ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಉತ್ತಮ, ಆದರೆ ಈ ಸಮಸ್ಯೆ ಇರುವವರು ತಿಂದರೆ ಅಪಾಯ ತಪ್ಪಿದ್ದಲ್ಲ
ಪಪ್ಪಾಯಿ ಅಥವಾ ಪರಂಗಿಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ!!.. ಸಾಮಾನ್ಯವಾಗಿ ಎಲ್ಲ ಕಡೆ ಕಾಣಸಿಗುವ, ಎಲ್ಲಾ ಋತುಗಳಲ್ಲಿ ಲಭ್ಯವಿರುವ ಹಣ್ಣು ಈ ಪಪ್ಪಾಯಿ. ಇದರ ಆರೋಗ್ಯ ಪ್ರಯೋಜನಗಳು ಹಲವು. ಮಕ್ಕಳು, ದೊಡ್ಡವರು ಮತ್ತು ವಯಸ್ಸಾದವರು ಯಾವುದೇ ಹಿಂಜರಿಕೆಯಿಲ್ಲದೆ ಸೇವನೆ ಮಾಡಬಹುದು. ವಿಶೇಷವಾಗಿ ಈ ಹಣ್ಣು ತನ್ನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಹೊಂದಿರುವುದರಿಂದ ಕ್ಯಾನ್ಸರ್ ಕಾಯಿಲೆ ಇದ್ದವರು, ತೂಕ ಹೆಚ್ಚಿಸಿ ಕೊಂಡವರು, ಮುಟ್ಟಿನ ತೊಂದರೆ, ಕಣ್ಣುಗಳ ಆರೋಗ್ಯ ಹೀಗೆ ಅನೇಕ ವಿಧಗಳಲ್ಲಿ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಆದರೆ ನಿಮಗೆ ತಿಳಿದಿದೆಯೇ? ಇಷ್ಟೆಲ್ಲಾ ಉಪಯೋಗಿಯಾದ ಈ ಪಪ್ಪಾಯಿಯನ್ನು ಎಲ್ಲರೂ ಸೇವನೆ ಮಾಡೋ ಹಾಗಿಲ್ಲ!!
ಹೌದು, ಪಪ್ಪಾಯಿ ಹಣ್ಣಲ್ಲಿರುವ ಗುಣಗಳು, ಕೆಲವೊಂದು ಆರೋಗ್ಯ ಸಮಸ್ಯೆಯಿರುವವರ ಮೇಲೆ ಪರಿಣಾಮ ಬೀರಬಹುದು. ಹಾಗಾದರೆ ಯಾರವರು? ಯಾಕೆ ಈ ಹಣ್ಣಿನಿಂದ ಅವರು ದೂರ ಉಳಿಯಬೇಕು ಎನ್ನುವ ಬಗ್ಗೆ ತಿಳಿಯೋಣ ಬನ್ನಿ.
ಹೃದಯಿ ಸಂಬಂಧಿ ಕಾಯಿಲೆಯಿರುವವರು:- ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಇದ್ದವರು, ಈ ಹಣ್ಣನ್ನು ಸೇವನೆ ಮಾಡುವ ಮೊದಲು, ನಿಮ್ಮ ವೈದ್ಯರ ಬಳಿ ಕೇಳಿ, ಸಲಹೆಗಳನ್ನು ಪಡೆದುಕೊಂಡ ಬಳಿಕ ಸೇವನೆ ಮಾಡಿದರೆ ಬಹಳ ಉತ್ತಮ. ಏಕೆಂದರೆ ಪಪ್ಪಾಯಿ ಸೇವಿಸುವುದರಿಂದ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳಾದ ಹೃದಯದ ತೊಂದರೆ, ಹೈಬಿಪಿ, ಹೃದಯ ರಕ್ತನಾಳದ ಕಾಯಿಲೆಗಳು ಹೃದಯ ಬಡಿತ ಹಾಗೂ ಪಾರ್ಶ್ವವಾಯು ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ, ಪಪ್ಪಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಹೃದಯದ ಕಾರ್ಯವು ನಿಧಾನಗೊಂಡು ಸಾವಿಗೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ತಿಳಿಸಿವೆ.
ಗರ್ಭಿಣಿಯರಿಗೆ:- ಗರ್ಭಿಣಿಯರು ಆರೋಗ್ಯದ ವಿಷ್ಯದಲ್ಲಿ ಎಷ್ಟು ಕಾಳಜಿ ವಹಿಸುತ್ತಾರೆಯೋ ಅಷ್ಟು ಒಳ್ಳೆಯದು. ಅದರಲ್ಲೂ ತಮ್ಮಆಹಾರಪದ್ಧತಿಯ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಈ ವೇಳೆ ತನ್ನ ಗರ್ಭದಲ್ಲಿ ಮತ್ತೊಂದು ಜೀವವು ಬೆಳೆಯುತ್ತಿರುವ ಕಾರಣದಿಂದಾಗಿ ಗರ್ಭಿಣಿ ಯರು ತಿನ್ನುವ ಆಹಾರವು ಇಲ್ಲಿ ತುಂಬಾ ಮಹತ್ವ ಪಡೆದುಕೊಳ್ಳುವುದು. ಹೀಗಾಗಿ ಇಂತಹ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಪರಂಗಿ ಹಣ್ಣಿನಿಂದ ಸ್ವಲ್ಪ ದೂರವಿದ್ದರೆ ಒಳ್ಳೆಯದು.
