ವಿಧಾನಸೌಧದಲ್ಲಿ 10.50 ಲಕ್ಷ ರೂ. ನಗದು ಹಣದ ಜೊತೆ ಸಿಕ್ಕಿಬಿದ್ದ ಎಇ
ಕುರುಡು ಕಾಂಚಾಣದ ಮಹಿಮೆಗೆ ಮರುಳಾಗದವರೆ ವಿರಳ. ಝಣ ಝಣ ಕಾಂಚಾಣ ಕೈ ಯಲ್ಲಿ ಇದ್ದರೆ ಜಗತ್ತಿನಲ್ಲಿ ಸಿಗುವ ಬೆಲೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಸಿಗಲು ಸಾಧ್ಯವಿಲ್ಲ ಅನ್ನೋದಂತು ಕಟುಸತ್ಯ. ಕೇಂದ್ರ ಭ್ರಷ್ಟಾಚಾರ, ಕಳ್ಳ ಸಾಗಣೆ ದಂಧೆ ತಡೆಗೆ ಅನೇಕ ಕ್ರಮಗಳನ್ನು ಜಾರಿಗೆ ತಂದರೂ ಕೂಡ ಅಕ್ರಮ ಕಾರ್ಯದಲ್ಲಿ ತೊಡಗಿರುವ ಚಾಣಾಕ್ಷರೂ ತಮ್ಮ ಬತ್ತಳಿಕೆಯ ಮೂಲಕ ಹೊಸ ಹೊಸ ಪ್ರಯೋಗ ಮಾಡಿ ತಮ್ಮ ಕಳ್ಳ ಮಾರ್ಗದಲ್ಲಿ ಸಲೀಸಾಗಿ ತೆರೆಮರೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೀಗ, ಅಕ್ರಮವಾಗಿ ವಿಧಾನಸೌಧಕ್ಕೆ 10 ಲಕ್ಷ ಹಣ ಸಾಗಿಸುತ್ತಿದ್ದ ವೇಳೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸಿಕ್ಕಿ ಬಿದ್ದ ಘಟನೆ ಬೆಳಕಿಗೆ ಬಂದಿದೆ.
ಬುಧವಾರ ಸಂಜೆ 7 ಗಂಟೆ ಸುಮಾರಿಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್(Assistant Engineer of Public Works Department) ಜಗದೀಶ್ ಎಂಬುವವರು ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನ ಶಕ್ತಿ ಸೌಧಕ್ಕೆ(Vidhana Soudha) 10.5 ಲಕ್ಷ ರೂ. ನಗದು ಸಾಗಿಸುತ್ತಿದ್ದ ವೇಳೆ ಸಹಾಯಕ ಇಂಜಿನಿಯರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭ ಮಂಡ್ಯ ಮೂಲದ ಜಗದೀಶ್ ಬ್ಯಾಗ್‌ನಲ್ಲಿ ದುಬಾರಿ ಮೊತ್ತದ ಹಣ ಪತ್ತೆಯಾಗಿದ್ದು, ಈ ಹಣದ ಮೂಲದ ಬಗ್ಗೆ ಕ
ಪೊಲೀಸರು ಪ್ರಶ್ನಿಸಿದ ಸಂದರ್ಭ ಯಾವುದೇ ನಿಖರ ಮಾಹಿತಿಯನ್ನು ಆ ವ್ಯಕ್ತಿ ಬಹಿರಂಗ ಪಡಿಸಿಲ್ಲ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸರು ಹಣದ ಜೊತೆ ಹಣ ಸಾಗಾಟ ಮಾಡುತ್ತಿದ್ದ ಅನುಮಾನಿತ ವ್ಯಕ್ತಿಯನ್ನು ವಶಕ್ಕೆ ಪಡೆದು ಈ ಘಟನೆಯ ಕುರಿತಾಗಿ ಎಫ್‌ಐಆರ್ ಕೂಡಾ ದಾಖಲು ಮಾಡಲಾಗಿದೆ. ಈ ನಡುವೆ ಅನುಮಾನಿತ ವ್ಯಕ್ತಿ ಇಷ್ಟು ಮೊತ್ತದ ಹಣವನ್ನು ವಿಧಾನಸೌಧಕ್ಕೆ ಏಕೆ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಪ್ರಶ್ನೆ ಭುಗಿಲೆದ್ದಿದೆ.
