜಯ್ ಪವಾರ್ ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದ್ದು, ಪ್ರಾಥಮಿಕ ತನಿಖೆಯ ಮೂಲಕ ಆರೋಪಿ ಅಶೋಕ್ (Ashok) ತನ್ನ ಮಗನ ಸಾವಿನಿಂದ ಕುಪಿತನಾಗಿದ್ದ ಎನ್ನಲಾಗಿದೆ. ಹೀಗಾಗಿ, ತನ್ನ ಮಗ ಧನಂಜಯ್ ಸಾವಿಗೆ ಮೋಹನ್ ಅವರ ಮಗನೇ ನೇರ ಹೊಣೆ ಎಂದು ಅಂದಾಜಿಸಿ ಹಗೆ ತೀರಿಸಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ. ತನ್ನ ಮಗನ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಅಶೋಕ್ ಇಡೀ ಕುಟುಂಬವನ್ನೇ ಕೊಲೆ ಮಾಡಲು ಯೋಜನೆ ಹಾಕಿಕೊಂಡಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ತಿಳಿಸಿದ್ದಾರೆ ಎನ್ನಲಾಗಿದೆ.

ಎಲ್ಲಾ ಐವರು ಆರೋಪಿಗಳನ್ನು ಅಹ್ಮದ್‌ನಗರ ಜಿಲ್ಲೆಯ ಪರ್ನರ್ ತಹಸಿಲ್‌ನಿಂದ (Parner tehsil) ಬಂಧಿಸಲಾಗಿದೆ. ಇದರ ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 120 ಬಿ (ಅಪರಾಧ ಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದ್ದು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.