ಫೆಬ್ರವರಿ 17 ರಂದು ಸರ್ಕಾರದ ಕೊನೆಯ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ! ಏನೆಲ್ಲಾ ಯೋಜನೆಗಳ ಘೋಷಣೆಯಾಗಲಿದೆ ಗೊತ್ತಾ?

ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸಲು ನಿರ್ಧರಿಸಿದ್ದಾರೆ. ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವುದರೊಂದಿಗೆ ಈ ಬಾರಿ ಹೆಚ್ಚುವರಿ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಯಾವಾಗಲೂ ಪ್ರತಿ ವರ್ಷ ಜನವರಿ ತಿಂಗಳ 2ನೇ ವಾರದಲ್ಲಿ ನಡೆಯುವ ವರ್ಷದ ಜಂಟಿ ಅಧಿವೇಶನ ನಂತರ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಈ ಸಂಪ್ರದಾಯವನ್ನು ಕೈ ಬಿಟ್ಟ ಸರ್ಕಾರ ಜಂಟಿ ಅಧಿವೇಶನ ಮತ್ತು ಬಜೆಟ್ ಮಂಡನೆಯನ್ನು ಏಕಕಾಲದಲ್ಲಿ ನಡೆಸಲು ಮುಂದಾಗಿದೆ. ಈ ಸಲವೂ ಇದೇ ಸಂಪ್ರದಾಯ ಮುಂದುವರೆಯಲಿದ್ದು, ಫೆ16ರಂದು ಗುರುವಾರ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಸಿಎಂ ಬೊಮ್ಮಾಯಿ ಅವರು ಶುಕ್ರವಾರ ಬಜೆಟ್ ಮಂಡಿಸಿ ನಂತರ ಸೋಮವಾರದಿಂದ ಬಜೆಟ್ ಮೇಲೆ ಚರ್ಚೆ ಆರಂಭವಾಗಲಿದೆ.

ಪ್ರತೀ ವರ್ಷಕ್ಕಿಂತ ಈ ವರ್ಷದ ಆದಾಯ ಸಂಗ್ರಹದಲ್ಲಿ ಏರಿಕೆ ಕಂಡಿದ್ದು ರಾಜ್ಯದ ಆರ್ಥಿಕತೆಯಲ್ಲೂ ಚೇತರಿಕೆ ಕಂಡಿದೆ. ತೆರಿಗೆ ಮೂಲಗಳು ಕೂಡ ಗುರಿ ಮೀರಿ ಆದಾಯ ಸಂಗ್ರಹ ಮಾಡುತ್ತಿವೆ. 2022-23 ಸಾಲಿನ ಮೊದಲ ಅರ್ಧ ವರ್ಷದಲ್ಲಿ ರಾಜ್ಯದ ಬೊಕ್ಕಸಕ್ಕೆ 1 ಲಕ್ಷ ಕೋಟಿಗೂ ಅಧಿಕ ತೆರಿಗೆ ಬಂದು ಸೇರಿದೆ. ಇದರಲ್ಲಿ ಕೇಂದ್ರದ ಸಹಾಯಾನುದಾನ, ತೆರಿಗೆ ಪಾಲು ಸೇರಿದೆ. ಇತ್ತ ಜಿಎಸ್‍ಟಿ ಸಂಗ್ರಹ ನಿರೀಕ್ಷೆಗೂ ಮೀರಿ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹಿಸುವ ಎಲ್ಲ ಇಲಾಖೆಗಳು ಬಜೆಟ್ ನ ಗುರಿಯನ್ನು ಮೀರಿ ಆದಾಯ ಸಂಗ್ರಹಿಸುತ್ತಿರುವುದು ಸಿಎಂ ಬೊಮ್ಮಾಯಿ ಅವರಿಗೆ ಚುನಾವಣೆಯೂ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಬಜೆಟ್ ಮಂಡನೆಗೆ ಹಾದಿ ಸುಗಮವಾದಂತಾಗಿದೆ.

ಇತ್ತೀಚೆಗೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತಿತರರಿಗೆ ಬಜೆಟ್ ಮಂಡನೆಯ ಪೂರ್ವ ಸಿದ್ದತೆಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಎಂ ತಿಳಿಸಿದ್ದಾರೆಂದು ತಿಳಿದು ಬಂದಿದೆ. ಈ ತಿಂಗಳ 2ನೇ ವಾರದ ನಂತರ ಇಲಾಖಾವಾರು ಸಚಿವರು ಮತ್ತು ಅಧಿಕಾರಿಗಳ ಪ್ರಗತಿ ಪರಿಶೀಲನೆ ಕೂಡ ಆರಂಭವಾಗಲಿದೆ.

ಕಳೆದೆರಡು ವರ್ಷಗಳಿಂದ ಕೋವಿಡ್ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆದಾಯ ಕೊರತೆಯ ಬಜೆಟ್ ಮಂಡನೆಯಾಗಿತ್ತು. ಹೀಗಾಗಿ ಈ ಬಾರಿ ಹೆಚ್ಚುವರಿ ಬಜೆಟ್ ಮಂಡನೆ ಮಾಡಲು ಸಿಎಂ ಸಿದ್ಧತೆ ನಡೆಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

Leave A Reply

Your email address will not be published.