ಭಾರತಕ್ಕೆ ಬರಲಿದೆ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್| ವಿದೇಶಿ ಪ್ರತಿಷ್ಟಿತ ವಿವಿ ಗಳ ಸ್ಥಾಪನೆಗೆ ಮೋದಿ ಆಲೋಚನೆ

ದೇಶದ ಅಭಿವೃದ್ಧಿಗಾಗಿ, ಪ್ರಗತಿಗಾಗಿ ಪ್ರಧಾನಿ ಮೋದಿ ಅವರು ವಿದೇಶಗಳೊಂದಿಗೆ ಒಂದಿಲ್ಲೊಂದು ಒಪ್ಪಂದವನ್ನು ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಪ್ರಧಾನಿ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆ ಕುರಿತು ಚಿಂತನೆ ನಡೆಸುತ್ತಿದ್ದಾರೆ.

 

ಫಾರಿನ್ ಎಜುಕೇಷನ್ ಎಂದರೆ ಹಾತೊರೆಯುವ ಭಾರತೀಯರಿಗೆ ಇದೀಗ ಸಂತೋಷದ ಸುದ್ಧಿಯೊಂದು ದೊರೆಯಲಿದೆ. ಹೌದು ಭಾರತದಲ್ಲಿ ಆಕ್ಸ್​ಫರ್ಡ್​, ಯೇಲ್​, ಸ್ಟ್ಯಾನ್‌ಫೋರ್ಡ್‌ನಂತಹ ಪ್ರತಿಷ್ಠಿತ ವಿದೇಶಿ  ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಆಲೋಚನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರವು ಕ್ಯಾಂಪಸ್‌ಗಳನ್ನು ತೆರೆಯಲು ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ.

ಈಗಾಗಲೇ ಕೆಲವು ವಿದೇಶಿ ವಿಶ್ವವಿದ್ಯಾಲಯಗು ಭಾರತೀಯ ಸಂಸ್ಥೆಗಳೊಂದಿಗೆ, ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆ ಹಾಗೂ ಸಹಭಾಗಿತ್ವವನ್ನು ಹೊಂದಿವೆ. ಇದರಿಂದ ವಿದ್ಯಾರ್ಥಿಗಳು ಭಾರತದಲ್ಲಿ ಭಾಗಶಃ ಅಧ್ಯಯನ ಮಾಡಿ, ವಿದೇಶದ ಮುಖ್ಯ ಕ್ಯಾಂಪಸ್‌ನಲ್ಲಿ ತಮ್ಮ ಪದವಿಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಂತಾಗಿದೆ. ಆದರೆ ವಿಶ್ವವಿದ್ಯಾಲಯ ಗಳ ಕ್ಯಾಂಪಸ್ ಕೂಡ ಭಾರತದಲ್ಲಿದ್ದರೆ ಭಾರತೀಯ ವಿದ್ಯಾರ್ಥಿಗಳು ಕೈಗೆಟುಕುವ ವೆಚ್ಚದಲ್ಲಿ ವಿದೇಶಿ ವಿದ್ಯಾರ್ಹತೆಗಳನ್ನು ಪಡೆಯಲು ಮತ್ತು ಭಾರತವನ್ನು ಆಕರ್ಷಕ ಜಾಗತಿಕ ಅಧ್ಯಯನ ತಾಣವನ್ನಾಗಿ ಮಾಡಲು ಸಹಕಾರಿಯಾಗುತ್ತದೆ ಎಂಬುದು ಪ್ರಧಾನಿ ಯವರ ಆಲೋಚನೆಯಾಗಿದೆ.

ಭಾರತವು ತನ್ನ ವಿಶ್ವವಿದ್ಯಾನಿಲಯಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳ ತರಲು ಪ್ರಯತ್ನ ನಡೆಸುತ್ತಿದೆ. ಈ ಸಮಯದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳು ನಮ್ಮ ಸ್ಥಳದಲ್ಲಿಯೇ ಇದ್ದರೆ ಭಾರತೀಯ ವಿಶ್ವವಿದ್ಯಾಲಯಗಳು ಅವರೊಂದಿಗೆ ಸ್ಪರ್ಧಿಸಬಹುದಾಗಿದೆ. ಈ ಸಂಬಂಧ ವಿದೇಶಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಕೂಡ ಭಾರತದಲ್ಲಿ ತಮ್ಮ ಸ್ವಂತ ಕ್ಯಾಂಪಸ್ ಸ್ಥಾಪನೆ ಮಾಡಲು ಉತ್ಸುಕವಾಗಿವೆ.

ಸರ್ಕಾರದ ಅನುಮೋದನೆ ದೊರೆತರೆ ಯಾವುದೇ ಸ್ಥಳೀಯ ಪಾಲುದಾರರಿಲ್ಲದೆ ಅವುಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯಬಹುದಾಗಿದೆ. ಈ ಕುರಿತು ಈಗಾಗಲೇ ಸಭೆಗಳು, ಚರ್ಚೆಗಳು ಆರಂಭವಾಗಿವೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಂತಿಮ ಕರಡನ್ನು ಕಾನೂನಾಗುವ ಮೊದಲು ಅದರ ಅನುಮೋದನೆಗಾಗಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಆಕ್ಸ್​ಫರ್ಡ್​, ಯೇಲ್​, ಸ್ಟ್ಯಾನ್‌ಫೋರ್ಡ್‌ನಂತಹ ಪ್ರತಿಷ್ಠಿತ ವಿದೇಶಿ  ವಿಶ್ವವಿದ್ಯಾಲಯಗಳ ಸ್ಥಾಪನೆ ಭಾರತದಲ್ಲಿ ಆಗುತ್ತದೆಯಾ ಎಂದು ಕಾದುನೋಡಬೇಕಿದೆ.

Leave A Reply

Your email address will not be published.