Canara Bank : ಕೆನರಾ ಬ್ಯಾಂಕ್ ಗ್ರಾಹಕರಿಗೆ ಮಹತ್ವವಾದ ಮಾಹಿತಿ
ಹೇಳಿ ಕೇಳಿ ಡಿಜಿಟಲ್ ಯುಗ.. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ವ್ಯವಹಾರಗಳನ್ನು ನಡೆಸಲು ಬ್ಯಾಂಕ್ಗಳು ಅತ್ಯವಶ್ಯಕವಾಗಿದೆ. ಮೊಬೈಲ್ ಎಂಬ ಮಾಯಾವಿಯ ಮೂಲಕ ಕ್ಷಣ ಮಾತ್ರದಲ್ಲಿ ಕೆಲಸವನ್ನು ಸಲೀಸಾಗಿ ಮಾಡಲು ಅನುವು ಮಾಡಿಕೊಟ್ಟಿದೆ.
ಹೊಸ ವರ್ಷದ ಹೊಸ್ತಿಲಲ್ಲಿ ಕೆನರಾ ಬ್ಯಾಂಕ್ 9 ಸೇವೆಗಳ ಶುಲ್ಕಗಳನ್ನು ಪರಿಷ್ಕರಣೆ ಮಾಡಿದ್ದು, ಇದು ಗ್ರಾಹಕರ ಮೇಲೆ ಪ್ರಭಾವ ಬೀರುವ ಲಕ್ಷಣಗಳು ದಟ್ಟವಾಗಿವೆ.
ನೀವು ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ಈ ಮಾಹಿತಿ ಅರಿತಿರುವುದು ಅವಶ್ಯಕ. ಹೊಸ ವರ್ಷದ ಸಂಭ್ರಮದ ನಡುವೆ ಸರ್ಕಾರಿ ವಲಯದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ.
ಹೌದು!!.. ತನ್ನ ಒಂಬತ್ತು ಸೇವೆಗಳಿಗೆ ವಿಧಿಸುವ ಶುಲ್ಕವನ್ನು ಪರಿಷ್ಕರಣೆ ಮಾಡಿದ್ದು ಅಲ್ಲದೆ, ಬ್ಯಾಂಕ್ ಜಾರಿಗೊಳಿಸಿರುವ ಈ ಹೊಸ ದರಗಳು ಫೆಬ್ರವರಿ 3 ರಿಂದ ಜಾರಿಯಾಗಲಿದೆ ಎನ್ನಲಾಗುತ್ತಿದೆ.ಇದರ ಜೊತೆಗೆ ಕೆಲವು ಕ್ರೆಡಿಟ್ ಅಲ್ಲದ, ಫಾರೆಕ್ಸ್ ಅಲ್ಲದ ಸಂಬಂಧಿತ ಸೇವೆಗಳಿಗೆ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ.
ಕೆನರಾ ಬ್ಯಾಂಕ್ನ ಈ 9 ಸೇವೆಗಳಿಗೆ ಶುಲ್ಕ ಪರಿಷ್ಕರಣೆ ಮಾಡಲಿದ್ದು, ಕೆನರಾ ಬ್ಯಾಂಕ್ನ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿ ಅನುಸಾರ, ಕೆನರಾ ಬ್ಯಾಂಕ್ ಗ್ರಾಹಕರು ಈಗ ಚೆಕ್ ರಿಟರ್ನ್ , ಇಸಿಎಸ್ ಡೆಬಿಟ್ ರಿಟರ್ನ್ ಶುಲ್ಕಗಳು, ಸರಾಸರಿ ಕನಿಷ್ಠ ಬ್ಯಾಲೆನ್ಸ್ (ಎಎಮ್ಬಿ), ಸರಾಸರಿ ಮಾಸಿಕ ಕನಿಷ್ಠ ಬ್ಯಾಲೆನ್ಸ್ನ ನಿರ್ವಹಣೆ ಮಾಡದಿರುವುದು, ಲೆಡ್ಜರ್ ಫೋಲಿಯೊ ಶುಲ್ಕಗಳು, ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಮೂಲಕ ಹಣ ವರ್ಗಾವಣೆ (ಐಎಂಪಿಎಸ್ ವರ್ಗಾವಣೆ) ಮೊದಲಾದವುಗಳನ್ನು ಬ್ಯಾಂಕ್ ಪರಿಷ್ಕೃತ ಶುಲ್ಕಕ್ಕೆ ಸೇರಿಸಿದೆ ಎನ್ನಲಾಗಿದೆ.
