ತಲೆಹೊಟ್ಟು ನಿವಾರಣೆ ಮಾಡುವಲ್ಲಿ ಈ ತರಕಾರಿ ತುಂಬಾ ಸಹಾಯಕಾರಿ!
ಆರೋಗ್ಯಕರ, ಬಲವಾದ ಮತ್ತು ಹೊಳಪುಳ್ಳ ಕೂದಲು ಪುರುಷರು ಮತ್ತು ಮಹಿಳೆಯರಿಗೆ ಅವಶ್ಯಕವಾಗಿದೆ. ಸುಂದರವಾದ ಕೂದಲು ಎಂದರೆ ದುಬಾರಿ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದು ಮಾತ್ರವಲ್ಲ. ಚರ್ಮದಂತೆಯೇ ಆರೋಗ್ಯಕರ ಕೂದಲು ಕೂಡ ಉತ್ತಮ ಪೋಷಣೆಯುಳ್ಳ ದೇಹದ ಸೂಚಕವಾಗಿದೆ. ಕಳಪೆ ಜೀವನ ಶೈಲಿಯಿಂದ ತಲೆಹೊಟ್ಟು, ಬೇಗನೆ ಕೂದಲು ಬೆಳ್ಳಗಾಗುವುದು ಹೀಗೆ ಅನೇಕ ಸಮಸ್ಯೆಗಳು ಉಲ್ಭಣವಾಗುತ್ತಿದೆ. ಆದರೆ ನಿಮಗೆ ತಿಳಿದಿದೆಯೆ? ಬೀಟ್ರೂಟ್ ನಿಮ್ಮ ಕೂದಲಿನ ಸಮಸ್ಯೆಗೆ ರಾಮಬಾಣವೆಂದು!!. ಇಲ್ಲವಾದರೆ, ಬನ್ನಿ ನಾವಿಂದು ನಿಮಗೆ ಬೀಟ್ರೂಟ್’ನ ಅದ್ಭುತ ಪ್ರಯೋಜನಗಳನ್ನು ತಿಳಿಸಿಕೊಡುತ್ತೇವೆ.
ಬೀಟ್ರೂಟ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಎಂಬುದು ಕೆಲವರಿಗೆ ಮಾತ್ರ ಗೊತ್ತು. ಕೇವಲ ಸಾಂಬಾರಿನಲ್ಲಿ ತೇಲಿಬಿಡುವ ತರಕಾರಿಯಲ್ಲ ಈ ಬೀಟ್ರೂಟ್. ಇದರ ಪೋಷಕಾಂಶಗಳು ಹೇರಳವಾಗಿದ್ದು, ಈ ತರಕಾರಿಯನ್ನು ಆಹಾರದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ದೇಹದಲ್ಲಿನ ರಕ್ತಹೀನತೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಬೀಟ್ರೂಟ್, ಕೂದಲಿನ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ತಲೆಹೊಟ್ಟಿಗೂ ಇದು ರಾಮಬಾಣವಿದ್ದಂತೆ.
ಬೀಟ್ರೂಟ್, ಶುಂಠಿ ಮತ್ತು ವಿನೇಗರ್:- ನೈಸರ್ಗಿಕವಾಗಿ ಸೌಂದರ್ಯ ಪಡೆಯಲು ನೀವು ಕೂದಲಿಗೆ ಕೂಡ ಬೀಟ್ ರೂಟ್ ಅನ್ನು ಬಳಸಬಹುದು. ಇದು ಕೂದಲಿಗೆ ಕಾಂತಿ ನೀಡುವುದರ ಜೊತೆಗೆ ಕೂದಲಿನ ಗುಣಮಟ್ಟವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳುವುದು. ಒಣ ತಲೆಬುರುಡೆ, ಕೂದಲು ಉದುರುವಿಕೆ ಮತ್ತು ಕಾಂತಿಯುತ ಕೂದಲು ಪಡೆಯಲು ನೀವು ಬೀಟ್ರೂಟ್ ಜ್ಯೂಸ್ ಬಳಸಿ. ಬೀಟ್ ರೂಟ್ ಜ್ಯೂಸ್ ಗೆ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಬೀಟ್ರೂಟ್ ಜ್ಯೂಸ್ಗೆ ವಿನೇಗರ್ ಹಾಕಿದರೆ ಆಗ ಒಣ ತಲೆಬುರುಡೆ ಸಮಸ್ಯೆಯು ನಿವಾರಣೆಯಾಗುತ್ತದೆ.
