ಫೋರ್ಡ್ ಕಂಪನಿಯಿಂದ ವಿಚಿತ್ರ ಆಫರ್ | ಈ ಕಾರಿನ ಬುಕ್ಕಿಂಗ್ ರದ್ದು ಮಾಡಿದರೆ 2 ಲಕ್ಷ ನಿಮಗೆ!
ಪ್ರಸ್ತುತ ಮಾರುಕಟ್ಟೆಯಲ್ಲಿ ಕಾರುಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಲಿದ್ದು, ಗ್ರಾಹಕರನ್ನು ಸೆಳೆಯಲು ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೆ ಇದೀಗ ಅಮೇರಿಕಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಫೋರ್ಡ್ SUV ಕಂಪನಿಯು ಇಲ್ಲಿವರೆಗೂ ನೀವು ಕೇಳಿರದ ನೋಡಿರದ, ವಿಚಿತ್ರ ಆಫರ್ ಒಂದನ್ನು ನೀಡಿದೆ. ಅದೇನಪ್ಪಾ ಅಂದ್ರೆ ಈ ಕಂಪನಿಯ ಕಾರಿನ ಬುಕ್ಕಿಂಗ್ ಅನ್ನು ರದ್ದು ಮಾಡಿದರೆ ನಿಮಗೆ ಕೊಡ್ತಾರೆ ಭರ್ಜರಿ 2 ಲಕ್ಷ ನಗದು!!!
ಹೌದು, ಕೇಳಲು ವಿಚಿತ್ರವಾಗಿದೆ ಅಲ್ವಾ? ಆದ್ರೆ ಇದು ಅಪ್ಪಟ ಸತ್ಯ. ಅಷ್ಟಕ್ಕೂ ಈ ನಿರ್ಧಾರದ ಹಿಂದೆ ಒಂದು ಕಾರಣಯಿದೆ. ಫೋರ್ಡ್ನ ಬಹುಬೇಡಿಕೆಯ ಬ್ರಾಂಕೋ ಎಸ್ಯುವಿಯನ್ನು ಫೋರ್ಡ್ ಮೋಟಾರ್ ಕಂಪನಿಯು 2021 ರಲ್ಲಿ ಪರಿಚಯಿಸಿತು. ಅಮೆರಿಕಾದ ಈ ಆಟೋ ದೈತ್ಯ ಫೋರ್ಡ್ ಕಂಪನಿ SUV ಉತ್ಪಾದನೆಯಲ್ಲಿ ಹೆಣಗಾಡುತ್ತಿದೆ. ಸದ್ಯ ಡೆಲಿವರಿ ನೀಡಲು ಆಗದ ಕಾರಣ ಬುಕಿಂಗ್ ಹಿಂಪಡೆಯಲು ತನ್ನ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.
ಇದರ ಬುಕಿಂಗ್ ಮಾಡಿಕೊಂಡವರು ಬುಕಿಂಗ್ ರದ್ದು ಮಾಡಿಕೊಂಡರೆ $2,500 (ಅಂದಾಜು 2 ಲಕ್ಷ ರೂ.) ವರೆಗೆ ನಗದು ಅಥವಾ ಫೋರ್ಡ್ನ ಇತರ ಕಾರುಗಳ ಮೇಲೆ ರಿಯಾಯಿತಿಯನ್ನು ಪಡೆಯಬಹುದು ಎಂದು ಕಂಪನಿ ತಿಳಿಸಿದೆ. ಅಂದರೆ ಇದರ ಅರ್ಥ ಬ್ರಾಂಕೊ ಎಸ್ಯುವಿಯನ್ನು ಬುಕ್ ಮಾಡಿಕೊಂಡ ಗ್ರಾಹಕರು ಈ ಕಾರನ್ನು ಪಡೆಯಬೇಕಾದರೆ ವರ್ಷಗಳಗಟ್ಟಲೇ ಕಾಯಬೇಕಾಗುತ್ತದೆ.
ಪ್ರಸ್ತುತ ಆಫರ್’ನಲ್ಲಿ ಬ್ರಾಂಕೋ ಘಟಕದ ಡೆಲಿವರಿಗಾಗಿ ಕಾಯುತ್ತಿರುವ ಗ್ರಾಹಕರು ತಮ್ಮ ಆರ್ಡರ್ ಅನ್ನು ರದ್ದುಗೊಳಿಸಬೇಕು ಅಥವಾ ಅಮೇರಿಕನ್ ಆಟೋ ಕಂಪನಿಯಿಂದ ತಯಾರಿಸಿದ ಇತರ ಕಾರನ್ನು ಬುಕ್ ಮಾಡಿಕೊಳ್ಳಬೇಕು. carsdirect.com ಹೇಳುವ ಪ್ರಕಾರ, ಫೋರ್ಡ್ ಬ್ರಾಂಕೋದ MY (ಮಾದರಿ ವರ್ಷ) 2023 ಕ್ಕೆ ನೀಡಿದ ಕೊಡುಗೆಯಲ್ಲಿ, ಖರೀದಿದಾರನು ತನ್ನ ಬುಕಿಂಗ್ ಅನ್ನು SUV ಯಿಂದ ಕಂಪನಿಯು ತಯಾರಿಸಿದ ಮತ್ತೊಂದು ವಾಹನಕ್ಕೆ ಬದಲಾಯಿಸಿದರೆ ರಿಯಾಯಿತಿಯನ್ನು ನೀಡಲಾಗುತ್ತದೆ.
