ತಮ್ಮದೇ ಪಕ್ಷಕ್ಕೆ ಕಂಟಕ ಆಗ್ತಾರಾ ದೇವೇಗೌಡರ ಸೊಸೆ! ಎಂಪಿ ಎಲೆಕ್ಷನಲ್ಲಿ ಮೊಮ್ಮಕ್ಳಿಗೆ ಮಣೆಹಾಕಿದ್ದ ಗೌಡ್ರು, ಈ ಬಾರಿ ಸೊಸೆಯ ಭವಿಷ್ಯ ಬರೀತಾರಾ?
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್ ಡಿ ದೇವೇಗೌಡರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊಮ್ಮಕ್ಕಳ ಚುನಾವಣಾ ಕ್ಷೇತ್ರಗಳ ತಲೆ ಬಿಸಿ ಎದುರಾಗಿತ್ತು. ಇದೇ ರೀತಿ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ತಮ್ಮ ಸೊಸೆ ಭವಾನಿ ರೇವಣ್ಣನವರ ವಿಚಾರ ಸವಾಲಾಗಿ ಕಾಡುತ್ತದೆಯಾ? ಗೌಡರ ಮನೆಯ ಸೊಸೆಯೇ ತಮ್ಮ ಪಕ್ಷಕ್ಕ ಕಂಟಕವಾಗ್ತಾರಾ? ಹಠ ಬಿಡದ ಭವಾನಿ ಚುನಾವಣೆಗೆ ನಿಲ್ತಾರಾ? ಅನ್ನೋ ಪ್ರಶ್ನೆಗಳು ಎದುರಾಗಿದೆ. ಅಲ್ಲದೆ ಭವಾನಿ ಅವರ ಹಲವು ನಡೆಗಳು ಕುತೂಹಲಕ್ಕೆ ಕಾರಣವಾಗಿದೆ.
ಅಂದಹಾಗೆ ಭವಾನಿ ರೇವಣ್ಣ ಶಾಸಕಿ ಆಗಬೇಕೆಂಬ ಆಸೆ ನಿನ್ನೆ ಮೊನ್ನೆಯದ್ದಲ್ಲ. 2013ರಿಂದ ಅವರು ಶಾಸಕಿ ಆಗ್ಬೇಕೆಂಬ ಕನಸು ಕಾಣುತ್ತಿದ್ದಾರೆ. ಆದರದು ನನಸಾಗುತ್ತಿಲ್ಲ. ಹುಣಸೂರು, ಕೆ.ಆರ್.ನಗರ, ಬೇಲೂರು ಕ್ಷೇತ್ರಗಳ ಕಡೆಗಳಲ್ಲೂ ಆಸೆ ಯಿಂದ ನೋಡಿದ್ದ ಭವಾನಿಯವರಿಗೆ ಅದಾವುದೂ ಕೈಗೆಟುಕಲಿಲ್ಲ. ಅವೆಲ್ಲಾ ಕ್ಷೇತ್ರಗಳ ಆಸೆ ಮುಗಿದ ಅಧ್ಯಾಯವಾಗಿದೆ. ಆದ್ರೆ ಸ್ವಂತ ಜಿಲ್ಲೆ ಹಾಸನದಲ್ಲಾದ್ರೂ ಆ ಕನಸನ್ನ ನನಸು ಮಾಡಿಕೊಳ್ಳುವ ಆಲೋಚನೆಯಲ್ಲಿ ಭವಾನಿ ಪಟ್ಟು ಹಿಡಿದಿದ್ದಾರೆ
ಅಲ್ಲದೆ ಇತ್ತೀಚೆಗೆ ಭವಾನಿ ರೇವಣ್ಣನವರು ಕಾರ್ಯಕ್ರಮವೊಂದರಲ್ಲಿ ನಾನೇ ಹಾಸನದ ಜೆಡಿಎಸ್ ಅಭ್ಯರ್ಥಿ, ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದಿದ್ದರು. ಇದರ ಕುರಿತು ಸಾಕಷ್ಟು ಚರ್ಚೆಗಳು ಆಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಾಯಕ ಕುಮಾರಸ್ವಾಮಿ, ಅಭ್ಯರ್ಥಿಗಳ ಹಂಚಿಕೆಯನ್ನು ಪಕ್ಷ ಮಾಡುತ್ತದೆ. ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ. ಆಸೆ ವ್ಯಕ್ತಪಡಿಸಲು ಯಾರಿಗೂ ಅಡ್ಡ ಮಾಡಲ್ಲ. ಅಂತೆಯೇ ಭವಾನಿ ಅವ್ರು ತಾವು ಹಾಸದಲ್ಲಿ ಸ್ಪರ್ಧಿಸಲು ಒಲವು ತೋರಿದ್ದಾರೆ ಅಷ್ಟೇ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದು ಕುಟುಂಬದೊಳಗೂ ರಾಜಕೀಯ ಕಲಹಕ್ಕೆ ನಾಂದಿಯಾಗಿರಬಹುದು.
