ತಲೆ ಕೂದಲಿಗೆ ಕೈ ಹಾಕಿದರೂ ಕೂದಲು ಉದುರುತ್ತದೆಯೇ ? ಹಾಗಾದರೆ ಈ ಐದು ಸೂಪರ್‌ಫುಡ್ ಉತ್ತಮ
ಆರೋಗ್ಯಕರ, ಬಲವಾದ ಮತ್ತು ಹೊಳಪುಳ್ಳ ಕೂದಲು ಪುರುಷರು ಮತ್ತು ಮಹಿಳೆಯರಿಗೆ ಅವಶ್ಯಕವಾಗಿದೆ. ಸುಂದರವಾದ ಕೂದಲು ಎಂದರೆ ದುಬಾರಿ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದು ಮಾತ್ರವಲ್ಲ. ಚರ್ಮದಂತೆಯೇ ಆರೋಗ್ಯಕರ ಕೂದಲು ಕೂಡ ಉತ್ತಮ ಪೋಷಣೆಯುಳ್ಳ ದೇಹದ ಸೂಚಕವಾಗಿದೆ. ನೀವು ಮಾಡುವ ಆಹಾರದ ಆಯ್ಕೆಗಳು ನಿಮ್ಮ ಕೂದಲನ್ನು ಹಾನಿಗೊಳಿಸಬಹುದು ಅಥವಾ ಪೋಷಿಸಬಹುದು. ಒತ್ತಡ ಮತ್ತು ಮಾಲಿನ್ಯವು ನಮ್ಮ ಕೂದಲ ಮೇಲೆ ಹಾನಿಯನ್ನುಂಟುಮಾಡುತ್ತದೆ. ಕೆಲವೊಂದು ಆಹಾರವನ್ನು ಸೇವನೆ ಮಾಡಿದರೆ ಕೂದಲು ಆರೋಗ್ಯವಾಗಿರುತ್ತದೆ. ಹಾಗಾಗಿ ನಾವಿಂದು ನಿಮಗೆ ಐದು ಸೂಪರ್ ಆಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕ್ಯಾರೆಟ್ ಜ್ಯೂಸ್:- ಕೂದಲು ಉದುರುವುದನ್ನು ತಡೆಯಲು ಚಳಿಗಾಲದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯುವುದು ಒಳ್ಳೆಯದು. ಈ ರಸದಲ್ಲಿ ಅನೇಕ ಪೋಷಕಾಂಶಗಳಿವೆ, ಇದು ತಲೆಯ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಈ ಕಾರಣದಿಂದ ದೇಹದಲ್ಲಿನ ರಕ್ತದ ಪ್ರಮಾಣವು ಹೆಚ್ಚಾಗುತ್ತದೆ, ಇದರಿಂದಾಗಿ ತಲೆಗೆ ರಕ್ತ ಪೂರೈಕೆಯೂ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಸಲಾಡ್ ತಿನ್ನುವುದರ ಬಗ್ಗೆಯೂ ಗಮನ ಹರಿಸಬೇಕು.
ಮೊಟ್ಟೆ:- ಕೂದಲಿನ ಮಾಸ್ಕ್ ಗಳಲ್ಲಿ ಹೆಚ್ಚಾಗಿ ಮೊಟ್ಟೆ ಬಳಕೆ ಮಾಡಲಾಗುತ್ತದೆ. ಯಾಕೆಂದರೆ ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇದ್ದು, ಕೂದಲನ್ನು ಇದು ಸರಿಪಡಿಸುವುದು. ವಿಟಮಿನ್ ಬಿ12 ಕೊರತೆ ಇದ್ದರೆ ಆಗ ಕೂದಲು ಅಕಾಲಿಕವಾಗಿ ಬಿಳಿಯಾಗುವುದು. ಮೊಟ್ಟೆಯು ಈ ವಿಟಮಿನ್ ಕೊರತೆ ನೀಗಿಸುವುದು. ಮೊಟ್ಟೆಯನ್ನು ಬೇಯಿಸಿ ತಿಂದರೆ ಅದು ಕೂದಲಿನ ಆರೋಗ್ಯ ಕಾಪಾಡುವುದು. ಮೊಟ್ಟೆಯ ಆಮ್ಲೆಟ್ ಕೂಡ ಮಾಡಿ ತಿನ್ನಬಹುದು. ಸಸ್ಯಾಹಾರಿಯಾಗಿದ್ದರೆ ಆಗ ನೀವು ಸೋಯಾ ಮತ್ತು ಸೀರೆಲ್ ಬಳಕೆ ಮಾಡಿ.
