ರೈತರೇ ಗಮನಿಸಿ | ರಸಗೊಬ್ಬರಗಳಿಗೆ ಇನ್ನು ಮುಂದೆ ಈ ನಿಯಮ ಕಡ್ಡಾಯ | ಆಗಸ್ಟ್ 1 ರಿಂದಲೇ ಕ್ರಮ ಜಾರಿಗೆ

ಸದ್ಯ ಕೃಷಿ ವೆಚ್ಚ ತಗ್ಗಿಸಲು ಸರ್ಕಾರ ಕೆಲವು ಮಹತ್ವದ ಯೋಜನೆಗಳನ್ನ ಜಾರಿಗೆ ತಂದಿದ್ದು ನಕಲಿ ರಸಗೊಬ್ಬರ ತಡೆಯುವ ಮೂಲಕ ಕೃಷಿಕರಿಗೆ ಸಹಕಾರಿಯಾಗಿದೆ. ಇದರಿಂದ ರೈತರ ಆದಾಯ ಹೆಚ್ಚಿಸಬಹುದು. ಪ್ರಸ್ತುತ ನಕಲಿ ರಸಗೊಬ್ಬರ ಉತ್ಪನ್ನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಸಗೊಬ್ಬರ ಪ್ಯಾಕೆಟ್‌ಗಳ ಮೇಲೆ ಬಾರ್‌ಕೋಡ್‌ ಅಥವಾ ಕ್ಯುಆರ್‌ ಕೋಡ್‌ ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿ ಬರುವ ಔಷಧೋದ್ಯಮ ಇಲಾಖೆ ಈ ಕುರಿತು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದ್ದು, ಇದರ ಪ್ರಕಾರ 2023ರ ಆ. 1ರಿಂದ ಮಾರಾಟ ಮಾಡುವ ಎಲ್ಲ ರಸಗೊಬ್ಬರಗಳ ಪ್ಯಾಕೆಟ್‌ಗಳ ಮೇಲೆ ಬಾರ್‌ಕೋಡ್‌ ಅಥವಾ ಕ್ಯುಆರ್‌ ಕೋಡ್‌ ಕಡ್ಡಾಯವಾಗಿದೆ.

ನಕಲಿ ರಸಗೊಬ್ಬರ ಹಾವಳಿಯಿಂದಾಗಿ ಕೃಷಿ ಉತ್ಪನ್ನಗಳ ಇಳುವರಿ ಕಡಿಮೆಯಾಗುತ್ತದೆ. ಈ ಮೂಲಕ ರೈತರ ಆದಾಯ ಕುಸಿಯುತ್ತದೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಸಿಂಗಲ್‌ ಸೂಪರ್‌ ಫಾಸ್ಪೇಟ್‌ (ಎಸ್‌ಎಸ್‌ಪಿ) ರಸಗೊಬ್ಬರಕ್ಕೆ ಬಾರ್‌ಕೋಡಿಂಗ್‌ ಕಡ್ಡಾಯಗೊಳಿಸಿದೆ.

ರಸಗೊಬ್ಬರ ಪ್ಯಾಕೆಟ್‌ಗಳಲ್ಲಿರುವ ಕ್ಯುಆರ್‌ ಕೋಡ್‌ ಅನೇಕ ಉತ್ಪನ್ನ ಗುರುತಿನ ಕೋಡ್‌, ಬ್ರ್ಯಾಂಡ್‌ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ಬ್ಯಾಚ್‌ ಸಂಖ್ಯೆ, ತಯಾರಿಕೆಯ ದಿನಾಂಕ, ಮುಕ್ತಾಯ ದಿನಾಂಕ ಮತ್ತು ಉತ್ಪಾದನ ಪರವಾನಗಿ ಸಂಖ್ಯೆಯನ್ನು ಒಳಗೊಂಡಿರುತ್ತದೆ.

ಎಸ್‌ಎಸ್‌ಪಿ ಒಂದು ಪ್ರಮುಖ ರಸಗೊಬ್ಬರವಾಗಿದ್ದು ಸಸ್ಯಗಳಿಗೆ ಅಗತ್ಯವಿರುವ ಮೂರು ಪ್ರಮುಖ ಪೋಷಕಾಂಶಗಳಾದ ಫಾಸ್ಫರಸ್‌, ಸಲ್ಫರ್ ಮತ್ತು ಕ್ಯಾಲ್ಸಿಯಂ ಜತೆಗೆ ಅನೇಕ ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿದೆ. ಸದ್ಯ ದೇಶದಲ್ಲಿ ಪ್ರತೀ ವರ್ಷ 56 ಲಕ್ಷ ಟನ್‌ ಎಸ್‌ಎಸ್‌ಪಿ ಉತ್ಪಾದಿಸಲಾಗುತ್ತದೆ. ಇದು ಡಿಎಪಿ (ಡಿ-ಅಮೋನಿಯಂ ಫಾಸ್ಪೇಟ್‌) ರಸಗೊಬ್ಬರ ಆಮದು ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಿದೆ ಎಂದು ತಿಳಿಸಲಾಗಿದೆ.

ಕೇಂದ್ರ ಆರೋಗ್ಯ, ಔಷಧ ಮತ್ತು ರಸಗೊಬ್ಬರ ಸಚಿವ ಮನಸುಖ ಮಾಂಡವಿಯಾ ಅವರ ಮುತುವರ್ಜಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಔಷಧ ವಲಯದಲ್ಲಿ ಈಗಾಗಲೇ ಔಷಧಗಳ ಪ್ಯಾಕೆಟ್‌ಗಳ ಮೇಲೆ ಕ್ಯುಆರ್‌ ಕೋಡ್‌ ಕಡ್ಡಾಯಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.

Leave A Reply

Your email address will not be published.