ಅವಿದ್ಯಾವಂತ ಮಹಿಳೆಯರಿಂದ ಜನಸಂಖ್ಯೆ ಹೆಚ್ಚಳ ಎಂದ ನಿತೀಶ್ ಕುಮಾರ್! ಗಂಡಸರು ಎಚ್ಚೆತ್ತುಕೊಂಡು ಜನಸಂಖ್ಯೆ ನಿಯಂತ್ರಣ ಮಾಡಬೇಕಂತೆ!

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವ ಭರದಲ್ಲಿ ಮಹಿಳೆ ಹಾಗೂ ಪುರುಷರ ಕುರಿತು ಹೇಳಿರುವ ಅಭಿಪ್ರಾಯದಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ.

 

ಮಹಿಳೆಯರು ವಿದ್ಯಾವಂತರಲ್ಲ, ಅವರಿಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ ಮತ್ತು ಪುರುಷರು ಈ ವಿಷಯದಲ್ಲಿ ಅಸಡ್ಡೆ ತೋರುವುದರಿಂದ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಹೇಳುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿವಾದಕ್ಕೆ ಕಾರಣರಾಗಿದ್ದಾರೆ. ಜನತಾ ದಳ-ಯುನೈಟೆಡ್ (ಜೆಡಿಯು) ಮುಖ್ಯಸ್ಥರು ಶನಿವಾರ ನಡೆಸುತ್ತಿರುವ ಸಮಾಧಾನ್ ಯಾತ್ರೆಯ ನಡುವೆ ವೈಶಾಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನಿತೀಶ್‌ ಕುಮಾರ್‌ ಈ ಹೇಳಿಕೆ ನೀಡಿದ್ದಾರೆ.

ಮಹಿಳೆಯರು ಶಿಕ್ಷಿತರಾಗಿದ್ದರೆ ತಾವು ಗರ್ಭಿಣಿಯಾಗದಂತೆ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ತಿಳಿದಿರುತ್ತಿತ್ತು. ಆದ್ರೆ ಮಹಿಳೆಯರು ಸರಿಯಾಗಿ ಶಿಕ್ಷಣ ಪಡೆಯದ ಕಾರಣ, ಜನಸಂಖ್ಯೆ ನಿಯಂತ್ರಿಸಲು ಅವರಿಂದ ಆಗುತ್ತಿಲ್ಲ. ಒಂದು ವೇಳೆ ಮಹಿಳೆಯರು ಉತ್ತಮ ಶಿಕ್ಷಣ ಪಡೆದಿದ್ದರೆ ಅಥವಾ ಅವರಿಗೆ ತಿಳುವಳಿಕೆ ಇದ್ದಿದ್ದರೆ, ಅವರು ಗರ್ಭಿಣಿಯಾಗದಂತೆ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿರುತ್ತಿದ್ದರು. ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ತಮ್ಮ ಹೇಳಿಕೆಯಲ್ಲಿ ಮಹಿಳೆಯರನ್ನು ಅವಹೇಳನ ಮಾಡಿದ್ದಾರೆಂದು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಬಿಹಾರ ಸಿಎಂ ಅವರ ವಿವಾದಾತ್ಮಕ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿಯು ಟೀಕಿಸಿದೆ. ಅವರ ಅಸಭ್ಯ ಭಾಷೆ ಮತ್ತು ಮುಖ್ಯಮಂತ್ರಿಯಾಗಿ ಸಾರ್ವಜನಿಕವಾಗಿ ಈ ರೀತಿ ಮಾತನಾಡಿರುವುದು ರಾಜ್ಯದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಹೇಳಿವೆ. ರಾಜ್ಯದಲ್ಲಿ ಫಲವತ್ತತೆ ದರವನ್ನು ವಿವರಿಸಲು ಅನುಚಿತ ಭಾಷೆಯನ್ನು ಬಳಸಿದ್ದಕ್ಕಾಗಿ ನಿತೀಶ್‌ ಕುಮಾರ್‌ ಅವರು ತಮ್ಮ ಹುದ್ದೆಗೆ ಕಳಂಕ ತಂದಿದ್ದಾರೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿವೆ.

ಬಿಹಾರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಅವರು, ಸಾರ್ವಜನಿಕವಾಗಿ ಅಸಭ್ಯ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪಿಸಿ ನಿತೀಶ್​ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಅವರು ಬಳಸಿರುವ ಅಸಭ್ಯ ಪದಗಳು ಅಸೂಕ್ಷ್ಮತೆಯ ಪರಮಾವಧಿಯಾಗಿದೆ. ಇಂತಹ ಪದಗಳನ್ನು ಬಳಸುವ ಮೂಲಕ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

Leave A Reply

Your email address will not be published.