ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಬಂತು ಮತ್ತೊಂದು ಸಂಕಷ್ಟ! 10 ದಿನದಲ್ಲಿ 164 ಕೋಟಿ ಹಿಂದಿರುಗಿಸುವಂತೆ ನೋಟಿಸ್!

ರಾಷ್ಟ್ರ ರಾಜಕಾರಣದಲ್ಲಿ ಸದ್ಯ ಚಿಗುರೊಡೆಯುತ್ತಿರುವ ಪಕ್ಷವೆಂದರೆ ಆಮ್ಆದ್ಮಿ(AAP). ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಈ ಪಕ್ಷ ಉಚಿತ ಕೊಡುಗೆಗಳ ಮೂಲಕ ಸದಾ ಸುದ್ಧಿಯಲ್ಲಿರುತ್ತದೆ. ಭ್ರಷ್ಟಾಚಾರ ವಿರೋಧಿಯಾಗಿ ಹುಟ್ಟಿಕೊಂಡಿದ್ದ ಆಮ್ಆದ್ಮಿಯು ಇತ್ತೀಚಿಗಂತೂ ಅದರ ಸುಳಿಯಲ್ಲೇ ಸಿಲುಕಿ ನಲುಗುತ್ತ, ವಿವಾದಗಳಿಗೆ ಎಡೆ ಮಾಡಿಕೊಡುತ್ತಿದೆ. ಇದರೊಂದಿಗೆ ಪಕ್ಷದ ಅಧ್ಯಕ್ಷರಾದ ಅರವಿಂದ್ ಕೇಜ್ರಿವಾಲ್ ಅವರೇ ಮುಖ್ಯಮಂತ್ರಿ ಆಗಿರುವ ದೆಹಲಿಯ ಸರ್ಕಾರಕ್ಕೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ.

ಹೌದು, ಸರ್ಕಾರಿ ಜಾಹೀರಾತುಗಳ ಹೆಸರಲ್ಲಿ ತನ್ನ ಪಕ್ಷಕ್ಕೆ ಸಂಬಂಧಿಸಿದ ಹಾಗೂ ರಾಜಕೀಯ ಕುರಿತ ಜಾಹೀರಾತುಗಳನ್ನು ಪ್ರಕಟಿಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 10 ದಿನಗಳೊಳಗಾಗಿ ರ 163.62 ಕೋಟಿ ಹಿಂತಿರುಗಿಸುವಂತೆ ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ದೆಹಲಿಯಲ್ಲಿ ಆಮ್ಆದ್ಮಿ ಮತ್ತು ಕೇಂದ್ರದ ನಡುವಿನ ಹಗ್ಗಜಗ್ಗಾಟದಲ್ಲಿ ಇದೊಂದು ಹೊಸ ಅಧ್ಯಾಯವಾಗಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ನಿರ್ದೇಶನದಂತೆ ದಿ ಡೈರೆಕ್ಟರ್ ಆಫ್ ಇನ್ಫಾರ್ಮೆಷನ್ ಅಂಡ್ ಪಬ್ಲಿಸಿಟಿ ಆಮ್ ಆದ್ಮಿ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ನಲ್ಲಿ ಮುಂದಿನ 10 ದಿನಗಳ ಒಳಗಾಗಿ ರೂ.163.62 ಕೋಟಿ ಹಿಂತಿರುಗಿಸುವಂತೆ ಸೂಚಿಸಿದ್ದು, ಒಂದು ವೇಳೆ ಹಿಂತಿರುಗಿಸದೇ ಹೋದಲ್ಲಿ ಪಕ್ಷದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