ಪಾಲಕ್ ಸೊಪ್ಪು:- – ಈ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸಿದರೆ ಕೂದಲ ಉದುರುವಿಕೆಯನ್ನು ತಡೆಯಬಹುದು. ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಅಥವಾ ಪಾಲಕ್ ಸೊಪ್ಪಿನ ಪಲ್ಯ ತಯಾರಿಸಿ ತಿನ್ನಬಹುದು. ಇದರೊಂದಿಗೆ ನೀವು ಹಸಿರು ತರಕಾರಿಗಳ ಸೇವನೆಯನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಕೂದಲು ಶಕ್ತಿಯುತವಾಗುತ್ತದೆ.
ಬಾದಾಮಿ ಮತ್ತು ಅಗಸೆ ಬೀಜ:- ಕೂದಲು ಉದುರುವುದನ್ನು ತಡೆಯಲು ಒಮೆಗಾ 3 ಫ್ಯಾಟಿ ಆಸಿಡ್ ದೇಹಕ್ಕೆ ಅಗತ್ಯವಿದೆ. ಈ ಆಮ್ಲವು ಕೂದಲನ್ನು ದಪ್ಪವಾಗಿಸಲು ಮತ್ತು ಪೋಷಿಸಲು ಕೆಲಸ ಮಾಡುತ್ತದೆ. ಈ ಆಮ್ಲವು ಅಗಸೆ ಬೀಜಗಳು ಮತ್ತು ಬಾದಾಮಿಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಆದ್ದರಿಂದಲೇ ಇವುಗಳನ್ನು ಸೇವಿಸಿದರೆ ಖಂಡಿತಾ ಲಾಭವಾಗುತ್ತದೆ.
ಅಗಸೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ನಮ್ಮ ನೆತ್ತಿ ಹಾಗೂ ತಲೆಯ ಸಂಪೂರ್ಣ ಭಾಗದಲ್ಲಿ ಕೂದಲಿಗೆ ಮಸಾಜ್ ಮಾಡಿದರೆ ನಮ್ಮ ತಲೆ ಕೂದಲು ಸಾಕಷ್ಟು ಸದೃಢವಾಗುವುದರೊಂದಿಗೆ ತುಂಬಾ ಮೃದುವಾಗಿ ಮತ್ತು ಹೊಳಪಾಗಿ ಕಾಣಿಸುತ್ತದೆ. ವಾಲ್‌ನಟ್ಸ್ ಸೇವಿಸುವುದು ಕೂದಲಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ವಿಟಮಿನ್-ಸಿ:- ಕೆಲವೊಮ್ಮೆ ದೇಹದಲ್ಲಿನ ದುರ್ಬಲ ರೋಗನಿರೋಧಕ ಶಕ್ತಿಯಿಂದ ಕೂದಲಿನ ಬೇರು ಕೂಡ ದುರ್ಬಲವಾಗುತ್ತದೆ. ಇದರಿಂದಾಗಿ ಉದುರಲು ಪ್ರಾರಂಭಿಸುತ್ತವೆ. ಇದನ್ನು ತಪ್ಪಿಸಲು ನೀವು ವಿಟಮಿನ್-ಸಿ ಸಮೃದ್ಧವಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಕು. ಶೀತದ ದಿನಗಳಲ್ಲಿ ಕಿತ್ತಳೆ, ನಿಂಬೆ, ಟ್ಯಾಂಗರಿನ್ ಮತ್ತು ಕಿವಿಯಂತಹ ಹಣ್ಣುಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಕೂದಲು ಮೊದಲಿಗಿಂತ ಹೆಚ್ಚು ಹೊಳೆಯಲು ಪ್ರಾರಂಭಿಸುತ್ತದೆ.
ನೀರು:- ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ದೇಹದಲ್ಲಿ ಹೈಡ್ರೇಶನ್ ಬಹಳ ಮುಖ್ಯ . ಪ್ರತಿ ದಿನ 3-4 ಲೀಟರ್ ನೀರನ್ನು ಕುಡಿಯಲೇಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು . ಈ ರೀತಿ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿಡುವುದು ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯ . ಇದರಿಂದ ಕೂದಲು ಹೆಚ್ಚಾಗಿ ಬೆಳೆಯಲು ಸಹಾಯವಾಗುತ್ತೆ .