ಭಾರತದ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳಲಿದ್ದಾರೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ| ಕೊನೆಯ ಪಂದ್ಯ ಯಾವಾಗ, ಎಲ್ಲಿ ಗೊತ್ತಾ?
ಭಾರತದ ಟೆನ್ನಿಸ್ ಲೋಕದಲ್ಲಿ ಮಿಂಚಿದ ಟೆನ್ನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಇದೀಗ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳಲು ಮುಂದಾಗಿದ್ದಾರೆ. ಈ ಕುರಿತು ತಾವೇ ಸ್ಪಷ್ಟೀಕರಣ ನೀಡಿದ್ದು, ಕೊನೆಯದಾಗಿ ಒಂದು ಪಂದ್ಯವನ್ನು ಆಡುವುದಾಗಿಯೂ ತಿಳಿಸಿದ್ದಾರೆ. ಹಾಗಾದರೆ ಯಾವಾಗ ಆ ಕೊನೆಯ ಪಂದ್ಯ ನಡೆಯುವುದು, ಸಾನಿಯಾ ಯಾವಾಗ ನಿವೃತ್ತಿ ಆಗುತ್ತಾರೆ ಗೊತ್ತ? ಈ ಸ್ಟೋರಿ ನೋಡಿ.
ಡಬ್ಲ್ಯುಟಿಎ ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳುವ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಕೊನೆಯ ಬಾರಿಗೆ ಟೆನಿಸ್ ಅಂಗಳಕ್ಕಿಳಿಯುವುದು ಯಾವಾಗ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. ಹೌದು, ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯಲಿರುವ ಡಬ್ಲ್ಯುಟಿಎ 1000 ಈವೆಂಟ್ ತನ್ನ ಕೊನೆಯ ಪಂದ್ಯಾವಳಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಅವರು ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ನನ್ನ ಸ್ವಂತ ಯೋಚನೆಗಳ ಮೇಲೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಹಾಗಾಗಿ ನಾನು ಗಾಯದ ಸಮಸ್ಯೆಯಿಂದ ಹೊರಗುಳಿಯಲು ಬಯಸದೆ ಇನ್ನು ತರಬೇತಿ ಪಡೆಯುತ್ತಿದ್ದೇನೆ. ಇದೇ ವೇಳೆ ಮೂರು ವರ್ಷದ ಮಗನ ಜೊತೆಗೆ ಸಮಯ ಕಳೆಯಬೇಕಿದೆ. ನನ್ನ ಟೆನಿಸ್ ಪ್ರಯಾಣದಲ್ಲಿ ಆತನ ಕುರಿತು ಹೆಚ್ಚು ಗಮನ ಹರಿಸಲು ಸಾಧ್ಯವಾಗಿಲ್ಲ. ಮಗನ ವಿಚಾರ ಕೂಢ ಗಣನೆಗೆ ತೆಗೆದುಕೊಳ್ಳಬೇಕಾದ ವಿಷಯ. ಹೀಗಾಗಿ ಎಲ್ಲಾ ವಿಚಾರಗಳ ಸಲುವಾಗಿ ಆಲೋಚಿಸಿ ದುಬೈನಲ್ಲಿ ನಡೆಯುವ ಟೆನಿಸ್ ಚಾಂಪಿಯನ್ಶಿಪ್ ಬಳಿಕ ನಾನು ವೃತ್ತಿ ಬದುಕಿಗೆ ವಿದಾಯ ಹೇಳುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಸಾನಿಯಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು ವಿಂಬಲ್ಡನ್ ಅವರ ಕೊನೆಯ ಪಂದ್ಯ ಎಂದು ಹೇಳಿದ್ದರು. ಆದರೆ ಮಿಶ್ರ ಡಬಲ್ಸ್‌ನ ಸೆಮಿ-ಫೈನಲ್‌ನಲ್ಲಿ ಸೋಲನುಭವಿಸಿದ್ದ ಸಾನಿಯಾ ಟೂರ್ನಿಯಿಂದ ಬರಿಗೈಯಲ್ಲಿ ವಾಪಸ್ಸಾಗಿದ್ದರು ಜೊತೆಗೆ ಈ ಸಮಯದಲ್ಲಿ ಮೊಣಕೈ ಗಾಯ ಕೂಡ ಆಗಿತ್ತು. ಬಳಿಕ ನಿವೃತ್ತಿ ನಿರ್ಧಾರದಿಂದ ಯು ಟರ್ನ್ ತೆಗೆದುಕೊಂಡಿದ್ದ ಸಾನಿಯಾ ಗಾಯದ ಕಾರಣ ನೀಡಿ ಸ್ವಲ್ಪ ಸಮಯದವರೆಗೆ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಲು ನಿರ್ಧರಿಸಿದ್ದರು.
2009ರಲ್ಲಿ ಮೊದಲ ಬಾರಿ ಗ್ರ್ಯಾಂಡ್ ಸ್ಲಮ್ ಪ್ರಶಸ್ತಿ ಗೆದ್ದ ಸಾನಿಯಾ ಬಳಿಕ ಭಾರತದ ಅದೆಷ್ಟೋ ಟೆನಿಸ್ ತಾರೆಯರಿಗೆ ಸ್ಪೂರ್ತಿಯಾಗಿ ಭಾರತದ ಐಕಾನ್ ಆಗಿ ಹೊರ ಹೊಮ್ಮಿದರು. ತನ್ನ ವೃತ್ತಿ ಬದುಕಿನಲ್ಲಿ ಸಾನಿಯಾ ಡಬಲ್ಸ್‌ನಲ್ಲಿ 3 ಮತ್ತು ಮಿಶ್ರ ಡಬಲ್ಸ್‌ನಲ್ಲಿ 3 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿದ್ದಾರೆ. ಹಾಗೆಯೇ 2016 ರ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದು, ಇದು ಸಾನಿಯಾ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ತಾಯಿಯಾದ ಬಳಿಕವೂ ತಮ್ಮ ವೃತ್ತಿ ಜೀವನ ಆರಂಭಿಸಿ ಗಮನಸೆಳೆದರು.
ನಿವೃತ್ತಿ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ದುಬೈನಲ್ಲಿರುವ ತನ್ನ ಅಕಾಡೆಮಿಯತ್ತ ಗಮನ ಹರಿಸಲು ಬಯಸುತ್ತೇನೆ ಎಂದಿದ್ದಾರೆ.