ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸರಕಾರದಿಂದ ಗುಡ್ ನ್ಯೂಸ್!!!
ಸರ್ಕಾರಿ ಜಮೀನು ಹಾಗೂ ಅರಣ್ಯದ ಅಂಚಿನ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಅರ್ಹ ಬಡವರ್ಗದ ಜನರನ್ನು ಅಲ್ಲಿಂದ ಖಾಲಿ ಮಾಡಿಸುವ ಅವಕಾಶವನ್ನು ನೀಡುವುದಿಲ್ಲ ಹಾಗೂ 94 ಸಿ ಹಾಗೂ 94 ಸಿಸಿ ಅಡಿ ಅವರು ಅರ್ಜಿ ನೀಡಿದರೆ ಅವರಿಗೆ ನಿವೇಶನದ ಹಕ್ಕುಗಳನ್ನು ನೀಡಲಾಗುವುದು ಎಂದು ಕಂದಾಯ ಸಚಿವರಾದ ಆರ್.ಅಶೋಕ ಹೇಳಿದರು. ಜಿಲ್ಲಾಡಳಿತ,ಜಿಲ್ಲಾಪಂಚಾಯತ್ ಸಹಯೋಗದಲ್ಲಿ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರು ತಮ್ಮ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ, ತಕ್ಷಣ ಭೂ ಪರಿವರ್ತನೆ ಮಾಡಿಕೊಡಲು ಸುಧಾರಣೆ ಕಾಯ್ದೆಯನ್ನು ತರಲಾಗಿದೆ. ಯುವಕರು, ವಿದ್ಯಾವಂತರು, ಐಟಿಬಿಟಿಗಳಲ್ಲಿ ತೊಡಗಿಸಿಕೊಂಡವರು ರಾಜ್ಯದಲ್ಲಿರುವ ಯಾವುದೇ ಕೃಷಿ ಭೂಮಿಯನ್ನು ಖರೀದಿಸಲು ಮುಕ್ತ ಅವಕಾಶವನ್ನು ನೀಡಲಾಗಿದೆ. ಕೃಷಿಯಲ್ಲಿ ಆಧುನಿಕತೆ ತರುವ ಉದ್ದೇಶದಿಂದ ಹಿಂದೆ ಇದ್ದ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ. ತಾಂಡಾ,ಮುಜುರೆ,ಹಟ್ಟಿ,ಕ್ಯಾಂಪ್‌ಗಳಿ ಗೆ ಕಂದಾಯ ಹಕ್ಕುಗಳನ್ನು ನೀಡಿ ಗ್ರಾಮಗಳನ್ನಾಗಿ ಪರಿವರ್ತಿಸಿ ಬಡಜನರಿಗೆ ನ್ಯಾಯವನ್ನು ಒದಗಿಸಲಾಗಿದೆ. ಎಸ್.ಸಿ. ಹಾಗೂ ಎಸ್.ಟಿ. ಮೀಸಲು ಹೆಚ್ಚಳಕ್ಕೆ ಸರ್ಕಾರವು ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದೂ, ಹಿಂದುಳಿದ ಲಿಂಗಾಯತರು ಮತ್ತು ಒಕ್ಕಲಿಗರಿಗೂ ನ್ಯಾಯ ಒದಗಿಸಲು ಹೊಸ ಪ್ರವರ್ಗ ಸೃಜನೆಗೆ ಮುಂದಾಗಿರುವುದು ಸರ್ಕಾರದ ಸಾಮಾಜಿಕ ನ್ಯಾಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಹೊಸಕೋಟೆ ತಾಲೂಕಿನಲ್ಲಿ ಅಧಿಕವಾಗಿರುವ ಅನೇಕ ಬಡವರಿಗೆ ಸಮರ್ಪಕವಾದ ಮನೆಯಿಲ್ಲ. ಅಂತಹವರಿಗೆ ತಾಲೂಕಿನಲ್ಲಿ ಲಭ್ಯವಿರುವ ಗೋಮಾಳ,ಸರ್ಕಾರದ ಭೂಮಿ ಗುರುತಿಸಿ ಸುಮಾರು 10 ಸಾವಿರ ಜನ ನಿವೇಶನ ರಹಿತರಿಗೆ ಹಂಚಲು ಸರ್ಕಾರವು ಕ್ರಮವಹಿಸಿದ್ದಾರೆ. ಫಲಾನುಭವಿಗಳ ಆಯ್ಕೆಯು ನಿಯಮಾನುಸಾರ ಪಾರದರ್ಶಕವಾಗಿ ನಡೆಯಲಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು 28 ಸಾವಿರಕ್ಕೂ ಹೆಚ್ಚು ವಿವಿಧ ವೈಯಕ್ತಿಕ ಸವಲತ್ತುಗಳು ಇಂದು ವಿತರಣೆಯಾಗುತ್ತಿವೆ ಎಂದರು.
ಅಲ್ಲದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬರುತ್ತಿದ್ದ ಪಡಿತರ ಸ್ಥಗಿತವಾಗಿರುವದರಿಂದ, ಬರುವ ತಿಂಗಳಿನಿಂದ ಪಡಿತರೆ ವಿತರಣೆ ಪ್ರಮಾಣವನ್ನು ಪುನಃ 10 ಕೆಜಿಗೆ ಹೆಚ್ಚಿಸಲಾಗುವುದು. ಬೆಂಗಳೂರಿಗೆ ಹೊಂದಿಕೊಂಡು ಅಭಿವೃದ್ಧಿ ಹೊಂದುತ್ತಿರುವ ಹೊಸಕೋಟೆಯವರೆಗೂ ಮುಂಬರುವ ದಿನಗಳಲ್ಲಿ ಮೆಟ್ರೋ ರೈಲು ವಿಸ್ತರಣೆ ಮಾಡಲಾಗುವುದು. ಈಗಾಗಲೇ ಸಾಗುವಳಿ ಚೀಟಿ ಹೊಂದಿರುವ ಜನರ ಜಮೀನುಗಳನ್ನು ಪಡೆಯದಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದರು.