ನಿಮ್ಮ ಕಾರಿನ ಬ್ಯಾಟರಿ ಲೈಫ್ ಹೆಚ್ಚಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ವಾಹನದ ವಿಷಯಕ್ಕೆ ಬಂದಾಗ ಸಾಮಾನ್ಯವಾಗಿ ಎಲ್ಲರೂ ಬ್ಯಾಟರಿಯ ಸಮಸ್ಯೆಯನ್ನು ಎದುರಿಸಿರುತ್ತಾರೆ. ನಿಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ಬ್ಯಾಟರಿಯಂತೆಯೇ, ಈ ವಾಹನಗಳ ಬ್ಯಾಟರಿಯು ನಿಗದಿತ ಜೀವಿತಾವಧಿಯನ್ನು ಹೊಂದಿದೆ. ಆದರೆ ಈ ಅವಧಿಗು ಮುಂಚೆಯೆ ಬ್ಯಾಟರಿಯು ಹಾಳಾಗಬಹುದು. ಹವಾಮಾನಗಳ ಬದಲಾವಣೆಯಿಂದ, ನೀವು ಬಳಸುವ ರೀತಿ, ಪ್ರಯಾಣದ ಉದ್ದಗಳು ಮತ್ತು ನಿಮ್ಮ ಕಾರಿನ ಚಾರ್ಜಿಂಗ್ ಸರ್ಕ್ಯೂಟ್‌ನ ಕಾರ್ಯಕ್ಷಮತೆಯ ಆಧಾರದ ಮೇಲೆ ಬ್ಯಾಟರಿಯ ಬಾಳಿಕೆ ಬರುತ್ತದೆ. ನಾವಿಂದು ನಿಮಗೆ ಕಾರ್ ಬ್ಯಾಟರಿ ಜೀವಿತಾವಧಿಯನ್ನು ಹೆಚ್ಚಿಸಲು ಅನುಸರಿಸಬೇಕಾದ ಸರಳ ವಿಧಾನಗಳನ್ನು ತಿಳಿಸಿದ್ದೇವೆ.
ಕಾರಿಗೆ ಧೀರ್ಘ ವಿರಾಮ ಬೇಡ:- ನಿಮ್ಮ ಕಾರನ್ನು ದೀರ್ಘಕಾಲದವರೆಗೆ ಬಳಸದಿದ್ದರೆ ಬ್ಯಾಟರಿಯನ್ನು ‘ರೀಚಾರ್ಜ್’ ಮಾಡಲು ಕಷ್ಟವಾಗಬಹುದು. ಹಾಗಾಗಿ ಕಾರನ್ನು ಬಹಳ ದಿನಗಳ ಕಾಲ ಬಳಸದೇ ಇಡಬೇಡಿ. ನಿಮ್ಮ ಕಾರು ನಿರಂತರ ಬಳಕೆಯಲ್ಲಿದ್ದಾಗ ಮಾತ್ರ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವಾರಕ್ಕೊಮ್ಮೆಯಾದರೂ ಕನಿಷ್ಠ 30 ನಿಮಿಷಗಳ ಕಾಲ ವಾಹನ ಚಲಾಯಿಸುವುದ ಒಳ್ಳೆಯದು. ಇದು ನಿಮ್ಮ ಕಾರ್ ಎಂಜಿನ್ ಅನ್ನು ವಾರ್ಮ್-ಅಪ್ ಮಾಡುತ್ತದೆ. ಕಾರಿನಲ್ಲಿ ಬಳಸಿರುವ ಕೆಲವು ದ್ರವಗಳು ಉತ್ತಮವಾಗಿ ಪರಿಚಲನೆಗೊಳ್ಳುವಂತೆ ಮಾಡುತ್ತದೆ. ನೀವು ವಾರಗಟ್ಟಲೆ ಕಾರನ್ನು ಬಳಸದಿದ್ದರೆ, ಮುಂದಿನ ಬಾರಿ ನೀವು ಕಾರನ್ನು ಓಡಿಸುವಾಗ ಬ್ಯಾಟರಿ ಸಮಸ್ಯೆ ಎದುರಾಗಬಹುದು.
ನಿಯಮಿತ ಸರ್ವಿಸ್:- ನಿಯಮಿತವಾಗಿ ಕಾರನ್ನು ಸರ್ವಿಸ್ ಮಾಡಿಸುವುದು ಬಹಳ ಪ್ರಯೋಜನಕಾರಿಯಾಗಿದೆ. ನೀವು ಅವಸರದಲ್ಲಿ ಪ್ರಯಾಣಿಸುವ ವೇಳೆ ಕಾರು ಇದ್ದಕ್ಕಿದ್ದಂತೆ ಬ್ರೇಕ್‌ಡೌನ್ ಆಗುವುದನ್ನು ತಡೆಯಲು ಬಯಸಿದರೆ, ಬ್ಯಾಟರಿಯನ್ನು ‘ಟೆಸ್ಟ್’ ಮಾಡುವುದು ಒಳ್ಳೆಯದು. ನೀವು ಸರ್ವಿಸ್‌ಗಾಗಿ ಕಾರನ್ನು ಬಿಟ್ಟಾಗ, ಬ್ಯಾಟರಿಯು ಉತ್ತಮವಾಗಿದೆಯೇ? ಬ್ಯಾಟರಿ ಸರಿಯಾಗಿ ‘ರೀಚಾರ್ಜ್’ ಆಗಿದೆಯೇ? ಮೆಕ್ಯಾನಿಕ್ ಅನ್ನು ಪರಿಶೀಲಿಸಲು ಕೇಳಿ. ಈ ಮೂಲಕ ನಿಮ್ಮ ಕಾರಿನ ಕಂಡಿಷನ್ ತಿಳಿದು ಮುಂದಿನ ಪ್ರಕ್ರಿಯೆ ಮಾಡಿಕೊಳ್ಳಬಹುದು.
ಬ್ಯಾಟರಿಯನ್ನು ಆಗಾಗ್ಗೆ ಸ್ವಚ್ಛಗೊಳಿಸಿ:- ಕೊಳಕು ಮತ್ತು ತೇವಾಂಶವು ಸೋರಿಕೆಗೆ ಕಾರಣವಾಗಬಹುದು. ಅವು ‘ಶಾರ್ಟ್ ಸರ್ಕ್ಯೂಟ್’ಗಳಿಗೂ ಕಾರಣವಾಗಬಹುದು. ಹಾಗಾಗಿ ತಿಂಗಳಿಗೊಮ್ಮೆಯಾದರೂ ಕಾರಿನ ಬ್ಯಾಟರಿಯನ್ನು ಸ್ವಚ್ಛಗೊಳಿಸಬೇಕು. ಸ್ಪಾಂಜ್ ಅಥವಾ ಒಣ ಬಟ್ಟೆಯಿಂದ ಬ್ಯಾಟರಿಯನ್ನು ಸ್ವಚ್ಛಗೊಳಿಸುವುದು ಉತ್ತಮ. ಇದರಿಂದ ಬ್ಯಾಟರಿಯ ಹೊರಭಾಗದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳನ್ನು ತಡೆಯಬಹುದು.
ಎಂಜಿನ್ ಸ್ಟಾರ್ಟ್ ಮಾಡದೆ ಲೈಟ್ ಆನ್ ಮಾಡಬೇಡಿ:- ಎಂಜಿನ್ ಚಾಲನೆಯಲ್ಲಿಲ್ಲದಾಗ ಯಾವುದೇ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಉಪಯೋಗಿಸಬೇಡಿ. ಏಕೆಂದರೆ ಎಂಜಿನ್ ಆನ್ ಮಾಡದೇ ಹೆಡ್‌ಲೈಟ್‌ಗಳು ಅಥವಾ ಇಂಟೀರಿಯರ್ ಲೈಟ್‌ಗಳನ್ನು ಆನ್ ಮಾಡಿದರೆ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಮೂಲ ಕಾರಣ ಎಂಜಿನ್ ಸ್ವಿಚ್ ಆಫ್ ಆಗಿರುವಾಗ ನಿಮ್ಮ ಕಾರ್ ಆಲ್ಟರ್ನೇಟರ್ ಸ್ಥಗಿತಗೊಳ್ಳುತ್ತದೆ. ಇದನ್ನು ತಪ್ಪಿಸಲು, ನೀವು ನಿಮ್ಮ ಕಾರನ್ನು ನಿಲ್ಲಿಸಿದಾಗಲೆಲ್ಲಾ ಎಲ್ಲವನ್ನೂ (ಅತ್ಯಂತ ಮುಖ್ಯವಾಗಿ, ನಿಮ್ಮ ದೀಪಗಳು) ಸ್ವಿಚ್ ಆಫ್ ಮಾಡಲಾಗಿದೆಯೇ ಎಂದು ಪರಿಶೀಲಿಸುವ ಅಭ್ಯಾಸವನ್ನು ಮಾಡಿಕೊಳ್ಳಿರಿ.
ಅಲ್ಲದೆ, ನಿಮ್ಮ ಕಾರನ್ನು ನೀವು ಲಾಕ್ ಮಾಡಲು ಮರೆಯಬೇಡಿ. ಇದು ಕೇವಲ ಸುರಕ್ಷತಾ ಉದ್ದೇಶಗಳಿಗಾಗಿ ಅಲ್ಲ. ನೀವು ನಿಮ್ಮ ಕಾರನ್ನು ತೆರೆದಿದ್ದರೆ ನಿಮ್ಮ ಕಾರಿನ ಕಂಪ್ಯೂಟರ್ ಸಿಸ್ಟಮ್ ಇನ್ನೂ ಚಾಲನೆಯಲ್ಲಿರಬಹುದು ಮತ್ತು ನಿಮಗೆ ತಿಳಿಯದೆಯೇ ಕಾರಿನ ಬ್ಯಾಟರಿಯನ್ನು ಖಾಲಿ ಮಾಡಬಹುದು.
ಕಡಿಮೆ ದೂರದ ಪ್ರಯಾಣಕ್ಕೆ ಕಾರು ಬೇಡ:- ಪ್ರತಿ ಬಾರಿ ನೀವು ಕಾರನ್ನು ಸ್ಟಾರ್ಟ್ ಮಾಡಿದಾಗ, ಬ್ಯಾಟರಿ ಕೆಲಸ ಮಾಡಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಎಂಜಿನ್ ನಿಂದ ರೀಚಾರ್ಜ್ ಆಗುತ್ತದೆ. ಹಾಗಾಗಿ ಕಡಿಮೆ ದೂರದವರೆಗೆ ಮಾತ್ರ ಕಾರನ್ನು ಓಡಿಸಿದರೆ, ಬ್ಯಾಟರಿಯಿಂದ ಖರ್ಚಾದ ವಿದ್ಯುತ್ ಅನ್ನು ಮರುಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಿರಂತರವಾಗಿ ಹತ್ತಿರದ ಸ್ಥಳಗಳಿಗೆ ಕೊಂಡೊಯ್ಯುವುದರಿಂದ ಬ್ಯಾಟರಿ ವೋಲ್ಟೇಜ್ ತೀವ್ರವಾಗಿ ಕಡಿಮೆಯಾಗುತ್ತದೆ. ಕೆಲವು ಹಂತದಲ್ಲಿ ಕಾರು ಸ್ಟಾರ್ಟ್ ಆಗಲು ಹೆಣಗಾಡುತ್ತದೆ. ಹಾಗಾಗಿ ಕಡಿಮೆ ದೂರದ ಪ್ರಯಾಣಕ್ಕೆ ಕಾರನ್ನು ತೆಗೆದುಕೊಳ್ಳಬೇಡಿ.