Toxic Houseplants : ಈ ಗಿಡಗಳನ್ನು ಮನೆಯಲ್ಲಿ ಬೆಳೆಸಬೇಡಿ!
ಇಂದಿನ ಕಾಲದಲ್ಲಿ ಮನೆಯೊಳಗೆ ಗಿಡ ನೆಡುವುದು ಮನೆಯ ಅಲಂಕಾರದ ಅವಿಭಾಜ್ಯ ಅಂಗವಾಗಿದೆ. ಗಿಡಗಳನ್ನು ಮನೆಯಲ್ಲಿ ಇರಿಸಿದಾಗ ಸುಂದರವಾಗಿ ಕಾಣುವುದಲ್ಲದೇ, ಅವುಗಳಿಂದ ಅನೇಕ ಆರೋಗ್ಯ ಪ್ರಯೋಜನಗಳು ಕೂಡ ಇವೆ. ಆದರೆ, ಸರಿಯಾದ ಗಿಡಗಳನ್ನು ಆರಿಸುವುದು ತುಂಬಾ ಮುಖ್ಯ. ಎಲ್ಲಾ ಗಿಡಗಳನ್ನು ಮನೆಯಲ್ಲಿ ಇಡುವುದು ಉತ್ತಮವಲ್ಲ. ಯಾಕಂದ್ರೆ ಅವುಗಳಲ್ಲಿ ಕೆಲವು ಗಿಡಗಳು ನಿಮ್ಮ ಮಕ್ಕಳಿಗೆ ಹಾಗೂ ಮನೆಯಲ್ಲಿರುವ ಸಾಕುಪ್ರಾಣಿಗಳಿಗೆ ಸುರಕ್ಷಿತವಾಗಿರುವುದಿಲ್ಲ. ಹಾಗಾದ್ರೆ ಮನೆಯಲ್ಲಿ ಯಾವ ಗಿಡಗಳನ್ನು ಬೆಳೆಸಬಾರದು ಎಂಬುದನ್ನು ನೋಡೋಣ.
ಲಿಲ್ಲಿ :
ಲಿಲ್ಲಿ ಒಂದು ಸುಂದರವಾದ ಹೂವಿನ ಗಿಡ. ಇದು ನಿಮ್ಮ ಗಾರ್ಡನ್ ಮತ್ತು ಮನೆಗೆ ಸೊಬಗನ್ನು ನೀಡುತ್ತದೆ. ಆದರೆ ಕೆಲವು ಜಾತಿಯ ಲಿಲ್ಲಿಗಳು ಸುರಕ್ಷಿತವಲ್ಲ. ಅಧಿಕ ವಿಷಕಾರಕ ಅಂಶಗಳು ಅದರಲ್ಲಿವೆ. ಮುಖ್ಯವಾಗಿ ನಿಮ್ಮ ಮನೆಯ ಬೆಕ್ಕುಗಳಿಗೆ ಈ ಲಿಲ್ಲಿ ಗಿಡಗಳು ಅಪಾಯವನ್ನು ಉಂಟುಮಾಡುತ್ತದೆ. ಎಲೆಗಳಿಂದ ಹಿಡಿದು ಹೂವಿನವರೆಗೆ, ಲಿಲ್ಲಿ ಸಸ್ಯದ ಪ್ರತಿಯೊಂದು ಭಾಗವು ಬೆಕ್ಕುಗಳಿಗೆ ವಿಷಕಾರಿಯಾಗಿದೆ. ಹಾಗಾಗಿ, ಮನೆಯಲ್ಲಿ ಬೆಕ್ಕು ಅಥವಾ ಇತರೆ ಸಾಕುಪ್ರಾಣಿಗಳಿದ್ದರೆ ವಿಷಕಾರಿ ಲಿಲ್ಲಿ ಗಿಡವನ್ನು ಬೆಳೆಸಬೇಡಿ. ಇನ್ನೂ, ಯಾವೆಲ್ಲಾ ಲಿಲ್ಲಿ ಗಿಡಗಳು ವಿಷಕಾರಿ ಅಂದ್ರೆ, ಕ್ಯಾಲ್ಲಾ ಲಿಲ್ಲಿ, ಈಸ್ಟರ್ ಲಿಲ್ಲಿ, ರುಬ್ರುಮ್ ಲಿಲ್ಲಿ, ಟೈಗರ್ ಲಿಲ್ಲಿ, ಡೇ ಲಿಲ್ಲಿ, ಏಷ್ಯಾನ್ ಲಿಲ್ಲಿ ಗಿಡಗಳು ವಿಷಕಾರಿಯೆಂದು ಹೇಳಲಾಗಿದೆ.
