ನಿಮಗೆ ರುಚಿ ರುಚಿಯಾದ ಅಡುಗೆ ಮಾಡಲು ಬರುತ್ತಾ? ಹಾಗಾದ್ರೆ ತಿಂಗಳಿಗೆ 4.5 ಲಕ್ಷ ಸಂಬ್ಳ, ಕಾರು, ಬಂಗ್ಲೆ ಎಲ್ಲಾ ಸಿಗುತ್ತೆ! ಇಂತ ಆಫರ್ ನೀಡಿದ್ಯಾರು ಗೊತ್ತಾ?

ನಿಮಗೆ ಅಂತರಾಷ್ಟ್ರೀಯ ಗುಣಮಟ್ಟದ ಅಡುಗೆಗಳನ್ನು ಮಾಡಲು ಬರುತ್ತದೆಯೇ? ಹಾಗಿದ್ರೆ ನೀವು ಇಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಇಂಟರ್ ನ್ಯಾಶನಲ್ ಅಡುಗೆ ಮಾಡಲು ನಿಮಗೆ ಸಿಗುವ ತಿಂಗಳ ಸಂಬಳವೆಷ್ಟು ಗೊತ್ತೆ? ಬರೋಬ್ಬರಿ 4.5 ಲಕ್ಷ! ಜೊತೆಗೆ ಇರೋದಕ್ಕೆ ಒಂದು ಬಂಗಲೆ! ನನಗೆ ಒಬ್ಬ ಶೆಫ್ ಬೇಕು ಎಂದು ಇಂತಹ ಒಂದು ಭರ್ಜರಿಯಾದ ಆಫರ್ ನೀಡಿದವರಾರು ಗೊತ್ತಾ?

ಹೌದು, ಫುಟ್ಬಾಲ್​ ಲೋಕದ ದಿಗ್ಗಜ ಆಟಗಾರ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಅವರು ತನ್ನ ಮನೆಗೆ ಬಾಣಸಿಗನನ್ನು ಹುಡುಕುತ್ತಿದ್ದಾರಂತೆ. ಅಡುಗೆ ಮಾಡುವುದಕ್ಕಾಗಿ ಆತನಿಗೆ ತಿಂಗಳಿಗೆ 4.5 ಲಕ್ಷದಷ್ಟು ಸಂಬಳ ಕೊಟ್ಟು, ಉಳಿದುಕೊಳ್ಳಲು ಬಂಗಲೆಯನ್ನೂ ಕೊಡುತ್ತಾರಂತೆ. ಅದರಲ್ಲೂ ಕೂಡ ಬಾಯಲ್ಲಿ ನೀರೂರಿಸುವ ಪೋರ್ಚುಗೀಸ್ ಆಹಾರದ ಜೊತೆಗೆ ಪ್ರಪಂಚದಾದ್ಯಂತದ ವಿವಿಧ ಪಾಕಪದ್ಧತಿಗಳನ್ನು ಅಡುಗೆ ಮಾಡುವ ಬಾಣಸಿಗನನ್ನು ಹುಡುಕುತ್ತಿರುವುದಾಗಿ ರೊನಾಲ್ಡೊ ಹೇಳಿದಿದ್ದಾರೆ.

ರೊನಾಲ್ಡೊ ಫಿಫಾ ವಿಶ್ವಕಪ್​ 2022 ಬಳಿಕ ಸೌದಿ ಅರೇಬಿಯಾದ ಅಲ್ ನಾಸ್ರ್ ಕ್ಲಬ್​ ಪರವಾಗಿ ಇನ್ಮುಂದೆ ಫುಟ್ಬಾಲ್​ ಆಡಲಿದ್ದಾರೆ. ಇದಕ್ಕಾಗಿ ಅವರು 2 ವರ್ಷದ ಒಪ್ಪದಂದ ಮಾಡಿಕೊಂಡಿದ್ದು, ಬರೋಬ್ಬರಿ 45000 ಕೋಟಿ ಸಂಬಳವನ್ನು ಪಡೆಯುತ್ತಿದ್ದಾರೆ. ಇದೂ ಸಹ ಕಳೆದ ತಿಂಗಳು ಸಖತ್​ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದಾದ ಬಳಿಕ ಮತ್ತೆ ರೊನಾಲ್ಡೊ ತಮ್ಮ ಕುಟುಂಬದೊಂದಿಗೆ ಸೌದಿಯ ಪಾರ್ಕ್​ಗೆ ತೆರಳುವ ಸಲುವಾಗಿ ಸೌದಿ 2 ಗಂಟೆಗಳ ಕಾಲ ಆ ಒಂದು ಪಾರ್ಕ್​ನ್ನು ಸಾವರ್ಜನಿಕರಿಂದ ಮುಕ್ತಗೊಳಿಸಿತ್ತು. ಇದೂ ಸಹ ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದಿಗ ಅದೇ ರೀತಿ ಮತ್ತೊಮ್ಮೆ ರೊನಾಲ್ಡೊ ಸುದ್ದಿಯಲ್ಲಿದ್ದಾರೆ. ಅದೂ ಸಹ ಅಡುಗೆಯ ವಿಷಯದಲ್ಲಿ ಎಂಬುದು ಗಮನಾರ್ಹ!

ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ವಾಸ್ತವವಾಗಿ, ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ರೊನಾಲ್ಡೊ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ. ಇಂತಹ ಆಟಗಾರ ಈಗ ಅಡುಗೆಯವರನ್ನು ಹುಡುಕುತ್ತಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ನೀಡುವುದಾಗಿ ಭರವಸೆ ನೀಡಿದರೂ ಯಾರೂ ಸಿಗದಿರುವುದು ರೊನಾಲ್ಡೊಗೆ ಬೇಸರ ತರಿಸಿದೆಯಂತೆ.

ರೊನಾಲ್ಡೊ ತನ್ನ ಪತ್ನಿಯೊಂದಿಗೆ ಪೋರ್ಚುಗಲ್‌ನ ಕ್ವಿಂಟಾ ಡ ಮರಿನಾದಲ್ಲಿ ನಿರ್ಮಿಸುತ್ತಿರುವ ಐಷಾರಾಮಿ ಮನೆಗೆ ಹೋಗಲು ಯೋಜಿಸುತ್ತಿದ್ದಾನೆ. ಆದರೆ ಅದಕ್ಕೂ ಮೊದಲು, ಅವರು ತಮ್ಮ ಕುಟುಂಬಕ್ಕೆ ವೈಯಕ್ತಿಕ ಅಡುಗೆಯವರನ್ನು ಬಯಸುತ್ತಿದ್ದಾರೆ. ಈ ವರ್ಷದ ಜೂನ್ ವೇಳೆಗೆ ಮನೆ ನಿರ್ಮಾಣ ಪೂರ್ಣಗೊಳ್ಳಲಿದೆ. ಅದರ ನಂತರ, ರೊನಾಲ್ಡೊ ತನ್ನ ಹೆಂಡತಿ ಜಾರ್ಜಿನಾ ರೊಡ್ರಿಗಸ್ ಮತ್ತು ಮಕ್ಕಳೊಂದಿಗೆ ಹೊಸ ಮನೆಗೆ ಹೋಗುತ್ತಾರೆ. ಹಾಗಾಗಿ ಆ ಮನೆಯಲ್ಲಿ ರೊನಾಲ್ಡೊ ಅವರಿಗೆ ಅಡುಗೆ ಮಾಡಲು ಶೆಫ್ ಅನ್ನು ಹುಡುಕುತ್ತಿದ್ದಾರೆ. ಅವರ ಕುಟುಂಬದವರು ಆಹಾರಪ್ರೇಮಿಗಳಾಗಿರುವುದರಿಂದ ಅವರ ಬೇಡಿಕೆಗಳು ಸಹ ಹೆಚ್ಚೇ ಇದೆ.

ಆದರೆ ರೊನಾಲ್ಡೊಗೆ ಬಾಣಸಿಗರಾಗಿ ಸೇರುವವರಿಗೆ ಕೆಲ ಷರತ್ತುಗಳೂ ಸಹ ಇದೆ. ಅವುಗಳೆಂದರೆ, ಮುಖ್ಯವಾಗಿ ಅವರಿಗೆ ಪೋರ್ಚುಗೀಸ್ ಆಹಾರ ತಯಾರಿಸಲು ಬರಬೇಕಂತೆ. ಜೊತೆಗೆ ಅಂತರರಾಷ್ಟ್ರೀಯ ಭಕ್ಷ್ಯಗಳನ್ನು ತಯಾರಿಸುವಲ್ಲಿ ಪರಿಣತಿ ಇರಬೇಕಂತೆ. ಇವುಗಳಿಗೆ ಒಪ್ಪಿಗೆ ಇದ್ದರೆ ನೀವೂ ಸಹ ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.