ಭೀಕರ ಬಾಂಬ್ ಸ್ಫೋಟ : 50 ಮಂದಿ ಕುರಿಗಾಹಿಗಳ ದಾರುಣ ಸಾವು!
ಉತ್ತರ ಮಧ್ಯ ನೈಜೀರಿಯಾದ ನಸರವಾ ಮತ್ತು ಬೆನ್ಯೂ ರಾಜ್ಯಗಳ ನಡುವೆ ಶಂಕಿತ ಬಾಂಬ್ ಸ್ಫೋಟದಿಂದ ಜಾನುವಾರು ಸೇರಿದಂತೆ 50 ಜನ ಕುರಿಗಾಹಿಗಳು ಮೃತಪಟ್ಟ ದುರ್ಘಟನೆ ನಡೆದಿದೆ. ಸದ್ಯ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ನಸರವಾ ಪೊಲೀಸ್ ಕಮಿಷನರ್ ಮೈಯಾಕಿ ಮಹಮ್ಮದ್ ಬಾಬಾ ಮಾಹಿತಿ ನೀಡಿದ್ದಾರೆ.
ನೈಜೀರಿಯಾದ ಮಿಯೆಟ್ಟಿ ಅಲ್ಲಾ ಕ್ಯಾಟಲ್ ಬ್ರೀಡರ್ಸ್ ಅಸೋಸಿಯೇಶನ್‌ನ ವಕ್ತಾರ ತಸಿಯು ಸುಲೇಮಾನ್ ಪ್ರಕಾರ ಫುಲಾನಿ ಕುರಿಗಾರರ ಗುಂಪು ತಮ್ಮ ಜಾನುವಾರುಗಳನ್ನು ಬೆನ್ಯೂದಿಂದ ನಸರಾವಾಕ್ಕೆ ಸಾಗಿಸುತ್ತಿದ್ದರು. ಈ ವೇಳೆ ಬಾಂಬ್ ಸ್ಪೋಟಗೊಂಡಿದೆ ಎಂದಿದ್ದಾರೆ. ಸ್ಫೋಟಗೊಂಡ ಸ್ಥಳದಲ್ಲಿ 54 ಜನರು ಸಾವನ್ನಪ್ಪಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಮಧ್ಯ ನೈಜೀರಿಯಾ ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳಿಗೆ ಕುಖ್ಯಾತಿ ಪಡೆದಿದೆ. ಮಧ್ಯ ಬೆಲ್ಟ್ ಎಂದೂ ಕರೆಯಲ್ಪಡುವ ಉತ್ತರ ಮಧ್ಯ ನೈಜೀರಿಯಾ ಆಗಾಗ ಫುಲಾನಿ ಪಶುಪಾಲಕರು ಮತ್ತು ಮುಖ್ಯವಾಗಿ ಕ್ರಿಶ್ಚಿಯನ್ನರಾದ ರೈತರ ನಡುವಿನ ಘರ್ಷಣೆಗಳಿಂದಾಗಿ ಹಿಂಸಾಚಾರಕ್ಕೆ ಗುರಿಯಾಗುತ್ತದೆ. ಇದನ್ನು ಹೆಚ್ಚಾಗಿ ಜನಾಂಗೀಯ-ಧಾರ್ಮಿಕ ಸಂಘರ್ಷ ಎಂದು ಕರೆಯಲಾಗುತ್ತದೆ.
ಆದರೆ ತಜ್ಞರ ಪ್ರಕಾರ ಜನಸಂಖ್ಯೆಯ ಬೆಳವಣಿಗೆ ಮತ್ತು ಹವಾಮಾನ ಬದಲಾವಣೆಯು ಬೇಸಾಯಕ್ಕೆ ಮೀಸಲಾದ ಪ್ರದೇಶದ ವಿಸ್ತರಣೆಗೆ ಕಾರಣವಾಗಿದೆ. ಅಲೆಮಾರಿಗಳ ಜಾನುವಾರುಗಳನ್ನು ಮೇಯಿಸಲು ಕಡಿಮೆ ಭೂಮಿ ಲಭ್ಯವಿದೆ. ಹೀಗಾಗಿ ಇಲ್ಲಿ ಸಂಘರ್ಷಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ.
ದನಗಾಹಿಗಳನ್ನು ಪ್ರತಿನಿಧಿಸುವ ಗುಂಪಿನ ಸದಸ್ಯರೊಬ್ಬರು ಮಿಲಿಟರಿ ಸ್ಟ್ರೈಕ್ನಿಂದಾಗಿ ಈ ಸ್ಫೋಟ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ನಸರಾವಾ ಗವರ್ನರ್ ಅಬ್ದುಲ್ಲಾಹಿ ಸುಲೆ ಈ ಘಟನೆಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆನ್ನುವ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಸ್ಫೋಟದ ಹಿಂದೆ ಯಾರಿದ್ದಾರೆ ಎಂಬ ಮಾಹಿತಿಯನ್ನು ಈವರೆಗೂ ನೀಡಲಾಗಿಲ್ಲ. ಇನ್ನು ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿದು ಬರಬೇಕಿದೆ.