ಇನ್ಮುಂದೆ ಶಾಲೆಗಳಲ್ಲಿ ಚಿಕನ್, ಮೊಟ್ಟೆ, ಹಣ್ಣು ಸಿಗಲಿದೆ, ಈ ರಾಜ್ಯದ ಶಾಲೆಯ ಮಕ್ಕಳಿಗೆ ಸಿಹಿ ಸುದ್ದಿ
ಸರ್ಕಾರವು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪ್ರೇರೆಪಿಸಲು ಹಲವಾರು ಯೋಜನೆಗಳನ್ನು ತಂದಿದೆ. ಸರ್ಕಾರಿ ಶಾಲೆಗಳಿಂದ ಅನೇಕ ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪ್ರೋತ್ಸಾಹಿಸಲು ಉತ್ತಮ ಶಿಕ್ಷಣದ ಜೊತೆಗೆ ಸಮವಸ್ತ್ರ, ಪಠ್ಯಪುಸ್ತಕ, ಹಾಲು, ಮಧ್ಯಾಹ್ನದ ಬಿಸಿಊಟ ಎಲ್ಲವನ್ನೂ ಉಚಿತವಾಗಿಯೇ ನೀಡುತ್ತಿದೆ. ಇದೀಗ ಮಕ್ಕಳು ಇನ್ನಷ್ಟು ಪೌಷ್ಟಿಕತೆಯಿಂದ ಇರಬೇಕು ಎನ್ನುವ ಉದ್ದೇಶದಿಂದ ಶಾಲೆಗಳಲ್ಲಿ ಮಧ್ಯಾಹ್ನದ ಭೋಜನದ ಜೊತೆಗೆ ಇನ್ಮುಂದೆ ಚಿಕನ್, ಮೊಟ್ಟೆ, ಹಣ್ಣುಗಳು ಸಿಗಲಿದೆ!!
ಹೌದು, ಪಶ್ಚಿಮ ಬಂಗಾಳ ಸರ್ಕಾರವು ಪಿಎಂ ಪೋಷಣ್ ಯೋಜನೆ ಅಡಿಯಲ್ಲಿ ಮಕ್ಕಳಿಗೆ ವಾರದಲ್ಲಿ ಒಮ್ಮೆ ಚಿಕನ್, ಮೊಟ್ಟೆ ಹಾಗೂ ಆಯಾ ಕಾಲದ ಹಣ್ಣುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಎಂದಿನಂತೆ, ಅನ್ನ, ಸಾಂಬಾರ್, ಆಲೂಗಡ್ಡೆ, ಸೋಯಾಬೀನ್ ನೀಡುವುದು ಮುಂದುವರಿಯುತ್ತದೆ.
ಜನವರಿಯಿಂದ ನಾಲ್ಕು ತಿಂಗಳವರೆಗೆ ಚಿಕನ್ ಹಾಗೂ ಹಣ್ಣು ನೀಡಲು ತೀರ್ಮಾನಿಸಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು 371 ಕೋಟಿ ರೂ. ವ್ಯಯಿಸಲಿದೆ. ಇದರಿಂದ ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳ 1.16 ಕೋಟಿ ಮಕ್ಕಳಿಗೆ ಮಧ್ಯಾಹ್ನದ ಪುಷ್ಕಳ ಭೋಜನವನ್ನು ಸವಿಯುವ ಅವಕಾಶವಿದೆ.
ಶೀಘ್ರದಲ್ಲಿಯೇ ಗ್ರಾ.ಪಂ. ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವು ಮಹತ್ವವನ್ನು ಪಡೆದಿದೆ.ಆದರೆ ಈ ಯೋಜನೆಯನ್ನು ಬಿಜೆಪಿಯು ಕಟುವಾಗಿ ಆಕ್ಷೇಪಿಸಿದ್ದು, ಗ್ರಾ.ಪಂ. ಹಾಗೂ ಲೋಕಸಭೆ ಚುನಾವಣೆಗಾಗಿ ಮಮತಾ ಬ್ಯಾನರ್ಜಿ ಸರ್ಕಾರ ಈ ತೀರ್ಮಾನವನ್ನು ಕೈಗೊಂಡಿದೆ ಎಂಬುದಾಗಿ ಟೀಕಿಸಿದೆ.