BPL ಕುಟುಂಬಗಳಿಗೆ ಸಿಹಿ ಸುದ್ದಿ, ಗೃಹಿಣಿ ಶಕ್ತಿ ಯೋಜನೆ, ಜೊತೆಗೆ ಮಾಸಿಕ ರೂ.2000 ಆರ್ಥಿಕ ನೆರವು!

ಬಡತನ ರೇಖೆಗಿಂತ ಕೆಳಗಿನ ವರ್ಗದ ಜನರಿಗೆ ಬಿಪಿಎಲ್ ಎಂಬ ಯೋಜನೆಯ ಮೂಲಕ ಹಲವಾರು ಸೌಲಭ್ಯಗಳು ಲಭಿಸಿವೆ. ರಾಜ್ಯದ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಮತ್ತು ಆರೋಗ್ಯ ಸುಧಾರಣೆ ಸೇರಿದಂತೆ ಅವರ ಉತ್ತಮ ಬದುಕಿಗೆ ಸರ್ಕಾರವು ಹಲವು ಯೋಜನೆ ಮೂಲಕ ಸೌಲಭ್ಯವನ್ನು ಕಲ್ಪಿಸುತ್ತಿದೆ. ಇದೀಗ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ಬಿಪಿಎಲ್ ಕುಟುಂಬಗಳಿಗೆ ನೀಡಿದೆ. ಪ್ರತಿ ತಿಂಗಳು ಹಣಕಾಸಿನ ನೆರವು ನೀಡಲು ಸರ್ಕಾರವು ಯೋಜನೆಯನ್ನು ರೂಪಿಸಿದ್ದು, ‘ಗೃಹಿಣಿ ಶಕ್ತಿ’ ಹೆಸರಿನಲ್ಲಿ ಜಾರಿಗೊಳಿಸಲು ಚಿಂತನೆ ನಡೆಸಿದೆ.

ಚಿಕ್ಕಮಗಳೂರು ಉತ್ಸವ ಉದ್ಘಾಟನೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು ಬೀರೂರು ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಬಿಪಿಎಲ್ ಕುಟುಂಬಗಳಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲಾಗುವುದು ಹಾಗೂ ಪ್ರತಿ ತಿಂಗಳು ಹಣಕಾಸಿನ ನೆರವು ನೀಡಲು ‘ಗೃಹಿಣಿ ಶಕ್ತಿ’ ಹೆಸರಲ್ಲಿ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

ಅಲ್ಲದೇ ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬಗಳಿಗೆ ಇನ್ನೊಂದು ಗುಡ್ ನ್ಯೂಸ್ ನೀಡಿದ್ದು, ಮಾಸಿಕ 2,000 ರೂ. ನೆರವು ನೀಡಲು ನಿರ್ಧರಿಸಲಾಗಿದೆ. ತಾಲೂಕಿನ ಮಾಚನಾಳ ತಾಂಡಾದಲ್ಲಿ ಮಾತನಾಡಿದ ಸಚಿವ ಅಶೋಕ್. ರಾಜ್ಯದ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 2000 ರೂ. ನೆರವು ನೀಡಲು ರಾಜ್ಯ ಸರ್ಕಾರ ನಿರ್ಧರಿಸಲಾಗಿದ್ದು, ಬರುವ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿರುವ ಎಲ್ಲಾ ಲಂಬಾಣಿ ತಾಂಡಾ, ಕುರುಬರ ಹಟ್ಟಿ, ಅಲೆಮಾರಿಗಳ ಹಾಡಿಗಳಲ್ಲಿರುವ 1.02 ಲಕ್ಷ ಕುಟುಂಬಗಳಿಗೆ ಒಂದು ತಿಂಗಳಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು. ಮೊದಲನೇ ಹಂತವಾಗಿ ಜನವರಿ 19ಕ್ಕೆ ಕಲಬುರಗಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲಬುರಗಿ ಸೇರಿ 5 ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಜಿಲ್ಲೆಯ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಂದಾಯ ಸಚಿವರು ತಿಳಿಸಿದರು.

Leave A Reply

Your email address will not be published.