ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ: ʻಭ್ರಷ್ಟಾಚಾರ ನಿಲ್ಲಿಸಿ, ಬೆಂಗಳೂರು ಉಳಿಸಿʼ ಹೋರಾಟ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನ ನಡೆಸಲು ಮುಂದಾಗಿದ್ದು, ʻಭ್ರಷ್ಟಾಚಾರ ನಿಲ್ಲಿಸಿ, ಬೆಂಗಳೂರು ಉಳಿಸಿʼ ಹೋರಾಟ ಟ್ಯಾಗ್ ಲೈನ್ ಮೂಲಕ ಬೀದಿಗಿಳಿದು ಕೈ ನಾಯಕರು ಘರ್ಜನೆ ನಡೆಸಲಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಬೆಂಗಳೂರಿನ 300 ಸ್ಥಳಗಳಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 10 ರಿಂದ 12 ಗಂಟೆವರೆಗೆ 51 ಮೆಟ್ರೋ ನಿಲ್ದಾಣಗಳು, 26 ಫ್ಲೈಓವರ್, 200 ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ ಘೋಷವಾಕ್ಯದಡಿ ಮೂರು ತಾಸು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.
ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನ ಎಲ್ಲ 28 ಕ್ಷೇತ್ರಗಳಲ್ಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು 300 ಕಡೆಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.