‘ಬಾಲ್ಯ ವಿವಾಹ ತಡೆಗೆ’ ಇನ್ನು ಮುಂದೆ ಮಹತ್ವದ ಕ್ರಮ!!!
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರ ಬಾಲ್ಯ ವಿವಾಹ ನಿಷೇಧ ಹೇರಿದ್ದರು ಕೂಡ ಅದನ್ನು ಲೆಕ್ಕಿಸದೇ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡಿಕೊಡುವ ಪ್ರಯತ್ನ ಈಗಲೂ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಬಾಲ್ಯ ವಿವಾಹ ತಡೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮದುವೆಯ ಕಡ್ಡಾಯ ನೋಂದಣಿ ಅಧಿಕಾರ ಗ್ರಾಮಪಂಚಾಯಿತಿಗಳಿಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಿದೆ.
ಗ್ರಾಮೀಣ ಭಾಗದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ ವಿವಾಹ ನೋಂದಣಿ ಅಧಿಕಾರ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೋಂದಣಿ ಅಧಿಕಾರ ವಹಿಸಿ 250 ರೂ. ಒಳಗೆ ಶುಲ್ಕ ನಿಗದಿ ಮಾಡಿ ನೋಂದಣಿ ಕಡ್ಡಾಯಗೊಳಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ ನೀಡಿದೆ ಎನ್ನಲಾಗಿದೆ.
ಪುಸ್ತಕ ಹಿಡಿಯ ಬೇಕಿದ್ದ ಅದೆಷ್ಟೊ ಕೈಗಳು ಓದಿಗೆ ವಿರಾಮ ಹೇಳಿ ಬಾಲ್ಯ ವಿವಾಹ ಆಗುತ್ತಿರುವ ಪ್ರಕರಣಗಳು ಕೂಡ ತೆರೆ ಮರೆಯಲ್ಲಿ ನಡೆಯುತ್ತಿವೆ. ಹೀಗಾಗಿ, ರಾಜ್ಯದಲ್ಲಿ ಬಾಲ್ಯ ವಿವಾಹಗಳು ಹೆಚ್ಚಳವಾಗುತ್ತಿದ್ದು, ಬಾಲ್ಯ ವಿವಾಹ ತಡೆಯಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮದುವೆಯ ನೋಂದಣಿಯನ್ನು ಗ್ರಾಮ ಪಂಚಾಯಿತಿ ಅಧಿಕಾರ ವ್ಯಾಪ್ತಿಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.