ಪಿಯು ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯಲ್ಲಿ ಇರಲಿದೆ ಈ ಎಲ್ಲಾ ಬದಲಾವಣೆ!
ಇನ್ನೇನು ಕೆಲವೇ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು ಹಲವಾರು ವಿದ್ಯಾರ್ಥಿಗಳು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿ ಮಹತ್ತರ ಬದಲಾವಣೆಯನ್ನು ಮಾಡಿದ್ದೂ, ಈ ಮೂಲಕ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಹೌದು, ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮ ಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಅಲ್ಲದೇ, ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣರಾಗುವಂತೆ ಮಾಡುವ ಉದ್ದೇಶದಿಂದ ಪ್ರಶ್ನೆಪತ್ರಿಕೆ ಮಾದರಿಯನ್ನು ಬದಲಾಯಿಸುವ ನಿರ್ಧಾರವನ್ನು ಕೈಗೊಂಡಿದೆ.
ದ್ವಿತೀಯ ಪಿಯುಸಿಯ ಎಲ್ಲಾ ವಿಷಯಗಳಲ್ಲೂ 1 ಅಂಕದ ಪ್ರಶ್ನೆಗಳನ್ನು 20ಕ್ಕೆ ಹೆಚ್ಚಿಸುವ ಮೂಲಕ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಹೆಚ್ಚು ಒತ್ತನ್ನು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸುವಂತೆ 2, 3, 4, 5 ಹಾಗೂ 6 ಅಂಕಗಳಿಗೆ ಇಳಿಸಲಾಗಿದೆ. ಪ್ರಶ್ನೆಗಳ ಸಂಖ್ಯೆಯನ್ನು ವಿಷಯವಾರು ಏರಿಳಿತ ಮಾಡಿದೆ. ಅಲ್ಲದೇ ಬಿಟ್ಟ ಸ್ಥಳ ಭರ್ತಿ ಮಾಡುವುದು, ಹೊಂದಿಸಿ ಬರೆಯುವುದು ಹೀಗೆ ಮಕ್ಕಳಿಗೆ ಉತ್ತಮವಾಗಿ ಹಾಗೂ ಸುಲಭವಾಗಿ ಉತ್ತರಿಸಲು ಸಾಧ್ಯವಾಗುವ ಪ್ರಶ್ನೆಗಳ ಮಾದರಿಯನ್ನು ಏರಿಕೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸಹಾಯಕವಾಗುವಂತೆ ಮಾಡಿದೆ.
ಈ ಮೂಲಕ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಆಯಾ ಪ್ರಶ್ನೆಗೆ ಸುಲಭವಾಗಿ ಉತ್ತರಿಸಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂಬುದು ಶಿಕ್ಷಣ ಇಲಾಖೆಯ ಅಭಿಪ್ರಾಯವಾಗಿದೆ. ಇದರ ಜೊತೆಗೆ ಸುಲಭವೂ ಅಲ್ಲದ ಕಷ್ಟವೂ ಅಲ್ಲದ ಪ್ರಶ್ನೆಗಳ ಪ್ರಮಾಣವನ್ನು ಶೇ.40ಕ್ಕೆ ಮತ್ತು ಕಷ್ಟದ ಪ್ರಶ್ನೆಗಳ ಪ್ರಮಾಣವನ್ನು ಶೇ.20ಕ್ಕೆ ಇಳಿಸಲಾಗಿದೆ, ಶೇ.35ರಷ್ಟು ಜ್ಞಾನಾಧಾರಿತ ಪ್ರಶ್ನೆ, ಶೇ.30ರಷ್ಟು ತಿಳುವಳಿಕೆ ಸಾಮರ್ಥ್ಯದ ಪ್ರಶ್ನೆ ಶೇ.25ರಷ್ಟು ಅನ್ವಯಿಸುವಿಕೆ ಶೇ.10ರಷ್ಟು ಕೌಶಲ್ಯಾಧಾರಿತ ಪ್ರಶ್ನೆಗಳನ್ನು ಒಳಗೊಂಡಿರುವಂತೆ ಪ್ರಶ್ನೆ ಪತ್ರಿಕೆಯ ಮಾದರಿಯನ್ನು ಸಿದ್ಧಪಡಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. ಈ ಮೂಲಕ ಸರ್ಕಾರವು, ಪಿಯುಸಿ ಫಲಿತಾಂಶವನ್ನು ಹೆಚ್ಚಿಸುವಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರೆ ತಪ್ಪಾಗಲಾರದು.