ರಾಹುಲ್ ಗಾಂಧಿಯನ್ನು ಆಚಾರ್ಯ ಶಂಕರರಿಗೆ ಹೋಲಿಸಿದ ಫಾರುಕ್ ಅಬ್ದುಲ್ಲ! ಹೋಲಿಕೆಗೆ ನೀಡಿದ ಕಾರಣವೇನು ಗೊತ್ತೆ?
ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರನ್ನು ಮೊದಲು ಭಗವಾನ್ ರಾಮನಿಗೆ ಹೋಲಿಸಲಾಗಿತ್ತು. ಇದೀಗ ಹಿಂದೂಗಳ ಪರಮ ಪವಿತ್ರ ಗ್ರಂಥಗಳಾದ ಭಗವದ್ಗೀತೆ, ಉಪನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು ಎಂಬ ಹೆಗ್ಗಳಿಕೆ ಹೊಂದಿರುವ ಆದಿ ಶಂಕರಾಚಾರ್ಯರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಹೋಲಿಕೆ ಮಾಡಲಾಗಿದೆ. ಭಾರತ್ ಜೋಡೋ ಯಾತ್ರೆಯು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಎಂಟ್ರಿ ಕೊಟ್ಟಿದ್ದು, ಈ ಹೊತ್ತಿನಲ್ಲಿ ಇಂಥಾದ್ದೊಂದು ಹೋಲಿಕೆ ಮಾಡಲಾಗಿದೆ.
ಈ ಹಿಂದೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ರಾಹುಲ್ ಗಾಂಧಿ ಅವರನ್ನು ಭಗವಾನ್ ಶ್ರೀರಾಮನಿಗೆ ಹೋಲಿಕೆ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರಾಹುಲ್ ಗಾಂಧಿ ಅವರಿಗೆ ಅತಿ ಮಾನುಷ ಶಕ್ತಿ ಇದೆ. ನಾವು ಸ್ವೆಟರ್, ಜಾಕೆಟ್ ಧರಿಸಿ ಚಳಿಯಲ್ಲಿ ನಡುಗುತ್ತಿದ್ದರೂ ರಾಹುಲ್ ಗಾಂಧಿ ಅವರು ಕೇವಲ ಟಿ ಶರ್ಟ್ ಧರಿಸಿ ಓಡಾಡುತ್ತಿದ್ದಾರೆ. ಅವರು ಒಬ್ಬ ಯೋಗಿ ಇದ್ದಂತೆ. ಅವರು ಏಕಾಗ್ರತೆಯಿಂದ ತಪಸ್ಸಿಗೆ ಕುಳಿತವರಂತೆ ಕಾಣುತ್ತಾರೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದರು.
ಇದೀಗ ಕಾಂಗ್ರೆಸ್ ಪಕ್ಷದ ಭಾರತ್ ಭಾರತ್ ಜೋಡೋ ಯಾತ್ರೆಯು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ಅವರು ರಾಹುಲ್ ಗಾಂಧಿ ಅವರನ್ನು ವೇದ ವಿದ್ವಾಂಸರಾದ ಆದಿ ಶಂಕರಾಚಾರ್ಯರಿಗೆ ಹೋಲಿಸಿದ್ದಾರೆ. ಇದಕ್ಕೆ ಕಾರಣ ತಿಳಿಸಿದ ಅವರು ‘ಅನೇಕ ಶತಮಾನಗಳ ಹಿಂದೆ ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದರು. ರಸ್ತೆಗಳಿಲ್ಲದಿದ್ದರೂ ದಟ್ಟ ಕಾಡಿನಲ್ಲಿಯೇ ಅವರು ನಡೆದು ಬಂದಿದ್ದರು. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದುಕೊಂಡು ಬಂದಿದ್ದರು. ಅದೇ ಕನ್ಯಾಕುಮಾರಿಯಿಂದ ಯಾತ್ರೆ ಕೈಗೊಂಡು ಕಾಶ್ಮೀರ ತಲುಪುತ್ತಿರುವ ಎರಡನೇ ವ್ಯಕ್ತಿ ರಾಹುಲ್ ಗಾಂಧಿ’ ಎಂದು ಅವರು ಹೇಳಿದ್ದಾರೆ.
ಆದಿ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಬಾಳಿ ಬದುಕಿದ್ದವರು. ಅದ್ವೈತ ಸಿದ್ದಾಂತದ ಪ್ರತಿಪಾದಕರು. ಭಗವದ್ಗೀತೆ, ಉಪನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು ಎಂಬ ಹೆಗ್ಗಳಿಕೆ ಆದಿ ಶಂಕರಾಚಾರ್ಯರಿಗೆ ಇದೆ. ಗೋವಿಂದ ಭಗವತ್ಪಾದಕರ ಶಿಷ್ಯರಾದ ಆದಿ ಶಂಕರಾಚಾರ್ಯರ ವಿಚಾರಗಳು, ಸಿದ್ಧಾಂತಗಳು ಹಾಗೂ ಅವರು ನಿರ್ಮಿಸಿದ ಪೀಠಗಳು ಇಂದಿಗೂ ಜೀವಂತವಾಗಿವೆ ಅಷ್ಟೇ ಅಲ್ಲ, ಮೇರು ಮಟ್ಟದಲ್ಲಿವೆ. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರೂ ಒಬ್ಬರು. ಇದೀಗ ಶಂಕರಾಚಾರ್ಯರಿಗೆ ರಾಹುಲ್ ಗಾಂಧಿ ಅವರನ್ನು ಹೋಲಿಕೆ ಮಾಡಲಾಗಿದೆ.
ಭಾರತ್ ಜೋಡೋ ಯಾತ್ರೆಯ ಉದ್ದೇಶವೇ ಭಾರತವನ್ನು ಒಂದು ಮಾಡೋದು ಎಂದು ಬಣ್ಣಿಸಿದ ಫಾರೂಕ್ ಅಬ್ದುಲ್ಲಾ, ದೇಶದಲ್ಲಿ ದ್ವೇಷದ ವಾತಾವರಣ ಮೂಡಿಸಿದೆ. ಹಲವು ಧರ್ಮಗಳ ಜನರು ಒಟ್ಟಾಗಿ ಬಾಳಬೇಕು. ಆದ್ರೆ, ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ. ಗಾಂಧಿಯ ಭಾರತ ಹಾಗೂ ರಾಮನ ಭಾರತದಲ್ಲಿ ನಾವು ಎಲ್ಲರೂ ಒಂದಾಗಿ ಇದ್ದೆವು. ಹೀಗಾಗಿ, ಈ ಯಾತ್ರೆಯ ಉದ್ದೇಶವು ಅದೇ ಆಗಿದೆ. ನಾವೆಲ್ಲರೂ ಒಂದಾಗಬೇಕು. ಈ ಒಗ್ಗಟ್ಟಿನ ವಿರುದ್ದ ಇರುವವರು ಕೇವಲ ನಮ್ಮ ಶತ್ರುಗಳಲ್ಲ, ಈ ದೇಶದ ಶತ್ರುಗಳು ಹಾಗೂ ಮಾನವೀಯತೆಯ ಶತ್ರುಗಳು ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.