ಅಲೋವೆರಾ :
ಅಲೋವೆರಾ ಗಿಡಗಳು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತವೆ. ಈ ಸಸ್ಯವು ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದರ ಲೋಳೆಯನ್ನು ಚರ್ಮದ ಅಂದ ಹೆಚ್ಚಿಸಲು ಬಳಸುತ್ತಾರೆ. ಇದರಲ್ಲಿರುವ ಚಿಕಿತ್ಸಕ ಗುಣಗಳಿಂದಾಗಿ ಅಜೀರ್ಣ ಇತ್ಯಾದಿ ಸಂದರ್ಭದಲ್ಲಿ ಇದರ ರಸವನ್ನು ಕುಡಿಯುವವರೂ ಇದ್ದಾರೆ. ಮನುಷ್ಯರಿಗೆ ಹತ್ತಾರು ಪ್ರಯೋಜನಗಳನ್ನು ನೀಡುವ ಈ ಅಲೋವೆರಾ ಪ್ರಾಣಿಗಳಿಗೆ ವಿಷಕಾರಿಯಾಗಿದೆ. ಅಲೋವೆರಾದ ಮೇಲಿನಭಾಗ (ಚರ್ಮ)ದ ಕೆಳಗೆ ಇರುವ ಲೆಟೆಕ್ಸ್ ರಸವು ವಿಷಕಾರಿಯಾಗಿದ್ದು, ನಿಮ್ಮ ಮನೆಯ ಸಾಕು ಪ್ರಾಣಿ ಇದನ್ನು ತಿಂದರೆ ಕಿಬ್ಬೊಟ್ಟೆ ನೋವು ಇತ್ಯಾದಿ ತೊಂದರೆ ಅನುಭವಿಸುತ್ತವೆ. ಅಲ್ಲದೆ, ನಿಮ್ಮ ಪ್ರೀತಿಯ ನಾಯಿ ಅಲೋವೆರಾದ ಭಾಗಗಳನ್ನು ತಿಂದರೆ ಅದರ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗಬಹುದು.
ಕ್ಯಾಲಾಡಿಯಮ್ಸ್ :
ಈ ಸಸ್ಯವನ್ನು ಆನೆಯ ಕಿವಿ ಮತ್ತು ದೇವತೆಗಳ ರೆಕ್ಕೆಗಳು ಎಂದು ಕರೆಯಲಾಗುತ್ತದೆ. ಗಾರ್ಡನ್ ನಲ್ಲಿ ಈ ಗಿಡಗಳನ್ನು ಹೆಚ್ಚಾಗಿ ಬೆಳೆಸುತ್ತಾರೆ. ಕೆಂಪು, ಗುಲಾಬಿ ಮತ್ತು ಬಿಳಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಈ ಸಸ್ಯ ಕಂಡುಬರುತ್ತದೆ. ಕ್ಯಾಲಾಡಿಯಮ್ಸ್ ಗಾರ್ಡನ್ ನಲ್ಲಿ ತನ್ನ ಸುಂದರತೆಯಿಂದ ಎಲ್ಲರ ಗಮನಸೆಳೆಯುತ್ತದೆ. ಹಾಗಾಗಿ ಇದನ್ನು ಹೆಚ್ಚಾಗಿ ಬೆಳೆಸುತ್ತಾರೆ. ಆದರೆ ಈ ಸಸ್ಯ ವಿಷಕಾರಿಯಾಗಿದೆ. ಇದರ ಎಲೆಯನ್ನು ತಿಂದರೆ ಬಾಯಿ, ತುಟಿ, ಗಂಟಲು ಮತ್ತು ನಾಲಿಗೆ ಸುಡುತ್ತದೆ. ಅಲ್ಲದೆ, ಊತ, ಉಸಿರಾಟ ತೊಂದರೆ ಉಂಟಾಗುತ್ತದೆ. ಕೆಲವೊಮ್ಮೆ ಇದರ ಸೇವನೆಯಿಂದ ಸಾವು ಕೂಡ ಸಂಭವಿಸಬಹುದು. ಹಾಗಾಗಿ ಈ ಗಿಡದಿಂದ ದೂರವಿರುವುದು ಒಳ್ಳೆಯದು.
