SBI ನಿಂದ ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯ | ಗ್ರಾಹಕರಿಗೆ ದೊರೆಯೋ ಲಾಭ ಇಲ್ಲಿದೆ
ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನೇಕ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿವೆ. ಇತ್ತೀಚೆಗೆ ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್ ಬ್ಯಾಂಕಿಂಗ್ ಸೇವೆಗಳನ್ನು ಕೂಡ ನೀಡಲಾಗುತ್ತಿದ್ದು, ಸರ್ಕಾರದ ಎಲೆಕ್ಟ್ರಾನಿಕ್ ಸರ್ವೀಸ್ ಪೂರೈಕೆದಾರ ಸಂಸ್ಥೆ ರಾಷ್ಟ್ರೀಯ ಆಡಳಿತ ಸೇವೆಗಳ ನಿಗಮ (ಎನ್ ಇಎಸ್ ಎಲ್) ಜೊತೆಗೆ ಸೇರಿ ಇ-ಬ್ಯಾಂಕ್ ಗ್ಯಾರಂಟಿ (ಇ-ಬಿಜಿ) ಆಯ್ಕೆ ಕೂಡ ಆರಂಭಿಸಲಾಗಿದೆ. ಇ-ಬಿಜಿಯಿಂದ ಇನ್ಮುಂದೆ ಇ-ಸಹಿ ಹಾಗೂ ಟೈಮ್ ಸ್ಟ್ಯಾಂಪ್ ಗಳ ಬಳಕೆಯಾಗಲಿದ್ದು , ಹೀಗಾಗಿ, ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯದ ವಿಧಾನ ಇನ್ನೂ ಸರಳವಾಗಲಿದೆ.
ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲದೆ ಎನ್ ಇಎಸ್ ಎಲ್ ಪೋರ್ಟಲ್ ಬಳಸಿ ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯದ ಸದುಪಯೋಗವನ್ನು ಗ್ರಾಹಕರು ಪಡೆಯಬಹುದಾಗಿದೆ. ಎಸ್ ಬಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಈ ಹೊಸ ಸೌಲಭ್ಯ ಬ್ಯಾಂಕಿಂಗ್ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಹೇಳಿಕೊಂಡಿದೆ. ಈ ಸೌಲಭ್ಯದ ಮೂಲಕ ಯಾವುದೇ ಬ್ಯಾಂಕಿಂಗ್ ಕಾರ್ಯಗಳಿಗೆ ಆಗುವ ಸಮಯ ವ್ಯರ್ಥವನ್ನು ಇಳಿಸ ಬಹುದಾಗಿದೆ. ಇದಲ್ಲದೆ, ಕಾಯುವ ಸಮಯವನ್ನು ಗಂಟೆಗಳಿಂದ ನಿಮಿಷಗಳಿಗೆ ಇಳಿಕೆಯಾಗಲಿದ್ದು ಜೊತೆಗೆ ಪಾರದರ್ಶಕತೆ ಹೆಚ್ಚಲಿದೆ ಎಂದು ಎಸ್ ಬಿಐ ಮಾಹಿತಿ ನೀಡಿದೆ.
ಇತ್ತೀಚೆಗೆ ಪಿಂಚಣಿದಾರರಿಗೆ ವಿಡಿಯೋ ಕರೆಯ ಮುಖಾಂತರ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (SBI) ನೀಡಿದ್ದು, ಎಸ್ ಬಿಐ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ವೆಬ್ ಸೈಟ್ ಇಲ್ಲವೇ ಮೊಬೈಲ್ ಆ್ಯಪ್ ಮುಖಾಂತರ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದಾಗಿದೆ.
ಎಸ್ ಬಿಐ ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್ ಮೂಲಕ ಪಿಂಚಣಿ ಸ್ಲಿಪ್ ಪಡೆಯುವ ಸೇವೆ ಆರಂಭಿಸಿದ್ದು, ಹಿರಿಯ ನಾಗರಿಕರಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವೇತನ ಸ್ಲಿಪ್ ಪಡೆಯುವ ತಾಪತ್ರಯವನ್ನ ತಪ್ಪಿಸಿದೆ. ಮನೆಯಲ್ಲೇ ಕುಳಿತು ಯಾವುದೇ ತೊಂದರೆ ಇಲ್ಲದೆ ವಾಟ್ಸ್ ಆ್ಯಪ್ ಮೂಲಕ ಪಿಂಚಣಿ ಸ್ಲಿಪ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸೇವೆ ಪಡೆಯಲು ಗ್ರಾಹಕರು ವಾಟ್ಸ್ ಆ್ಯಪ್ ನಲ್ಲಿ 9022690226 ಸಂಖ್ಯೆಗೆ ‘Hi’ಎಂದು ಕಳುಹಿಸಿದರೆ ಸಾಕಾಗುತ್ತದೆ. ಗ್ರಾಹಕರು ವಾಟ್ಸ್ ಆ್ಯಪ್ ಬ್ಯಾಂಕಿಂಗ್ ಸೇವೆ ಬಳಸಿಕೊಂಡು ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಪಡೆಯಲು ಅನುವು ಮಾಡಿಕೊಡಲಾಗಿದೆ.