2017ರ ಮಾರ್ಚ್ 31ರ ವರೆಗೆ ಜಾಹೀರಾತುಗಳಿಗಾಗಿ ಆಮ್ ಆದ್ಮಿ ಪಕ್ಷ 99.32 ಕೋಟಿ ಖರ್ಚು ಮಾಡಿದ್ದು, ಉಳಿದ 64.30 ಕೋಟಿ ಇದರ ಮೇಲಿನ ಬಡ್ಡಿಯ ಮೊತ್ತವಾಗಿದೆ ಎಂದು ವರದಿಗಳು ತಿಳಿಸಿವೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷವು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷವನ್ನು ಗುರಿಯಾಗಿಸಲು ಲೆಫ್ಟಿನೆಂಟ್ ಗವರ್ನರ್ ಮತ್ತು ಬಿಜೆಪಿ ಸೇರಿಕೊಂಡು ದೆಹಲಿ ಸರ್ಕಾರದ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡಿವೆ ಎಂದು ಆರೋಪಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ದೆಹಲಿಯಲ್ಲಿ ಕೇಂದ್ರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿದ್ದು, ಉದ್ದೇಶಪೂರ್ವಕವಾಗಿ ದೆಹಲಿ ಸರ್ಕಾರವನ್ನು ಪ್ರತಿ ಹಂತದಲ್ಲೂ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸೇವಾ ಇಲಾಖೆಯ ಮೇಲೆ ಹಿಡಿತ ಸಾಧಿಸುತ್ತಿದ್ದು, ನಮ್ಮ ವಿರುದ್ಧ ಅಧಿಕಾರಿಗಳನ್ನು ಬಳಸುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿಯನ್ನು ಗುರಿಯಾಗಿಸಲು ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಬಿಜೆಪಿ ನಿಲ್ಲಿಸಬೇಕು. ನಮಗೆ ನಮ್ಮ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ಹೇಳಿದ್ದಾರೆ.

ಎಎಪಿಯ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಅವರು ಮಾತನಾಡಿ ‘ನಾವು ರಾಷ್ಟ್ರೀಯ ಪಕ್ಷವಾಗಿ ಮಾರ್ಪಟ್ಟಿದ್ದೇವೆ ಮತ್ತು ಎಂಸಿಡಿಯಲ್ಲಿ ಅಧಿಕಾರವನ್ನು ಕಸಿದುಕೊಂಡಿದ್ದೇವೆ. ಇದು ಬಿಜೆಪಿಯನ್ನು ಗಲಿಬಿಲಿಗೊಳ್ಳುವಂತೆ ಮಾಡಿದೆ. ಎಲ್‌ಜಿ ಸಾಹೇಬರು ಬಿಜೆಪಿಯ ನಿರ್ದೇಶನದಂತೆ ಎಲ್ಲವನ್ನೂ ಮಾಡುತ್ತಿದ್ದಾರೆ ಮತ್ತು ಇದು ದೆಹಲಿಯ ಜನರನ್ನು ತೊಂದರೆಗೆ ಸಿಲುಕಿಕೊಳ್ಳುವಂತೆ ಮಾಡುತ್ತಿದೆ. ಈ ಬೆಳವಣಿಗೆಯಿಂದ ದೆಹಲಿ ಜನತೆ ಹೆಚ್ಚು ಚಿಂತಿತರಾಗಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರ ಈ ಆದೇಶವು ಕಾನೂನಿನ ಪ್ರಕಾರ ನಿಲ್ಲುವುದಿಲ್ಲ’ ಎಂದಿದ್ದಾರೆ. ಅಲ್ಲದೆ ಮುಂದುವರೆದು ಲೆಫ್ಟಿನೆಂಟ್ ಗವರ್ನರ್ ಆದೇಶವನ್ನು “ಹೊಸ ಪ್ರೇಮ ಪತ್ರ” ಎಂದು ವ್ಯಂಗ್ಯವಾಡಿದ್ದಾರೆ.

1 Comment
  1. www.ecobij.nl says

    Howdy! Do you know if they make any plugins to assist with SEO?

    I’m trying to get my website to rank for some targeted keywords but
    I’m not seeing very good results. If you know of any please share.
    Cheers! I saw similar blog here: Eco wool

Leave A Reply

Your email address will not be published.