ಬೀಟ್ರೂಟ್ ಮತ್ತು ಬೇವಿನ ಮಿಶ್ರಣ:- ತಲೆಹೊಟ್ಟು ಕೂದಲನ್ನು ಹೆಚ್ಚು ಹಾನಿಗೊಳಿಸುತ್ತದೆ. ಇದನ್ನು ಹೋಗಲಾಡಿಸಲು ಬೀಟ್ರೂಟ್ ಮತ್ತು ಬೇವಿನ ಎಲೆಗಳ ಮಿಶ್ರಣವನ್ನು ತಯಾರಿಸಬಹುದು. ಕಹಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದನ್ನು ಫಿಲ್ಟರ್ ಮಾಡಿಕೊಳ್ಳಿ. ಅದಕ್ಕೆ 8 ರಿಂದ 10 ಹನಿ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿರಿ. ನಂತರ ಮಿಶ್ರಣಕ್ಕೆ ಬೀಟ್ರೂಟ್ ಪೇಸ್ಟ್ ಹಾಕಿ 20-25 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಈ ಮಿಶ್ರಣವನ್ನು ಫಿಲ್ಟರ್ ಮಾಡಿಕೊಂಡು, ಬೀಟ್ರೂಟ್ ಬೆರೆಸಿದ ಬೇವಿನ ನೀರನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟು ಮಾಯವಾಗುತ್ತದೆ.
ಬೀಟ್ರೂಟ್ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ನೀವು ನಿಯಮಿತವಾಗಿ ಬೀಟ್ರೂಟ್ ರಸವನ್ನು ಸೇವನೆ ಮಾಡುವುದು ಉತ್ತಮ. ಇದು ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಇದರ ಪೋಷಣೆಯನ್ನು ಹೆಚ್ಚಿಸಲು ಜೊತೆಗೆ ನೆಲ್ಲಿಕಾಯಿ ಮತ್ತು ಕ್ಯಾರೆಟ್ ಬೀಟ್ರೂಟ್ ಬೆರೆಸಿ, ಜೊತೆಗೆ 2-3 ಕರಿಬೇವಿನ ಎಲೆಗಳನ್ನು ಕೂಡ ಸೇರಿಸಿಕೊಂಡು ಜ್ಯೂಸ್ ಮಾಡಿಕೊಂಡು ಸೇವಿಸಿರಿ.
ತಲೆ ಹೊಟ್ಟಿಗೆ ಕಾರಣವೇನು?
ತಲೆಹೊಟ್ಟಿಗೆ ಪ್ರಮುಖ ಕಾರಣ ಕೂದಲಿನ ಆರೈಕೆಗೆಂದು ನಾವು ಬಳಸುವ ಹೇರ್ ಪ್ರಾಡೆಕ್ಟ್‌ಗಳು. ಹೇರ್ ಕಲರಿಂಗ್, ಕೂದಲಿನಲ್ಲಿ ಎಣ್ಣೆ ಉಳಿಸಿಕೊಳ್ಳುವುದು ಇವೆಲ್ಲಾ ತಲೆಹೊಟ್ಟಿಗೆ ಪ್ರಮುಖ ಕಾರಣಗಳು. ತಲೆ ಬುಡದಲ್ಲಿ ಎಣ್ಣೆ ಹೆಚ್ಚಾದಾಗ, ಎಣ್ಣೆಯಿಲ್ಲದ ಕೂದಲಿನ ಬುಡ ಒಣಗಿದಾಗ ಶಿಲೀಂದ್ರಗಳ ಸೋಂಕಿನಿಂದಾಗಿ ತಲೆಹೊಟ್ಟಿನ ಸಮಸ್ಯೆ ಕಂಡು ಬರುತ್ತದೆ.