Bengaluru: ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಫ್ಲೈ ಓವರ್ನಿಂದ ಹಣದ ಮಳೆ ಸುರಿದ ಅಸಾಮಿ | ಕಾರಣ ನಿಗೂಢ !
ಬೆಂಗಳೂರು: ನಗರದ ಮಾರ್ಕೆಟ್ ಫ್ಲೈ (Bengaluru KR Market) ಓವರ್ ನಲ್ಲಿ ಓರ್ವ ವ್ಯಕ್ತಿ ಹಣದ ಮಳೆಯನ್ನೇ ಸುರಿಸಿದ್ದಾರೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಫ್ಲೈ ಓವರ್ ಮೇಲೆ ವ್ಯಕ್ತಿಯೋರ್ವ ಬಂದಿದ್ದು ತನ್ನ ಕೈಯಲ್ಲಿದ್ದ ಚೀಲದಿಂದ ಹಣವನ್ನು ತೆಗೆದು ಜನರು ಮೇಲೆ ಎಸೆಯುತ್ತಾ ಹೋಗಿದ್ದಾನೆ. ಅಂದ ಹಾಗೆ ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು ಜನ ಹಣ ಸುರಿಯುತ್ತಿರುವ ಹಣದ ಮಳೆಯನ್ನು ಹಿಡಿಯಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು.
ಕೆಲವೊಂದು ಜನ ಈತನ ವರ್ತನೆಯಿಂದ ಗಾಬರಿಗೊಂಡಿದ್ದೂ ಇದೆ. ಕೆಲವರು ಎಸೆಯಬೇಡಿ ನಮಗೆ ಕೊಡಿ ಎನ್ನುತ್ತಿದ್ದರೆ, ಇನ್ನು ಕೆಲವರು ಈತ ಈ ರೀತಿ ಯಾಕೆ ಮಾಡುತ್ತಿದ್ದಾನೆ ಎಂದು ನೋಡುತ್ತಾ ನಿಂತಿದ್ದರು. ಈತ ತನ್ನ ಹಣ ಎಸೆಯುವ ಕೆಲಸ ಮುಗಿದ ಮೇಲೆ ಆ ಜಾಗದಿಂದ ಕಾಲ್ಕಿತ್ತಿದ್ದಾನೆ. ನನಗೆ ಜೀವನದಲ್ಲಿ ಜಿಗುಪ್ಸೆಬಂದಿದೆ ಎನ್ನುತ್ತಾ ಆ ವ್ಯಕ್ತಿ ಹತ್ತರ ನೋಟುಗಳನ್ನು ಗಾಳಿಯಲ್ಲಿ ತೋರಿದ್ದಾನೆ ಎನ್ನಲಾಗಿದೆ.
ಪ್ಲಾನ್ ಓವರ್ ಮೇಲೆ ನಿಂತು ನೋಟು ತೋರುವ ಆತನ ಕೃತ್ಯದಿಂದ ಅಲ್ಲಿದ್ದವರು ಗಾಬರಿ ಬಿದ್ದಿದ್ದರು. ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮೇಲಿನಿಂದ ವ್ಯಕ್ತಿ ಜಿಗಿಯುವ ಸಾಧ್ಯತೆಗಳ ಬಗ್ಗೆ ಕೂಡಾ ಅಲ್ಲಿದ್ದವರು ಗಾಬರಿಗೊಂಡಿದ್ದರು. ಆತನ ಬಳಿ 500 ರ ಹಸಿರು ಅಥವಾ 2000 ದ ಪಿಂಕ್ ನೋಟುಗಳು ಇದ್ದಿದ್ರೆ ಈ ರೀತಿ ಆತನಿಗೆ ಜಿಗುಪ್ಸೆ ಮೂಡುತ್ತಿರಲಿಲ್ಲ. ಬದಲಿಗೆ ಹತ್ತರ ನೋಟುಗಳೇ ಜಿಗುಪ್ಸೆಗೆ ಕಾರಣ ಎಂದು ಸೋಷಿಯಲ್ ಮೀಡಿಯಾ ತಮಾಷೆ ಮಾಡುತ್ತಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಕೆಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ನಿಂತು ಹಣ ಎಸೆದು ವ್ಯಕ್ತಿ ಹೋಗಿದ್ದಾನೆ. ಹತ್ತು ರೂಪಾಯಿ ನೋಟುಗಳನ್ನ ವ್ಯಕ್ತಿ ಎಸೆದು ಹೋಗಿದ್ದು, ಆದರೆ ಎಷ್ಟು ನೋಟು ಎಸೆದಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಸಿಟಿ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣ ಎಸೆದು ಹೋದ ವ್ಯಕ್ತಿ ಪತ್ತೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.