ಹಿಂದಿಯಲ್ಲಿ ಶತಕ ಭಾರಿಸಿದ ಕನ್ನಡ ‘ಕಾಂತಾರ’! ಬಾಲಿವುಡ್ ಮಂದಿಗೆ ಧನ್ಯವಾದ ಹೇಳಿದ ರಿಷಬ್!
ಕನ್ನಡಿಗರ ಮೈನವಿರೇಳಿಸಿದ ಸಿನೆಮಾ, ಎಲ್ಲರ ಮನಗೆದ್ದ ಸಿನೆಮಾ ಕಾಂತಾರದ ಹಿಂದಿ ವರ್ಷನ್ ಶತದಿನ ಪೂರೈಸಿದೆ. ಮುಂಬೈ, ಅಹಮದಾಬಾದ್, ದೆಹಲಿಯಲ್ಲಿ ಸಿನಿಮಾ ಇನ್ನು ಯಶಸ್ವಿಯಾಗಿ ಪ್ರದರ್ಶನವಾಗುತ್ತಲೇ ಇದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ 100 ದಿನದ ಗಡಿ ದಾಟಿದೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿದೆ. ಇದರಿಂದ ಸಕ್ಕತ್ ಖುಷಿಯಾದ ರಿಷಬ್ ಶೆಟ್ರು ಕೂಡ, ತಮ್ಮ ಚಿತ್ರವನ್ನ ನೋಡಿರೋ ಹಿಂದಿ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಚಿತ್ರವನ್ನ ಮತ್ತೆ ಮತ್ತೆ ನೋಡಿ ಅಂತಲೂ ಕೇಳಿಕೊಳ್ಳುತ್ತಿದ್ದಾರೆ.
2022, ಸೆ.30 ರಿಲೀಸ್ ಆದ ಕಾಂತಾರ ಸಿನಿಮಾಗೆ ದೇಶದ ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಬಾಲಿವುಡ್ ಬಾಕ್ಸಾಫೀಸ್‌ನಲ್ಲೂ `ಕಾಂತಾರ’ ಚಿತ್ರ ಗೆದ್ದು ಬೀಗಿದೆ. ಹಿಂದಿ ವರ್ಷನ್‌ನ ʻಕಾಂತಾರʼ ಸಿನಿಮಾ ಫ್ಯಾನ್ಸ್‌ಗೆ ಇಷ್ಟವಾಗಿದೆ. ಅಲ್ಲೂ ಕೂಡ ರಿಷಬ್ ಶೆಟ್ಟಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ.
ಬರೀ ಕನ್ನಡದಲ್ಲಿ ‘ಕಾಂತಾರ’ ಸಿನಿಮಾ ಬಿಡುಗಡೆ ಮಾಡಲು ರಿಷಬ್ ಶೆಟ್ಟಿ ಮನಸ್ಸು ಮಾಡಿದ್ದರು. ಕನ್ನಡದ ಕಥೆಯನ್ನು ಕನ್ನಡದಲ್ಲೇ ಎಲ್ಲರೂ ನೋಡಬೇಕು ಎನ್ನುವುದು ಅವರ ಆಸೆ ಆಗಿತ್ತು. ಆದರೆ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡಿದರು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಹಿಂದಿ ವರ್ಷನ್ ಬಾಕ್ಸಾಫೀಸ್‌ನಲ್ಲಿ ತುಸು ಹೆಚ್ಚೇ ಸದ್ದು ಮಾಡಿದ್ದು ಸುಳ್ಳಲ್ಲ.
ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ’ ಚಿತ್ರಕ್ಕೆ ಪರಭಾಷೆಗಳಲ್ಲೂ ಭಾರೀ ಬೇಡಿಕೆ ಶುರುವಾಯಿತು. ನಿಧಾನವಾಗಿ ಚಿತ್ರವನ್ನು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಅಕ್ಟೋಬರ್ 14ನೇ ತಾರೀಖು ಕಾಂತಾರ ಹಿಂದಿ ವರ್ಷನ್ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿತ್ತು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿ, ಸಿನೆಮಾ ದೊಡ್ಡ ಮಟ್ಟದ ಸಕ್ಸಸ್ ಕಂಡಿತು.
ಮುಂಬೈ ಬಾಂದ್ರಾದ ಜಿ7 ಮಲ್ಟಿಪ್ಲೆಕ್ಸ್, ದೆಹಲಿಯ ರೋಹಿಣಿ ಹಾಗೂ ಅಹಮದಾಬಾದ್‌ನ ಎಬಿ ಮಲ್ಟಿಪ್ಲೆಕ್ಸ್‌ನಲ್ಲಿ ‘ಕಾಂತಾರ’ ಹಿಂದಿ ವರ್ಷನ್ ಇನ್ನು ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಂದು 100 ದಿನ ಕಳೆದರೂ ಓಟಿಟಿಗೆ ಬಂದರೂ ಕೂಡ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಈ ಹಿಂದೆ ಕನ್ನಡದ ಮತ್ಯಾವುದೇ ಸಿನಿಮಾ ಮಾಡದ ದಾಖಲೆಯನ್ನು ‘ಕಾಂತಾರ’ ಬರೆದಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ.
ಇನ್ನೂ ʻಹೊಂಬಾಳೆ ಸಂಸ್ಥೆʼ ನಿರ್ಮಾಪಕ ವಿಜಯ್ ಕಿರಗಂದೂರು ಇತ್ತೀಚಿನ ಸಂದರ್ಶನವೊಂದರಲ್ಲಿ `ಕಾಂತಾರ 2′ ಸಿನಿಮಾ ಮಾಡುವ ಕುರಿತಾಗಿ ಮಾತನಾಡಿದ್ದಲ್ಲದೇ, ಸಿನಿಮಾ ಶೂಟಿಂಗ್ ಮತ್ತು ರಿಲೀಸ್ ದಿನಾಂಕವನ್ನೂ ಅವರು ಘೋಷಿಸಿದ್ದಾರೆ. ಜೊತೆಗೆ ಈಗಾಗಲೇ ರಿಷಬ್ ಮತ್ತು ಟೀಮ್ ಕಥೆ ಮಾಡುವುದರಲ್ಲಿ ತೊಡಗಿದೆ ಎನ್ನುವ ವಿಷಯವನ್ನೂ ಬಹಿರಂಗಪಡಿಸಿದ್ದಾರೆ. ಚಿತ್ರೀಕರಣದ ಸ್ಥಳ ಹುಡುಕಲು ಕಾಡು ಮೇಡು ಅಲೆಯುತ್ತಿರುವುದಾಗಿಯೂ ತಿಳಿಸಿದ್ದಾರೆ.