ಇಂಗ್ಲಿಷ್ ಐವಿ :
ಈ ಸಸ್ಯವನ್ನು ಹೆಚ್ಚಿನ ಜನರು ತಮ್ಮ ಗಾರ್ಡನ್‌ಗಳಲ್ಲಿ, ಮನೆಯೊಳಗೆ ಪಾಟ್‌ನಲ್ಲಿ ಬೆಳೆಸುತ್ತಾರೆ. ಈ ಸಸ್ಯವು ನೋಡಲು ಸುಂದರ ಮಾತ್ರವಲ್ಲದೆ, ಗಾಳಿಯಿಂದ ಹಾನಿಕಾರಕ ಕಣಗಳನ್ನು ತೆಗೆದುಹಾಕುತ್ತದೆ. ಆದರೆ ಈ ಗಿಡ ವಿಷಕಾರಿಯೂ ಹೌದು. ಇದು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಅಪಾಯಕಾರಿಯಾಗಿದೆ. ಐವಿಯಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ಈ ಸಸ್ಯದ ಎಲೆಯನ್ನು ತಿಂದರೆ ಗಂಟಲು ಮತ್ತು ಬಾಯಿಯಲ್ಲಿ ಉರಿ, ಸೆಳೆತ, ಜ್ವರ ಮತ್ತು ಇದರ ವಿಷಕಾರಿ ಅಂಶದಿಂದಾಗಿ ಹೊಟ್ಟೆ ಕೆಡಬಹುದು ಎನ್ನಲಾಗಿದೆ.
ಸ್ಪ್ಲಿಟ್ ಲೀಫ್ ಫಿಲೊಡೆಂಡ್ರಾನ್ :
ಇದು ಜನಪ್ರಿಯ ಒಳಾಂಗಣ ಗಿಡವಾಗಿದ್ದು, ಬೆಳೆಯಲು ತುಂಬಾ ಸುಲಭ. ಆದರೆ ಈ ಗಿಡ ಕೂಡ ವಿಷಕಾರಿ ಅಂಶದಿಂದ ಕೂಡಿದೆ. ಈ ಗಿಡದಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಕ್ರಿಸ್ಟಲ್ಸ್ ಎಂಬ ವಿಷಕಾರಿ ಅಂಶವಿದ್ದು, ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ತುಂಬಾ ಅಪಾಯಕಾರಿಯಾಗಿದೆ. ಮಕ್ಕಳು ಅಥವಾ ದೊಡ್ಡವರು ಇದನ್ನು ಸೇವಿಸಿದರೆ ಅವರ ಮೇಲೆ ಇದರ ಪರಿಣಾಮ ಬೀರುತ್ತದೆ. ಬಾಯಲ್ಲಿ ದದ್ದು, ಜೀರ್ಣಾಂಗ ಊತ ಇತ್ಯಾದಿ ತೊಂದರೆಗಳು ಉಂಟಾಗುತ್ತದೆ. ಹಾಗೇ ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳಿಂದನು ಈ ಗಿಡವನ್ನು ದೂರವಿಡುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಅಮರಂಥ್ :
ಇದರ ಹೂವು ತುಂಬಾ ಆಕರ್ಷಣೀಯವಾಗಿದ್ದು, ಹೆಚ್ಚಿನ ಜನರು ತಮ್ಮ ಹೂವಿನ ತೋಟದಲ್ಲಿ ಈ ಗಿಡಗಳನ್ನು ಬೆಳೆಸುತ್ತಾರೆ. ಅಮರಂಥ್ ಸುಂದರ ಜಡೆಯಂತೆ ಹೂವು ಬಿಡುವ ಗಿಡವಾಗಿದೆ. ಆದರೆ ಈ ಗಿಡವನ್ನು ಮನೆಯ ಗಾರ್ಡನ್‌ನಲ್ಲಿ ಬೆಳೆಸದಿರುವುದು ಉತ್ತಮ. ಈ ಗಿಡವು ಅತ್ಯಧಿಕ ಪರಾಗ ಉತ್ಪಾದಿಸುತ್ತದೆ. ಮುಖ್ಯವಾಗಿ ಅಲರ್ಜಿ ತೊಂದರೆಗಳಿಂದ ಬಳಲುವವರು ಇಂತಹ ಗಿಡಗಳನ್ನು ಮನೆಯಲ್ಲಿ ಬೆಳೆಸದಿರುವುದು ಉತ್ತಮ.
ರಿಕಿನಸ್ ಕಮ್ಯುನಿಸ್ :
ಈ ಗಿಡವನ್ನು ಕ್ಯಾಸ್ಟರ್ ಬೀನ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದರ ಬೀಜಗಳಿಂದ ಕ್ಯಾಸ್ಟರ್ ಎಣ್ಣೆಯನ್ನೂ ತೆಗೆಯಲಾಗುತ್ತದೆ. ಆದರೆ ಈ ಸಸ್ಯ ತುಂಬಾ ವಿಷಕಾರಿ ಅಂಶವನ್ನು ಹೊಂದಿದ್ದು, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಆಡು, ದನಗಳಿಗೆ ತುಂಬಾ ಅಪಾಯಕಾರಿಯಾಗಿದೆ.