ಅತ್ಯಂತ ವೇಗದ ಟಿವಿಎಸ್ iQube | ಯಾವುದೂ ಇದನ್ನು ತಡೆಯೋಕೆ ಸಾಧ್ಯವಿಲ್ಲ!
ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಕಾಮನ್. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ನಡುವೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.
ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ. ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಜನರ ನಿರೀಕ್ಷೆ ತಕ್ಕಂತೆ ವಿಭಿನ್ನ ವಿಶೇಷತೆ ಮೂಲಕ ವಾಹನಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಡುತ್ತಿವೆ.
ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ST ಎಂಬ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಮೊದಲ ಎರಡು ರೂಪಾಂತರಗಳು ಪ್ರಸ್ತುತ ಮಾರಾಟಕ್ಕೆ ಲಭ್ಯವಿದ್ದು, ಆದರೆ, iQube ST ರೂಪಾಂತರದ ಮಾರಾಟ ಇನ್ನೂ ಕೂಡ ಪ್ರಾರಂಭವಾಗಿಲ್ಲ ಎನ್ನಲಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಟಿವಿಎಸ್ ಕಂಪನಿಯು ತಿಂಗಳಿಗೆ 9,000 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಅಗ್ಗದ ಆವೃತ್ತಿಯನ್ನು ಲಾಂಚ್ ಮಾಡಲು ಭರ್ಜರಿ ತಯಾರಿ ನಡೆಸುತ್ತಿವೆ ಎನ್ನಲಾಗಿದೆ. ಇದಕ್ಕೆ U546 ಎಂಬ ಕೋಡ್ ನೀಡಲಾಗಿದ್ದು, ಟಿವಿಎಸ್ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಜನವರಿ 2024 ರಿಂದ ಆರಂಭಿಸುವ ಸಂಭವವಿದ್ದು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಿಂಗಳಿಗೆ 25,000 ಯುನಿಟ್ ಉತ್ಪಾದಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ದೇಶದ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿ ಟಾಪ್ ಎಂಡ್ ರೂಪಾಂತರವಾಗಿ ಗುರುತಿಸಿಕೊಂಡಿರುವ ಟಿವಿಎಸ್ ಐಕ್ಯೂಬ್ ST ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಲಭ್ಯವಾಗಲಿದೆ. ಇದು 4 ಗಂಟೆ 6 ನಿಮಿಷಗಳಲ್ಲಿ ಇದರ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲಿದೆ. ಬರೋಬ್ಬರಿ 143 ಕಿಲೋಮೀಟರ್ ರೇಂಜ್ ನೀಡಲಿದ್ದು, 82 km/h ಟಾಪ್ ಸ್ವೀಡ್ ಅನ್ನು ಒಳಗೊಂಡಿದೆ. ಕಂಪನಿಯು ಈ ಸ್ಕೂಟರ್ ಆರಂಭಿಕ ಬೆಲೆಯನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ, 1.25 ಲಕ್ಷ ಪ್ರಾರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯ ವನ್ನು ಗಮನಿಸಿದರೆ, ಇದು ಫುಲ್-ಎಲ್‌ಇಡಿ ಲೈಟಿಂಗ್ ಜೊತೆಗೆ ಫುಲ್-ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಬಗ್ಗೆ ಗಮನಿಸಿದರೆ, 4.56 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಐಕ್ಯೂಬ್ ST ರೂಪಾಂತರದಲ್ಲಿ ಬಳಕೆ ಮಾಡಲಾಗಿದೆ. ಇದು ಸಂಪೂರ್ಣ ಚಾರ್ಜಿನಲ್ಲಿ 145 ಕಿಮೀ ರೇಂಜ್ ನೀಡಲಿದ್ದು, 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಎಂಟ್ರಿ ಲೆವೆಲ್ ಐಕ್ಯೂಬ್, ಮತ್ತು ಮಿಡ್-ಲೆವೆಲ್ ಐಕ್ಯೂಬ್ ಎಸ್ ರೂಪಾಂತರದಲ್ಲಿ ಬಳಸಲಾಗಿದೆ.
ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಕರ್ಷಕ ಲುಕ್ ಹೊಂದಿದ್ದು, ಹ್ಯಾಂಡಲ್‌ಬಾರ್ ಕೌಲ್‌ನಲ್ಲಿ U- ಆಕಾರದ LED DRL ಜೊತೆಗೆ ಸಿಲ್ಕ್ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಅನ್ನು ಒಳಗೊಂಡಿದೆ. USB ಚಾರ್ಜಿಂಗ್ ಸಾಕೆಟ್ ಕೂಡ ಇದ್ದು, ಇದರ ಜೊತೆಗೆ ವಿಶಾಲವಾದ ಫುಟ್‌ಬೋರ್ಡ್, ದೊಡ್ಡದಾದ ಸ್ಟೋರೇಜ್ ಕಂಪಾರ್ಟ್‌ಮೆಂಟ್ ಹಾಗೂ ಲಗೇಜ್ ಹುಕ್ ಅನ್ನು ಒಳಗೊಂಡಿದೆ.
ಇದು ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ ನೀಡಲಿದೆ. ಇದರ ಜೊತೆಗೆ ರೈಡಿಂಗ್ ಅಂಕಿಅಂಶಗಳು, ರಿಮೋಟ್ ಬ್ಯಾಟರಿ ರೇಂಜ್ ಮತ್ತು ಜಿಯೋ ಫೆನ್ಸಿಂಗ್‌ನಂತಹ ವಿವಿಧ ಮಾಹಿತಿಗಳನ್ನು ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇಯನ್ನು ಕನೆಕ್ಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್-ಕಾಮಿಂಗ್ ಕಾಲ್, ಮೆಸೇಜ್ ನೋಟಿಫಿಕೇಶನ್ ಕೂಡ ಕಂಡುಬರುತ್ತದೆ. ಸುಲಭ ಪಾರ್ಕಿಂಗ್‌ಗಾಗಿ Q-ಪಾರ್ಕ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ ರೂ.1,12,231 ಆಗಿದ್ದು, ಸದ್ಯ ಮಿಡ್-ಲೆವೆಲ್ ರೂಪಾಂತರವಾಗಿರುವ ಐಕ್ಯೂಬ್ ಎಸ್ ಬೆಲೆ ರೂ.1,20,184 ಇದೆ. ಈ ಸ್ಕೂಟರ್ 7 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಫ್ರಂಟ್ ಡಿಸ್ಕ್ ಮತ್ತು ರೇರ್ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ.