‘ಗಾಂಧಿ ಗೋಡ್ಸೆ-ಏಕ್ ಯುದ್ಧ್’ ರಿಲೀಸ್ ಗೂ ಮುನ್ನ ನಿರ್ದೇಶಕರಿಗೆ ಬೆದರಿಕೆ! ರಾಜ್ ಕುಮಾರ್ ಸಂತೋಷಿಯಿಂದ ಭದ್ರತೆಗಾಗಿ ಮನವಿ!!
ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಗಾಂಧಿ ಗೋಡ್ಸೆ: ಏಕ್ ಯುದ್ಧ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಜನವರಿ 30ಕ್ಕೆ ಗಾಂಧೀಜಿ ಅವರ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ಜನವರಿ 26ರಂದು ತೆರೆ ಮೇಲೆ ತರಲಾಗುತ್ತದೆ. ಆದರೀಗ ಸಿನಿಮಾ ರಿಲೀಸ್ಗೂ ಮೊದಲು ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರಿಗೆ ಬೆದರಿಕೆ ಎದುರಾಗಿದೆ.
ಈ ಚಿತ್ರದ ಪ್ರಮೋಷನ್ ವೇಳೆ ಅನೇಕರು ಬಂದು ಸಿನಿಮಾ ತಂಡಕ್ಕೆ ತೊಂದರೆ ಮಾಡಿದ ಬಗ್ಗೆ ವರದಿ ಆಗಿತ್ತು. ಆದರಿಗ ನೇರವಾಗಿ ನಿರ್ದೇಶಕರಿಗೆ ಬೆದರಿಕೆಗಳು ಬರುತ್ತಿವೆ. ಹೀಗಾಗಿ ಭದ್ರತೆ ನೀಡಿ ಎಂದು ರಾಜ್ಕುಮಾರ್ ಸಂತೋಷಿ ಅವರು ಮುಂಬೈನ ವಿಶೇಷ ಪೊಲೀಸ್ ಆಯುಕ್ತ ದೇವೇನ್ ಭಾರ್ತಿಗೆ ಕೋರಿದ್ದಾರೆ. ಸಿನಿಮಾ ಕಥೆ ಸೂಕ್ಷ್ಮ ವಿಚಾರ ಆಗಿರುವುದರಿಂದ ಚಿತ್ರಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ.
‘ಗಾಂಧಿ ಗೋಡ್ಸೆ: ಏಕ್ ಯುದ್ಧ್’ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಗೋಡ್ಸೆ ಗುಂಡು ಹಾರಿಸಿದ ನಂತರದಲ್ಲಿ ಮಹಾತ್ಮ ಗಾಂಧೀಜಿ ಬದುಕಿದ್ದರೆ ಏನಾಗುತ್ತಿತ್ತು ಎನ್ನುವ ಕಲ್ಪನೆಯೊಂದಿಗೆ ಈ ಸಿನಿಮಾ ಮೂಡಿ ಬಂದಿದೆ. ಗಾಂಧೀಜಿಗೆ ಗೋಡ್ಸೆ ಗುಂಡು ಹಾರಿಸುತ್ತಾರೆ. ನಂತರ ಗೋಡ್ಸೆ ಅರೆಸ್ಟ್ ಆಗುತ್ತಾರೆ. ಅದೃಷ್ಟವಶಾತ್ ಗಾಂಧಿ ಬದುಕುತ್ತಾರೆ. ‘ನಾನು ಗೋಡ್ಸೆಯನ್ನು ಭೇಟಿ ಮಾಡಬೇಕು’ ಎಂಬ ಇಚ್ಛೆಯನ್ನು ಗಾಂಧಿ ವ್ಯಕ್ತಪಡಿಸುತ್ತಾರೆ. ಇಬ್ಬರೂ ಭೇಟಿ ಆಗುತ್ತಾರೆ. ಇಬ್ಬರ ಮಧ್ಯೆ ಸೈದ್ಧಾಂತಿಕ ಯುದ್ಧ ನಡೆಯುತ್ತದೆ. ಇದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
ಗಾಂಧಿ ಹಾಗೂ ಗೋಡ್ಸೆ ಯಾವ ರೀತಿಯ ಸೈದ್ಧಾಂತಿಕ ನಿಲುವನ್ನು ಹೊಂದಿದ್ದರು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿನ್ಮಯ್ ಮಂಡ್ಲೇಕರ್ ಅವರು ಗೋಡ್ಸೆಯಾಗಿ ಹಾಗೂ ದೀಪಕ್ ಅಂತಾನಿ ಅವರು ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಪಾತ್ರಗಳು ಟ್ರೇಲರ್ನಲ್ಲಿ ಸಾಕಷ್ಟು ಗಮನ ಸೆಳೆದಿವೆ. ಆದರೆ ಈ ಟ್ರೇಲರ್ ರಿಲೀಸ್ ಬಳಿಕ ಚಿತ್ರಕ್ಕೆ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಲಾಗಿತ್ತು.
‘ಗಾಂಧಿ ಗೋಡ್ಸೆ ಏಕ್ ಯುದ್ಧ್’ ಸಿನಿಮಾ ಕಾಲ್ಪನಿಕ ಎಂದು ನಿರ್ದೇಶಕರು ಈ ಮೊದಲೇ ತಿಳಿಸಿದ್ದರು. ಅದೇ ರೀತಿಯಲ್ಲಿ ಟ್ರೇಲರ್ ಮೂಡಿಬಂದಿದೆ. ಆದರೂ ಇದರ ಬಗ್ಗೆ ಅನೇಕರು ಅಸಮಧಾನಗೊಂಡು ನಮಗೆ ಬೆದರಿಕೆ ಹಾಕುತ್ತಿರುವುದು ಆತಂಕದ ವಿಚಾರ. ಹೀಗಾಗಿ ಭದ್ರತೆ ಯನ್ನು ಒದಗಿಸಬೇಕೆಂದು ಕೋರಿದ ನಿರ್ದೇಶಕರು ಮಾತಾಡಿ ‘ನನ್ನ ತಂಡ, ಸುದ್ದಿಗೋಷ್ಠಿ ನಡೆಸುವಾಗ ಕೆಲವರು ತೊಂದರೆ ಮಾಡಿದ್ದಾರೆ. ಅನೇಕರು ಸಿನಿಮಾ ರಿಲೀಸ್ ಮಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಸಮಸ್ಯೆ ಆಗಬಹುದು. ಹೀಗಾಗಿ ಭದ್ರತೆ ನೀಡಿ’ ಎಂದು ಅವರು ಮನವಿ ಮಾಡಿದ್ದಾರೆ.