Women Health : ಸ್ವಲ್ಪ ಸ್ವಲ್ಪ ಅಂತ ಪೆಗ್ ಏರಿಸುವ ಮಹಿಳೆಯರಿಗೆ ಈ ಸುದ್ದಿ!
ಎಣ್ಣೆನೂ…. ಸೋಡಾನು… ಎಂತ ಒಳ್ಳೆ ಫ್ರೆಂಡ್ಸು… ನಾನು… ನೀನು… ಇರೋ ಹಂಗೆ…. ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೆ.. ರೋಡ್ ಅನ್ನೇ ತಮ್ಮ ಮನೆ ಅನ್ನೋ ಹಾಗೇ ಸಿಕ್ಕಿದ್ದಲ್ಲಿ ಕುಡಿದು ತೂರಾಡುವ ಅದೆಷ್ಟೋ ಮಂದಿ ನಮ್ಮ ಕಣ್ಣ ಮುಂದೆ ಆಗಾಗ ನೋಡಲು ಸಿಗುತ್ತಾರೆ. ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ ಎಂಟ್ರಿ ಕೊಡದೆ ಇದ್ದರೆ ಮನಕ್ಕೆ ಸಮಾಧಾನವೇ ಇರುವುದಿಲ್ಲ!! ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!.
ಆದರೆ, ಒಮ್ಮೆ ಪರಮಾತ್ಮ ಒಳ ಹೊಕ್ಕರೆ ಎಣ್ಣೆ ಹೊಟ್ಟೆಗೆ ಹಾಕಿಕೊಂಡ ಮಂದಿಗೆ ಇಹಲೋಕದ ಪರಿವೇ ಇಲ್ಲದೇ ಏನೇನೋ ಮಾತನಾಡುವ , ಗಲಾಟೆ ಮಾಡುವ ಜೊತೆಗೆ ಮದ್ಯ (Alcohol) ಸೇವಿಸಿದ ಬಳಿಕ ವ್ಯಕ್ತಿಯ ಒಟ್ಟಾರೆ ವರ್ತನೆಯಲ್ಲಿ ಬದಲಾವಣೆಯಾಗುವುದು ಗೊತ್ತಿರುವ ವಿಚಾರವೇ!!! ಹದಿಹರೆಯದವರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಎಣ್ಣೆಯ ಮಹಿಮೆಗೆ ದಾಸರಾಗುತ್ತಿದ್ದು ಫ್ಯಾಷನ್ ಅಂತ ಶುರುವಾಗುವ ಆಲ್ಕೋಹಾಲ್ ಸೇವನೆ ಬಳಿಕ ಚಟವಾಗಿ ಬದಲಾಗುತ್ತದೆ. ಈ ಲಿಸ್ಟ್ ನಲ್ಲಿ ಮಹಿಳೆಯರು ಕೂಡ ಇದ್ದಾರೆ ಎಂಬುದನ್ನು ಗಮನಿಸಬೇಕು. ಆದರೆ ಈ ಎಣ್ಣೆಯ ನಶೆಯಿಂದ ದೇಹಕ್ಕೆ ಆಗುವ ದುಷ್ಪರಿಣಾಮದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅಪಾಯಕ್ಕೆ ಆಹ್ವಾನ ಮಾಡಿಕೊಡುವ ಪ್ರಮೇಯವೇ ಹೆಚ್ಚು.
ಕೆಲವೊಂದು ಚಟಗಳು ಕೆಟ್ಟದ್ದು ಎಂಬ ಅರಿವಿದ್ದರೂ ಕೂಡ ಹೇಳಿದಷ್ಟು ಸಲೀಸಾಗಿ ಬಿಡೋದು ಕಷ್ಟ ಸಾಧ್ಯ. ಹಾಗೆಂದು ಮನಸ್ಸು ಮಾಡಿದರೆ ಅಸಾಧ್ಯ ಯಾವುದು ಕೂಡ ಅಲ್ಲ ಎಂಬುದನ್ನು ಕೂಡ ಗಮನಿಸಬೇಕು. ವಿದೇಶದಲ್ಲಿ ಮಾತ್ರವಲ್ಲದೇ ನಮ್ಮ ದೇಶದಲ್ಲೂ ಅನೇಕ ಮಹಿಳೆಯರು ಪಾರ್ಟಿ (Party) ಹೆಸರಿನಲ್ಲಿ ಮದ್ಯಪಾನ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಈ ಹಿಂದೆ ಪುರುಷರು ಮಾತ್ರ ಎಣ್ಣೆಯ ದಾಸರೇನಿಸಿಕೊಳ್ಳುತ್ತಿದ್ದರು. ಆದ್ರೆ ಈಗ ಪುರುಷರ ಜೊತೆಗೆ ಮಹಿಳೆಯರು ಕೂಡ ಎಣ್ಣೆಯ ನಶೆಗೆ ಜಾರುತ್ತಿದ್ದಾರೆ. 1991ರಿಂದ 2000ನೇ ಇಸವಿಯೊಳಗೆ ಹುಟ್ಟಿದ ಯುವತಿಯರು ಕೂಡ ಪುರುಷರ ಸರಿ ಸಮಾನರಾಗಿ ಮದ್ಯಪಾನ ಮಾಡುತ್ತಿದ್ದಾರೆ ಎಂಬ ಅಚ್ಚರಿಯ ಸಂಗತಿಯನ್ನ ಅಮೆರಿಕಾ ವರದಿ ಮಾಡಿದೆ.