ತಾನು ಮಂಡ್ಯದಲ್ಲಿ ಕೆಲಸ ಮಾಡುತ್ತಿರುವುದಾಗಿ ಇಲ್ಲಿ ವಿಕಾಸ ಸೌಧದಲ್ಲಿ ಕೆಲಸ ಇದ್ದ ಕಾರಣ ತಂದಿರುವುದಾಗಿ ವ್ಯಕ್ತಿ ಹೇಳಿಕೆ ನೀಡಿದ್ದಾರೆ. ನಾವು ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದಿತ್ತು ಎಂದು ಜಗದೀಶ್ ತಿಳಿಸಿದ್ದಾರೆ. ಸದ್ಯ ಕೇಸ್ ದಾಖಲು ಮಾಡಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶ್ರೀನಿವಾಸ ಗೌಡ ಮಾಹಿತಿ ನೀಡಿದ್ದಾರೆ.
ಹಣದ ಮೂಲದ ಬಗ್ಗೆ ಅಲ್ಲದೆ ಇಷ್ಟು ದೊಡ್ಡ ಮೊತ್ತವನ್ನು ವಿಧಾನಸೌಧಕ್ಕೆ ತಂದಿದ್ದ ಹಿಂದಿನ ಮರ್ಮವೇನು?? ಯಾರಿಗೆ ನೀಡಲು ಹಣವನ್ನು ತಂದಿದ್ದ ಎಂಬ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದು, ಈ ಅನುಮಾನದ ಹಿಂದಿನ ಜಾಡು ಪತ್ತೆ ಹಚ್ಚುವಲ್ಲಿ ಖಾಕಿ ಪಡೆ ನಿರತವಾಗಿದೆ.
ಇನ್ನು ಈ ಘಟನೆ ಸಂಬಂಧ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಪ್ರತಿಕ್ರಿಯೆ ನೀಡಿದ್ದು, ಇಲಾಖೆಯ ಜೂನಿಯರ್ ಇಂಜಿನಿಯರ್ ಓರ್ವರು ಹಣದ ಸಹಿತ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ವಿಧಾನಸೌಧ ಮತ್ತು ವಿಕಾಸಸೌಧ ಭದ್ರತೆ ಪೊಲೀಸರು ವಶಕ್ಕೆ ಪಡೆದಿದ್ದು, ಈ ದೊಡ್ದ ಮೊತ್ತದ ಹಣದ ಬಗ್ಗೆ ಪ್ರಶ್ನೆ ಮಾಡಿದ್ದು ಯಾರಿಗೆ ನೀಡುವ ಸಲುವಾಗಿ ಕೊಂಡೊಯ್ಯುತ್ತಿದ್ದರು ಎಂಬ ಬಗ್ಗೆ ವ್ಯಕ್ತಿ ಸ್ಪಷ್ಟ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಹೀಗಾಗಿ, ವಿಧಾನಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದು, ದೂರಿನ ಅನ್ವಯ ಕೇಸ್ ದಾಖಲು ಮಾಡಲಾಗಿದೆ ಎನ್ನಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿ ಹತ್ತು ಲಕ್ಷದ ಐವತ್ತು ಸಾವಿರ ಹಣ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯಕ್ಕೆ ಹಣವನ್ನು ಹಾಜರು ಪಡಿಸಲಾಗುತ್ತದೆ. ಈ ನಡುವೆ ಹಣ ತಂದಿದ್ದ ವ್ಯಕ್ತಿಗೆ ನೋಟಿಸ್ ನೀಡಲಾಗಿದ್ದು, ಹಣದ ಮೂಲ, ಹಣ ತಂದ ಉದ್ದೇಶದ ಜೊತೆಗೆ ಯಾರಿಗೆ ಕೊಡುವ ಉದ್ದೇಶ ಇದೆ ಎಂಬುದನ್ನು ಮಾಹಿತಿ ನೀಡುವಂತೆ ಸೂಚನೆ ನೀಡುವಂತೆ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.