ಗ್ರಾಹಕರು ಕೆಳಗೆ ನೀಡಿರುವ ಈ ಏಳು ಮಾದರಿಗಳಲ್ಲಿ ಯಾವುದಾದರೂ ಒಂದು ವಾಹನಕ್ಕೆ ಬದಲಾಯಿಸಬಹುದು.
ಎಸ್ಕೇಪ್ (Escape), ಬ್ರಾಂಕೋ ಸ್ಪೋರ್ಟ್ (Bronco Sport), ಎಡ್ಜ್ (Edge), ಎಕ್ಸ್ಪ್ಲೋರರ್ (Explorer), ಎಕ್ಸ್ಪಡೆಷನ್ (Expedition), ರೇಂಜರ್ (Ranger) ಮತ್ತು F-150 ಮಾದರಿಗಳನ್ನು ಬುಕ್ ಮಾಡಿಕೊಳ್ಳಬಹುದು. ಏಪ್ರಿಲ್ 3, 2023 ರವರೆಗಿನ ಮಾರಾಟದ ದಿನಾಂಕದೊಂದಿಗೆ ವಾಹನಗಳ ಮೇಲೆ ಈ ಒಪ್ಪಂದವು ಲಭ್ಯವಿರುತ್ತದೆ. ಖರೀದಿದಾರನು ಬುಕಿಂಗ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ ಪ್ರೋತ್ಸಾಹಕವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ.
ಉನ್ನತ-ಮಟ್ಟದ ವೈಶಿಷ್ಟ್ಯಗಳನ್ನೊಳಗೊಂಡ ಈ SUV ಯ ರೂಪಾಂತರಗಳ ಮೇಲೆ ಪರಿಣಾಮ ಬೀರಿದ ಪೂರೈಕೆಯ ನಿರ್ಬಂಧಗಳು, ಈಗ ಫೋರ್ಡ್ ಅನ್ನು ಇಂತಹ ಕೊಡುಗೆಯನ್ನು ನೀಡುವಂತೆ ಮಾಡಿದೆ. ಇನ್ನು ಬ್ರಾಂಕೋ ಉತ್ಪಾದನೆಯಲ್ಲಿ ಹೆಣಗಾಡುತ್ತಿರುವ ಡಿಯರ್ಬಾರ್ನ್-ಪ್ರಧಾನ ಕಛೇರಿಯ ಕಾರು ತಯಾರಕರು, ಇತ್ತೀಚಿನ ಬುಕಿಂಗ್ ಅಂಕಿ ಅಂಶಗಳನ್ನು ಮತ್ತು ಬಾಕಿ ಇರುವ ಬುಕಿಂಗ್ಗಳನ್ನು ಇನ್ನು ಬಹಿರಂಗಪಡಿಸಿಲ್ಲ. ಪ್ರಸ್ತುತ ಈ SUV ಗಾಗಿ ಹಲವಾರು ತಿಂಗಳುಗಳವರೆಗೆ ಕಾಯ ಬೇಕಾಗಿದೆ.
ಅನೇಕ ಜನರು ಈ ಜಾಕ್’ಪಾಟ್ ಕೊಡುಗೆಯನ್ನು ಬಳಸಬೇಕೋ ಅಥವಾ ಬೇಡವೋ ಎಂಬ ಗೊಂದಲಕ್ಕೊಳಗಾಗಿದ್ದಾರೆ. ಫೋರ್ಡ್ ಬ್ರಾಂಕೋ ಉತ್ತಮ ಕಾರು ಆಗಿದ್ದರೂ ಸಹ, 2 ಲಕ್ಷ ರೂಪಾಯಿ ಕ್ಯಾಶ್ಬ್ಯಾಕ್ನಿಂದಾಗಿ ಕೆಲವರು ಈ ಕೊಡುಗೆಯ ಲಾಭವನ್ನು ಪಡೆಯಲು ನಿರ್ಧರಿಸಿದ್ದಾರೆ. ಆದರೆ ಈ ಕಾರನ್ನು ಬುಕ್ ಮಾಡಿರುವ ಹಲವರು ಬೇರೆ ಕಾರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬ್ರಾಂಕೋ ಖರೀದಿಸಲು ನಿರ್ಧರಿಸಿದ್ದೇವೆ, ಆದ್ದರಿಂದ ನಾವು ಎಷ್ಟು ವರ್ಷ ಬೇಕಾದರೂ ಕಾಯಲು ಸಿದ್ಧವಿದ್ದೇವೆಂಬ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.