ಆಲ್ಕೋಹಾಲ್ ನಮ್ಮ ಯಕೃತ್ತಿನ ಅನಾರೋಗ್ಯ (Illness) ಕ್ಕೆ ಎಡೆ ಮಾಡಿಕೊಡುವುದು ಗೊತ್ತಿರುವ ವಿಚಾರವೇ!! ಆದ್ರೆ ಯಕೃತ್ತ (Liver) ನ್ನು ಹೊರತುಪಡಿಸಿ ಅನೇಕ ಸಮಸ್ಯೆಗಳು ಮದ್ಯ ವ್ಯಸನಿಗಳನ್ನೂ ಕಾಡುತ್ತಿದೆ. ಯುಎಸ್ (US) ಸರ್ಕಾರದ ಅಂಕಿಅಂಶಗಳ ಪ್ರಕಾರ, 2000 ಮತ್ತು 2015 ರ ನಡುವೆ, ಸಿರೋಸಿಸ್ ನಿಂದ ಸಾವನ್ನಪ್ಪುತ್ತಿರುವ ಮಹಿಳೆಯರ ಸಾವಿನ ಸಂಖ್ಯೆ ಶೇಕಡಾ 57 ರಷ್ಟು ಹೆಚ್ಚಳ ಕಂಡಿದೆ. ಈ ಸಮಯದಲ್ಲಿ ಶೇಕಡಾ 21 ಪುರುಷರು ಸಿರೋಸಿಸ್‌ನಿಂದ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಆಲ್ಕೋಹಾಲ್ ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುವುದಲ್ಲದೆ ಮದ್ಯಪಾನ ಮಹಿಳೆಯರ ಮೆದುಳಿನ ಮೇಲೂ ಪ್ರಭಾವ ಬೀರುತ್ತದೆ. ಹೆಚ್ಚು ಆಲ್ಕೋಹಾಲ್ ಸೇವನೆ ಮಾಡುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಡುವ ಸಂಭವ ಹೆಚ್ಚು ಎಂದು ಬಯಲಾಗಿದೆ. ಮದ್ಯಪಾನ ಮಾಡುವುದರಿಂದ ಮಹಿಳೆಯರಿಗೆ ಲಿವರ್ ಸಿರೋಸಿಸ್ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಮಸ್ಯೆಗಳು ಕಾಡುತ್ತಿದೆ ಎಂದು ಸಮೀಕ್ಷೆಯಿಂದ ಬಯಲಾಗಿದೆ.
ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಕುಡಿಯುವ ಹವ್ಯಾಸ ರೂಡಿಸಿಕೊಂಡಲ್ಲಿ ಮಗುವಿಗೆ ಭ್ರೂಣದ ಆಲ್ಕೋಹಾಲ್ ಸ್ಪೆಕ್ಟ್ರಮ್ ಡಿಸಾರ್ಡರ್ಸ್ (FASD) ಅಪಾಯ ಎದುರಾಗುವ ಸಾಧ್ಯತೆಗಳಿವೆ. ಮದ್ಯದ ಅತಿಯಾದ ಸೇವನೆಯು ಗರ್ಭಪಾತ, ಅನೇಕ ಜನ್ಮಜಾತ ರೋಗಗಳ ಅಪಾಯಕ್ಕೆ ಎಡೆ ಮಾಡಿಕೊಡುವ ಪ್ರಮೇಯವನ್ನು ಹೆಚ್ಚಿಸುತ್ತದೆ. ಪಿರಿಯಡ್ಸ್ ಸಮಯದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದು ಕೂಡ ಅಪಾಯಕಾರಿ ಎನ್ನಲಾಗಿದೆ. ಮುಟ್ಟಿನ ಸಮಯದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದರಿಂದ ರಕ್ತ ತೆಳುವಾಗುತ್ತದೆ ಅಷ್ಟೆ ಅಲ್ಲದೆ ಕೆಲವರಿಗೆ ಅತಿಯಾದ ರಕ್ತಸ್ರಾವವಾಗುವ ಸಾಧ್ಯತೆ ಇದೆ. ಅತಿಯಾದ ಮದ್ಯ ಸೇವನೆ ಮಾಡುವುದರಿಂದ ಮಹಿಳೆಯರಲ್ಲಿ ಕಾಲುಗಳು ಮತ್ತು ಕೈಗಳ ಸೆಳೆತ ಕೂಡ ಉಂಟಾಗಬಹುದು.ಯಕೃತ್ತು ಮತ್ತು ಹೃದಯದ ಸಮಸ್ಯೆ ಮಹಿಳೆ ಮತ್ತು ಪುರುಷರಲ್ಲೂ ಕೂಡ ಕಂಡುಬರುತ್ತದೆ.
ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ತಲೆದೋರುವ ಜೊತೆಗೆ ಹೃದಯದ ಸ್ನಾಯುಗಳು ಹೆಚ್ಚು ದುರ್ಬಲವಾಗುತ್ತ ಹೋಗುತ್ತದೆ. ಹೀಗಾಗಿ ರಕ್ತವನ್ನು ಪಂಪ್ ಮಾಡುವ ಸಮಸ್ಯೆ ಕೂಡ ಉಂಟಾಗುತ್ತದೆ. ತಜ್ಞರು ಮದ್ಯಪಾನ ನಿರಂತರವಾಗಿ ಮಾಡುತ್ತಿದ್ದಲ್ಲಿ ಹೃದಯ ವೈಫಲ್ಯದ ಸಮಸ್ಯೆ ಉಂಟಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡುತ್ತಾರೆ.