ಪ್ರಜ್ಞಾ ಸಿಂಗ್ ಒಬ್ಬಳು ಭಯೋತ್ಪಾದಕಿ, ಕಟೀಲ್ ಒಬ್ಬ ವಿದೂಷಕ! ಬಿಜೆಪಿ ವಿರುದ್ಧ ಮತ್ತೆ ಹರಿಹಾಯ್ದ ಹರಿಪ್ರಸಾದ್
ಬಿಜೆಪಿ ಕುರಿತು ಹೇಳಿಕೆ ನೀಡುವುದರ ಮೂಲಕ ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ಇದೀಗ ಮತ್ತೊಂದು ಹೇಳಿಕೆಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಓರ್ವ ಭಯೋತ್ಪಾದಕಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಆಕೆ ಶಿವಮೊಗ್ಗಕ್ಕೆ ಭೇಟಿಕೊಟ್ಟು ಹಿಂದೂಗಳು ತಮ್ಮ ಮನೆಗಳಲ್ಲಿ ತಲ್ವಾರ್ ಚಾಕು ಚೂರಿ ಆಯುಧ ಶಾರ್ಪ್ ಮಾಡಿಟ್ಟುಕೊಳ್ಳಲು ಹೇಳಿ, ಮಕ್ಕಳ ದಾರಿ ತಪ್ಪಿಸಿದ್ದಾಳೆ. ನಾನು ಆಕೆಯನ್ನು ಭಯೋತ್ಪಾದಕಿ ಎಂದು ಕರೆಯುತ್ತೇನೆ. ನಮ್ಮ ಮಕ್ಕಳನ್ನು ಭಯೋತ್ಪಾಧಕರನ್ನಾಗಿ ಸಿದ್ಧತೆ ಮಾಡುತ್ತೀರಾ? ಪ್ರಧಾನಿ ಮೋದಿಯವರು ಇದಕ್ಕೆ ಉತ್ತರ ಕೊಡಬೇಕು ಎಂದು ಉಡುಪಿಯ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಅಬ್ಬರಿಸಿದ್ದಾರೆ. ಪ್ರಧಾನಿ ಮೋದಿ ಪೊಲಿಟಿಕಲ್ ಟೂರಿಸಂ ಶುರು ಮಾಡಿದ್ದಾರೆ. ಕೊರೊನಾ, ನೆರೆ ಬಂದಾಗ ಮೋದಿ ಬರಲಿಲ್ಲ. ಸಿಎಂ ಬೊಮ್ಮಾಯಿ, ಆರ್‌ಎಸ್‌ಎಸ್ ಕೈಗೊಂಬೆಯಾಗಿದ್ದಾರೆ
ಎಂದು ಕುಟುಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧವೂ ವಾಗ್ದಾಳಿ ನಡೆಸಿ ಹರಿಪ್ರಸಾದ್, ಕರಾವಳಿಯವರೇ ಬಿಜೆಪಿಯ ಅಧ್ಯಕ್ಷರಾಗಿದ್ದಾರೆ. ವಿದೂಷಕನಂತೆ ಹೇಳಿಕೆಗಳನ್ನ ನೀಡುತ್ತಾರೆ. ಅಭಿವೃದ್ಧಿ ಬೇಡ, ರಸ್ತೆ ಬೇಡ, ಚರಂಡಿ ಬೇಡ, ಆರೋಗ್ಯ ಬೇಡ, ಶಿಕ್ಷಣ ಕೇಳ್ಬೇಡಿ ಅದರ ಬದಲಾಗಿ ಹಿಜಾಬ್ ಬಗ್ಗೆ ಮಾತಾಡಿ, ಹಲಾಲ್ ಬಗ್ಗೆ ಮಾತಾಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ಕರೆ ಕೊಡ್ತಾರೆ. ಕರಾವಳಿ ಜಿಲ್ಲೆಯನ್ನ ಏನು ಮಾಡಲು ಹೊರಟಿದ್ದಾರೆ ಬಿಜೆಪಿಯವರು. ಮಿಸ್ಟರ್ ನಳಿನ್ ಕುಮಾರ್ ಕಟೀಲ್, ಬಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡಬೇಡಿ. ಹಿಂದುಳಿದ ಮಕ್ಕಳನ್ನು ಬಾವಿಗೆ ತಳ್ಳಬೇಡಿ ಎಂದು ಕಿಡಿಕಾರಿದರು.
ಮುಂದೆ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನ ಗೆಲ್ಲಿಸಿದ್ದೀರಿ, ಕರಾವಳಿಯಲ್ಲಿ ಜಿಲ್ಲೆಗಳಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನ ಗೆಲ್ಲಿಸಿ ಕಳಿಸಿದ್ದೀರಿ. ಆದ್ರೆ ಈ ಜನಪ್ರತಿನಿಧಿಗಳ ಕೊಡುಗೆ ಏನು ಎಂಬುದನ್ನ ತೋರಿಸಲಿ ಎಂದು ಸವಾಲು ಹಾಕಿದ ಬಿಕೆ ಹರಿಪ್ರಸಾದ್, ಶಾಂತಿ ಸುವ್ಯವಸ್ಥೆಯಿಂದ ಜನರ ನಡುವೆ ದ್ವೇಷ, ಜಗಳ ಹೆಚ್ಚಿರುವುದು ಮಾತ್ರ ಸಾಧನೆನಾ? ರಾಜ್ಯದಲ್ಲೇ ಅತೀ ಹೆಚ್ಚಿನ ಸಾಕ್ಷರತೆ ಹೊಂದಿರುವ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಬಿಜೆಪಿ ಕಳಂಕ ತಂದಿದೆ. ನಾವು ಬೆಂಗಳೂರಲ್ಲಿ ಇದ್ದಾಗ ಎಸ್ಸೆಸ್ಸೆಲ್ಸಿ ಪಿಯುಸಿ ಫಲಿತಾಂಶಗಳಲ್ಲಿ ಉಡುಪಿ ಮೊದಲು, ದಕ್ಷಿಣ ಕನ್ನಡ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ಓದುತ್ತಾ ಇದ್ವಿ, ನಮ್ಮ ಭುಜ ತಟ್ಕೋತಿದ್ವಿ. ಆದ್ರೆ ಮೊಟ್ಟ ಮೊದಲ ಬಾರಿಗೆ ಉಡುಪಿ ಜಿಲ್ಲೆ ಹದಿನೈದು, ಹದಿನೆಂಟನೇ ಸ್ಥಾನಕ್ಕೆ ಹೋಗಿದೆ. ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿದೆ. ಈ ಅವಮಾನಕ್ಕೆ ಈ ಜಿಲ್ಲೆಯ ಶಾಸಕರು, ಮಂತ್ರಿಗಳೇ ನೇರ ಕಾರಣ ಎಂದು ಕಿಡಿಕಾರಿದರು.