ಬ್ಯಾಂಕ್ ಖಾತೆಯಲ್ಲಿ ಹೆಸರನ್ನು ಸೇರಿಸಲು ಇಲ್ಲವೇ ತೆಗೆದು ಹಾಕಲು 100 ರೂ. ಶುಲ್ಕದ ಜೊತೆಗೆ ಜಿಎಸ್ಟಿ ಶುಲ್ಕವನ್ನು ವಿಧಿಸಲಾಗುತ್ತದೆ. ಇದರ ಜೊತೆಗೆ ಈ ಶುಲ್ಕವು ವಿಂಡೋ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅನ್ವಯವಾಗುತ್ತದೆ. ಜಾಯಿಂಟ್ ಅಕೌಂಟ್ನಲ್ಲಿರುವ ಗ್ರಾಹಕರ ಸಾವಿನ ಹಿನ್ನೆಲೆ ಹೆಸರನ್ನು ತೆಗೆದು ಹಾಕಲು ಯಾವುದೇ ಶುಲ್ಕ ಅನ್ವಯವಾಗದು. ಆನ್ಲೈನ್ ಮೋಡ್ನಲ್ಲಿ ಯಾವುದೇ ಶುಲ್ಕ ವಿರುವುದಿಲ್ಲ ಎಂಬುದನ್ನು ಗಮನಿಸಬೇಕು.
ಕೆನರಾ ಬ್ಯಾಂಕ್ ವೆಬ್ಸೈಟ್ ಮಾಹಿತಿ ಅನುಸಾರ, ಎಟಿಎಂ ಮೂಲಕ ತಿಂಗಳಿಗೆ ನಾಲ್ಕು ಬಾರಿ ಹಣ ಡ್ರಾ ಮಾಡಲು ಯಾವ ರೀತಿಯ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. ಇದರ ಬಳಿಕ, ಪ್ರತಿ ವಹಿವಾಟಿನ ಮೇಲೆ ರೂ. 5 ಜೊತೆಗೆ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಮೊಬೈಲ್ ಸಂಖ್ಯೆ, ಇ-ಮೇಲ್ ಮತ್ತು ವಿಳಾಸ ಇತ್ಯಾದಿಗಳನ್ನು ಬದಲಾಯಿಸಲು ಸಹ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಸರಾಸರಿ ಕನಿಷ್ಠ ಬ್ಯಾಲೆನ್ಸ್ (AMB):
ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಪ್ರದೇಶದ ಅನುಸಾರ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕಾಗಿದ್ದು, ಮಿನಿಮಮ್ ಬ್ಯಾಲೆನ್ಸ್ ನಿರ್ವಹಿಸಲು ಆಗದೇ ಇದ್ದರೆ ದಂಡ ವಿಧಿಸಲಾಗುತ್ತದೆ. ಈ ಮೊತ್ತವನ್ನು ನಿರ್ವಹಿಸದಿದ್ದರೆ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ 25 ರಿಂದ 45 ರೂ ಮತ್ತು ಜಿಎಸ್ಟಿ ದಂಡವನ್ನು ವಿಧಿಸಲು ಬ್ಯಾಂಕ್ ತೀರ್ಮಾನ ಕೈಗೊಂಡಿದೆ.
ನಗರ/ಮೆಟ್ರೋ ನಗರಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ ರೂ. 2000/- ಆಗಿರಲಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ ರೂ. 500/- ಆಗಿರಲಿದೆ.
ಸೆಮಿ ಅರ್ಬನ್ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ ರೂ. 1000/- ಆಗಿರಲಿದೆ
ಇದರ ಜೊತೆಗೆ ತಾಂತ್ರಿಕ ಕಾರಣಗಳಿಂದಾಗಿ ಬ್ಯಾಂಕಿಗೆ ಚೆಕ್ ಅನ್ನು ಹಿಂದಿರುಗಿಸಿದರೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಆದರೆ, ಯಾವುದಾದರು ಬದಲಾವಣೆ ಆದಲ್ಲಿ, 1000 ರೂ. ಕ್ಕಿಂತ ಕಡಿಮೆ ಚೆಕ್ಗೆ ರೂ. 200 ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
1 ಕೋಟಿ ರೂ. ಹಾಗೂ ಅದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ರೂ. 2000/- ಶುಲ್ಕವನ್ನು ಪಾವತಿಸಬೇಕಾಗುತ್ತದೆ.
1000 ರಿಂದ 10 ಲಕ್ಷ ರೂ.ವರೆಗಿನ ಮೊತ್ತಕ್ಕೆ ಈ 300 ರೂ. ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
10 ಲಕ್ಷ ರೂ.ಗಳಿಂದ ಹೆಚ್ಚು ಮತ್ತು 50 ಲಕ್ಷ ರೂ.ಗಿಂತ ಕಡಿಮೆ ಮೊತ್ತಕ್ಕೆ ರೂ. 500/- ಶುಲ್ಕ ಪಾವತಿ ಮಾಡಬೇಕಾಗಿದೆ.
50 ಲಕ್ಷ ರೂ.ಗಳಿಗಿಂತ ಹೆಚ್ಚು 1 ಕೋಟಿ ರೂ.ಗಿಂತ ಕಡಿಮೆ ಮೊತ್ತಕ್ಕೆ ರೂ. 1000/- ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಹೀಗಾಗಿ, ನೀವು ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ಮೇಲೆ ತಿಳಿಸಿದ ವಿಷಯಗಳ ಕುರಿತು ಗಮನ ಹರಿಸುವುದು ಒಳ್ಳೆಯದು. ಇಲ್ಲದೇ ಇದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.