ಏಕೆಂದರೆ ಪರಂಗಿ ಹಣ್ಣಿನ ಬೀಜಗಳಲ್ಲಿ ಮತ್ತು ಪರಂಗಿ ಮರದ ಬೇರುಗಳಲ್ಲಿ ಗರ್ಭಾಶಯದ ಕುಗ್ಗಿಸುವಿಕೆಗೆ ಕಾರಣ ಆಗುವ ಅಂಶಗಳಿವೆ. ಹೀಗಾಗಿ ಗರ್ಭಪಾತ ಆಗುವ ಸಂಭವ ಹೆಚ್ಚಿರುತ್ತದೆ. ಗರ್ಭಿಣಿ ಮಹಿಳೆಯರ ದೇಹದಲ್ಲಿ ಬೆಳವಣಿಗೆ ಆಗುತ್ತಿರುವ ಭ್ರೂಣದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಮಗು ಹುಟ್ಟಿದ ಮೇಲೂ ಕೂಡ ಜನನದ ನ್ಯೂನ್ಯತೆಗಳು ಮಗುವಿನಲ್ಲಿ ಕಂಡು ಬರುತ್ತವೆ ಎಂದು ಹೇಳುತ್ತಾರೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ನೋಡುವುದಾದರೆ ಪರಂಗಿ ಹಣ್ಣನ್ನು ಮತ್ತು ಬಾಣಂತನದ ಸಮಯದಲ್ಲಿ ಸ್ವಲ್ಪ ದಿನಗಳ ಕಾಲ ಸೇವಿಸದೇ ಇರುವುದು ಒಳ್ಳೆಯದು.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು:- ಮೊದಲೇ ಹೇಳಿದ ಹಾಗೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ಹೆಚ್ಚಿನ ಪ್ರಮಾಣ ದಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು ಅಪಾರ ಪ್ರಮಾಣ ದಲ್ಲಿ ಕಂಡು ಬರುವುದರಿಂದ, ಕ್ರಮೇಣವಾಗಿ ಇದು ದೇಹದಲ್ಲಿ ಶೇಖರಣೆ ಗೊಂಡು, ಕೊನೆಗೆ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಹೀಗಾಗಿ ಈಗಾಗಲೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಈ ಹಣ್ಣಿನಿಂದ ದೂರ ಇದ್ದರೆ ಒಳ್ಳೆಯದು. ಸಾಮಾನ್ಯವಾಗಿ ಅತಿಯಾಗಿ ವಿಟಮಿನ್ ಸಿ ಅಂಶ ದೇಹದೊಳಗೆ ಸೇರಿಕೊಂಡಾಗ, ಕ್ರಮೇಣವಾಗಿ ಕಿಡ್ನಿಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ ಇದರಿಂದಾಗಿ ಕಿಡ್ನಿಗಳಲ್ಲಿ ಕಲ್ಲುಗಳ ಪ್ರಮಾಣ ಕೂಡ ದಪ್ಪ ಆಗುತ್ತವೆ. ಹೀಗಾಗಿ ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು ಮೊದಲು ವೈದ್ಯರ ಬಳಿ ಸರಿಯಾಗಿ ವಿಚಾರಿಸಿ ಈ ಹಣ್ಣನ್ನು ಸೇವನೆ ಮಾಡಿದರೆ ಒಳ್ಳೆಯದು.
ಮಧುಮೇಹ:- ಒಮ್ಮೆ ಅಂಟಿದರೆ ಬಿಡದ ಕಾಯಿಲೆ ಎಂದರೆ ಅದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ. ಹೀಗಾಗಿ ಈ ಕಾಯಿಲೆ ಕಾಣಿಸಿಕೊಂಡ ಬಳಿಕ ಸರಿಯಾದ ಜೀವನಶೈಲಿ ಮತ್ತು ಆಹಾರಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಈ ಸಮಯದಲ್ಲಿ ಕೆಲವೊಂದು ಇಷ್ಟದ ಆಹಾರಗಳನ್ನು ತ್ಯಜಿಸಬೇಕು ಮತ್ತು ಇನ್ನು ಕೆಲವನ್ನು ಸೇರ್ಪಡೆ ಮಾಡಬೇಕು. ಇವೆಲ್ಲದರ ಜೊತೆಗೆ ವೈದ್ಯರು ನೀಡುವ ಸಲಹೆಗಳನ್ನು ಹಾಗೂ ಅವರು ನೀಡುವ ಮಾತ್ರೆ ಗಳನ್ನು ಚಾಚೂ ತಪ್ಪದೇ ಪಾಲಿಸಬೇಕು.
ಇನ್ನು ಹಣ್ಣುಗಳ ವಿಷ್ಯದಲ್ಲಿ ಹೇಳುವುದಾದರೆ, ಮಧುಮೇಹಿಗಳು ಆದಷ್ಟು ಪಪ್ಪಾಯಿ ಹಣ್ಣಿನಿಂದ ದೂರ ಇದ್ದರೆ ಒಳ್ಳೆಯದು. ಅದರಲ್ಲೂ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಉಳಿಯುವುದಿಲ್ಲ, ಅಂತಹವರು ಆದಷ್ಟು ಈ ಹಣ್ಣಿನಿಂದ ದೂರ ಇರಬೇಕು. ಕಾರಣ, ಈ ಹಣ್ಣಿನ ಸೇವನೆಯಿಂದ ಕೆಲವೊಮ್ಮೆ ರಕ್ತದಲ್ಲಿ ಸಕ್ಕರೆಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ಹೃದಯ ಬಡಿತವನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ ಕೈ ಕಾಲು ನಡುಗುವಂತೆ ಮಾಡುತ್ತದೆ. ಹೀಗಾಗಿ ಇಂತಹ ಜನರು ಪರಂಗಿ ಹಣ್ಣಿನ ಸೇವನೆಯಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿಕೊಂಡರೆ ಒಳ್ಳೆಯದು.
ಹೊಸಕನ್ನಡ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ: https://chat.whatsapp.com/E3HdgTy6UKkEx3dqXptHHo