ಈ ಎಲ್ಲಾ ಚರ್ಚೆಗಳಿಂದ ದೇವೇಗೌಡರ ಮುಂದೆಯೇ ಭವಾನಿ ಸ್ಪರ್ಧೆಯ ಕುರಿತು ಅಂತಿಮಗೊಳಿಸುವ ನಿರ್ಧಾರ ಆಗಲಿದೆ ಎನ್ನಲಾಗಿದೆ. ಈ ನಡುವೆ ರೇವಣ್ಣ, ಪ್ರಜ್ವಲ್ ರೇವಣ್ಣ ಕೂಡ ಭವಾನಿ ಅವರ ಟಿಕೆಟ್ ಕುರಿತು ದೇವೇಗೌಡರೇ ಡಿಸೈಡ್ ಮಾಡ್ಲಿ ಎಂದಿದ್ದಾರೆ. ಹಾಗಾಗಿ ಹೆಚ್.ಡಿ.ಕುಮಾರಸ್ವಾಮಿ ಬಹಿರಂಗ ಹೇಳಿಕೆ ಬಗ್ಗೆ ಗೌಡರು ಯಾವ ರಾಜಿ ಸೂತ್ರವನ್ನು ಪ್ರಕಟಿಸಬಹುದು ಎಂದು ಎಲ್ಲರ ಚಿತ್ತ ಅತ್ತ ನಟ್ಟಿದೆ ಎನ್ನಬಹುದು.
ಈ ಮೊದಲು ಲೋಕಸಭಾ ಚುನಾವಣೆಯಲ್ಲೂ ದೇವೇಗೌಡರಿಗೆ ಇದೇ ಸವಾಲು ಎದುರಾಗಿತ್ತು. ತಮ್ಮ ಕಡೇ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟು ತುಮಕೂರಿಗೆ ಹೋಗಿದ್ರು ದೊಡ್ಡ ಗೌಡ್ರು. ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದಿದ್ರು, ತುಮಕೂರಲ್ಲಿ ದೇವೇಗೌಡರು ಸೋತಿದ್ರು ಆದ್ರೀಗ ಮತ್ತೆ ಸೊಸೆ ಸ್ಪರ್ಧೆಯ ವಿಚಾರವಾಗಿಯೂ ದೊಡ್ಡ ಗೌಡ್ರು ನಿರ್ಧಾರ ತೆಗೆದುಕೊಳ್ಳಬೇಕು. ಗೌಡ್ರು ಪಕ್ಷದ ಮಾಜಿ ಶಾಸಕನ ಮಗನ ಪರ ನಿಲ್ತಾರಾ? ಸೊಸೆ ಪರ ನಿಲ್ತಾರಾ? ಎಂದು ಕಾದು ನೋಡಬೇಕಿದೆ.